ಸಾರಾಂಶ
- ಸಚಿವ ಎಸ್ಸೆಸ್ಸೆಂ, ಸಂಸದೆ ಡಾ.ಪ್ರಭಾ ಆಶಯದಂತೆ ಕಾನೂನಾತ್ಮಕವಾಗಿ ಕ್ರಮ: ಡಿಸಿ ಗಂಗಾಧರ ಸ್ವಾಮಿ ಭರವಸೆ - - - - ಕೆಂಪು ಕಟ್ಟಡದಲ್ಲಿರುವ ಪಾಲಿಕೆ ಅಧಿಕಾರಿ, ಸಿಬ್ಬಂದಿಗೆ ಪಾಲಿಕೆಯಲ್ಲೇ ಪ್ರತ್ಯೇಕ ಜಾಗದ ವ್ಯವಸ್ಥೆ
- ಪ್ರಜಾಪ್ರಭುತ್ವ ವ್ಯವಸ್ಥೆಯ 4ನೇ ಅಂಗವಾದ ಪತ್ರಿಕಾ ರಂಗದ ಕೊಡುಗೆ ದೊಡ್ಡದು- ವರದಿಗಾರರ ಕೂಟಕ್ಕೆ ಜಾಗ ನೀಡಲು ಯಾವುದೇ ತೊಂದರೆಯೂ ಇಲ್ಲ
- ಜಿಲ್ಲಾಡಳಿತ ಭವನದಲ್ಲಿ ವರದಿಗಾರರ ಕೂಟದಿಂದ ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ- - - - ಕನ್ನಡಪ್ರಭ ವಾರ್ತೆ ದಾವಣಗೆರೆ
ದಾವಣಗೆರೆ ಜಿಲ್ಲಾ ವರದಿಗಾರರ ಕೂಟಕ್ಕೆ ಪಾಲಿಕೆಗೆ ಸೇರಿದ ಕೆಂಪು ಕಟ್ಟಡವನ್ನು ನೀಡಲು ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಭರವಸೆ ನೀಡಿದ್ದಾರೆ.ನಗರದ ಜಿಲ್ಲಾಡಳಿತ ಭವನದಲ್ಲಿ ಬುಧವಾರ ಜಿಲ್ಲಾ ವರದಿಗಾರರ ಕೂಟದ ಮನವಿ ಸ್ವೀಕರಿಸಿ ಮಾತನಾಡಿದ ಅವರು, 18 ವರ್ಷಗಳಿಂದಲೂ ವರದಿಗಾರರ ಕೂಟವು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಶಾಶ್ವತ ಕಟ್ಟಡ ಒದಗಿಸಲು ತಾವು ಬದ್ಧ ಎಂದರು. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಸಹ ಪಾಲಿಕೆ ಹಿಂಭಾಗದ ನೀರಿನ ಟ್ಯಾಂಕ್‌ಗೆ ಹೊಂದಿಕೊಂಡಿರುವ ಕೆಂಪು ಕಟ್ಟಡವನ್ನು ನೀಡಲು ಸೂಚಿಸಿದ್ದಾರೆ. ಈ ಹಿನ್ನೆಲೆ ಕಾನೂನಾತ್ಮಕವಾಗಿ ಅದನ್ನು ಒದಗಿಸುತ್ತೇವೆ ಎಂದು ಭರವಸೆ ನೀಡಿದರು. ಪ್ರಜಾಪ್ರಭುತ್ವ ವ್ಯವಸ್ಥೆಯ 4ನೇ ಅಂಗವಾದ ಪತ್ರಿಕಾ ರಂಗದ ಕೊಡುಗೆ ದೊಡ್ಡದು. ಆಡಳಿತ ಯಂತ್ರವನ್ನು ಸರಿದಾರಿಗೆ ಕೊಂಡೊಯ್ಯುವಲ್ಲಿ ಮಾಧ್ಯಮಗಳ ಪಾತ್ರವೂ ಹಿರಿದಾಗಿದೆ. ಜಿಲ್ಲಾ ವರದಿಗಾರರ ಕೂಟ ಸಹ ಸಾರ್ವಜನಿಕ ಸಂಸ್ಥೆಯಾಗಿದ್ದು, ಇಂತಹ ಸಂಸ್ಥೆಗೆ ಶಾಶ್ವತ ಜಾಗದ ಅಗತ್ಯವಿದೆ. ಇನ್ನೊಂದು ವಾರದಲ್ಲೇ ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು, ಜಿಲ್ಲಾ ಸಚಿವರು, ಸಂಸದರಿಂದ ವರದಿಗಾರರ ಕೂಟಕ್ಕೆ ಜಾಗ ನೀಡಲಾಗುವುದು. ಆ ಮೂಲಕ ಆದಷ್ಟು ಬೇಗನೆ ಕಚೇರಿ ಕಟ್ಟಡ ಉದ್ಘಾಟಿಸಲು ಸಹ ಅನುವು ಮಾಡಿಕೊಡಲಾಗುವುದು. ವರದಿಗಾರರ ಕೂಟಕ್ಕೆ ಜಾಗ ನೀಡಲು ಯಾವುದೇ ತೊಂದರೆಯೂ ಇಲ್ಲ ಎಂದು ಡಿಸಿ ಪುನರುಚ್ಛರಿಸಿದರು.
ಸಚಿವ ಎಸ್.ಎಸ್. ಮಲ್ಲಿಕಾರ್ಜುನರವರು ಈಗಾಗಲೇ ವರದಿಗಾರರ ಕೂಟಕ್ಕೆ ಶಾಶ್ವತ ಜಾಗ ಕಲ್ಪಿಸುವ ಬಗ್ಗೆ ಹಿಂದೆಯೂ ಪ್ರಯತ್ನಿಸಿದ್ದರು. ಅದಕ್ಕೆಲ್ಲಾ ಈಗ ಕಾಲ ಕೂಡಿ ಬಂದಿದೆ. ಮೊನ್ನೆಯಷ್ಟೇ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಅವರು ಮೇಯರ್ ಕೆ.ಚಮನ್ ಸಾಬ್, ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷರು, ಸದಸ್ಯರು ಹಾಗೂ ವರದಿಗಾರರ ಕೂಟದ ಪದಾಧಿಕಾರಿಗಳೊಂದಿಗೆ ಕೆಂಪು ಕಟ್ಟಡವನ್ನು ವೀಕ್ಷಿಸಿದ್ದಾರೆ ಎಂದು ತಿಳಿಸಿದರು.ಸಧ್ಯಕ್ಕೆ ಅಲ್ಲಿ ಕಾರ್ಯನಿರ್ವಹಿಸುತ್ತಿರುವ ಪಾಲಿಕೆಯ ಅಧಿಕಾರಿ, ಸಿಬ್ಬಂದಿಗೆ ಪಾಲಿಕೆಯಲ್ಲೇ ಪ್ರತ್ಯೇಕ ಜಾಗದ ವ್ಯವಸ್ಥೆ ಮಾಡಿ, ವರದಿಗಾರರ ಕೂಟಕ್ಕೆ ಕೆಂಪು ಕಟ್ಟಡದಲ್ಲಿ ಜಾಗ ಕಲ್ಪಿಸುತ್ತೇವೆ. ದಾವಣಗೆರೆ ಜಿಲ್ಲೆಯಾಗಿ 25 ವರ್ಷ ಕಳೆದರೂ ವರದಿಗಾರರ ಕೂಟಕ್ಕೆ ಸ್ವಂತ ಜಾಗ ಇಲ್ಲ. ಆದರೆ, ಬೇರೆ ಜಿಲ್ಲೆಗಳಲ್ಲಿ ಅಲ್ಲಿನ ಪತ್ರಕರ್ತರ ಸಂಘಗಳಿಗೆ ಸ್ವಂತ, ದೊಡ್ಡ ಜಾಗ, ಕಟ್ಟಡಗಳಿವೆ. ಇಲ್ಲಿಯೂ ಅಂತಹ ದಿನ ಶೀಘ್ರವೇ ಬರಲಿದೆ ಎಂದು ಡಿಸಿ ಗಂಗಾಧರ ಸ್ವಾಮಿ ಭರವಸೆ ನೀಡಿದರು.
ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಮಾತನಾಡಿ, ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನರ ದೂರದೃಷ್ಟಿಯಂತೆ ದಾವಣಗೆರೆ ವರದಿಗಾರರ ಕೂಟಕ್ಕೆ ಬೆಂಗಳೂರು ಪ್ರೆಸ್ ಕ್ಲಬ್‌ಗಿಂತ ಮಾದರಿ ವಾತಾವರಣ ಕಲ್ಪಿಸುವ ಆಲೋಚನೆ ಹೊಂದಿದ್ದಾರೆ. ಆದಷ್ಟು ಬೇಗನೆ ಸಚಿವರು, ಸಂಸದರ ಒತ್ತಾಸೆಯಂತೆ ವರದಿಗಾರರ ಕೂಟಕ್ಕೆ ಶಾಶ್ವತ ಜಾಗ ಸಿಗಲಿ. ನಾವೆಲ್ಲರೂ ಸದಾ ನಿಮ್ಮೊಂದಿರುತ್ತೇವೆ ಎಂದರು.ಕೂಟದ ಗೌರವಾಧ್ಯಕ್ಷ ಬಿ.ಎನ್.ಮಲ್ಲೇಶ, ಅಧ್ಯಕ್ಷ ನಾಗರಾಜ ಎಸ್. ಬಡದಾಳ್, ಪ್ರಧಾನ ಕಾರ್ಯದರ್ಶಿ ಎಂ.ವೈ.ಸತೀಶ, ಖಜಾಂಚಿ ಪವನ್ ಐರಣಿ, ಗೌರವಾಧ್ಯಕ್ಷ ಕೆ.ಚಂದ್ರಣ್ಣ, ಮಂಜುನಾಥ ಗೌರಕ್ಕಳವರ್, ಸಿದ್ದಯ್ಯ ಹಿರೇಮಠ, ರಮೇಶ ಜಹಗೀರದಾರ್, ವಿವೇಕ್ ಬದ್ದಿ, ಸಂಜಯ್ ಕುಂದುವಾಡ, ಬಿ.ಸಿಕಂದರ್, ಆರ್.ರವಿಬಾಬು, ಸತೀಶ ಬಡಿಗೇರ, ಡಾ. ಸಿ.ವರದರಾಜ, ಪುನೀತ್ ಆಪ್ತಿ, ಆರ್.ಎಸ್. ತಿಪ್ಪೇಸ್ವಾಮಿ, ಡಾ. ಕೆ.ಜೈಮುನಿ, ಸುರೇಶ ಕುಣಿಬೆಳಕೆರೆ, ರಮೇಶ, ಶಿವರಾಜ, ಸುರೇಶ ಕಕ್ಕರಗೊಳ್ಳ, ಚನ್ನಬಸವ ಶೀಲವಂತ, ಬಿ.ಕೆ.ಕಾವ್ಯ, ಎಚ್.ಎಂ.ಪಿ.ಕುಮಾರ, ಕೆ.ಸಿ.ಗಿರೀಶ, ರವಿ ಭುವನೇಶ್ವರಿ, ಅನಿಲಕುಮಾರ ಭಾವಿ, ಮಧು, ಅಜಯ್, ಕರಿಬಸವರಾಜ, ನೂರ್, ಜಯಪ್ಪ, ತೇಜಸ್ವಿನಿ ಪ್ರಕಾಶ, ಇತರರು ಇದ್ದರು.
- - - -(ಫೋಟೋ ಬರಲಿವೆ)