ಸಾರಾಂಶ
ಕನ್ನಡಪ್ರಭ ವಾರ್ತೆ ಶಿರಾ ಬಿಡಾಡಿ ದನಗಳ ಮಾಲೀಕರು ಬಿಡಾಡಿ ದನಗಳನ್ನು ಸಾರ್ವಜನಿಕ ರಸ್ತೆಗೆ ಬಿಡುತ್ತಿದ್ದು, ಇದರಿಂದ ವಾಹನ ಸವಾರರಿಗೆ, ಪಾದಚಾರಿಗಳಿಗೆ, ಸಾರ್ವಜನಿಕರಿಗೆ, ವ್ಯಾಪಾರಸ್ಥರಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಬಿಡಾಡಿ ದನಗಳ ಮಾಲೀಕರು ತಮ್ಮ ಹಸುಗಳನ್ನು ಮನೆಯಲ್ಲಿಯೇ ಸಾಕಾಣಿಕೆ ಮಾಡಬೇಕು. ರಸ್ತೆಗೆ ಬಿಟ್ಟರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೌರಾಯುಕ್ತ ರುದ್ರೇಶ್.ಕೆ. ತಿಳಿಸಿದ್ದಾರೆ. ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು ಬಿಡಾಡಿ ದನಗಳನ್ನು ರಸ್ತೆಗೆ ಬಿಡುವುದರಿಂದ ಅಪಘಾತಗಳು ಉಂಟಾಗುತ್ತಿವೆ. ಈ ಬಗ್ಗೆ ಈಗಾಗಲೇ ಬಿಡಾಡಿ ದನಗಳ ಮಾಲೀಕರಿಗೆ ಎಚ್ಚರಿಕೆ ನೀಡಲಾಗಿದ್ದರೂ ಸಹ ತಾವು ಗಂಭೀರವಾಗಿ ಪರಿಗಣಿಸದೆ ಪದೇ ಪದೇ ಬಿಡಾಡಿ ದನಗಳನ್ನು ಸಾರ್ವಜನಿಕ ರಸ್ತೆಗೆ ಬಿಡುತ್ತಿದ್ದು, ಇದರಿಂದ ನಗರಸಭೆಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬಂದಿವೆ. ಇದು ಅಂತಿಮ ಎಚ್ಚರಿಕೆ ಎಂದು ತಿಳಿಯುವುದು. ಇಲ್ಲದಿದ್ದರೆ ಕಾನೂನು ರೀತ್ಯಾ ಕ್ರಮವಹಿಸಿ ದಂಡ ವಿಧಿಸಲಾಗುವುದು ಎಂದು ತಿಳಿಸಿದ್ದಾರೆ.ಶಿರಾ ನಗರಸಭೆಯ 2025-26ನೇ ಸಾಲಿಗೆ ಆಸ್ತಿ ತೆರಿಗೆ ಪಾವತಿಯಲ್ಲಿ ಶೇ.5 ರಷ್ಟು (ಏಪ್ರಿಲ್-2025ರ ಮಾಹೆಯಲ್ಲಿ ಮಾತ್ರ) ತೆರಿಗೆ ರಿಯಾಯಿತಿ ನೀಡಲಾಗಿದ್ದು ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಂಡು ನಗರಸಭೆಗೆ ಆಸ್ತಿ ತೆರಿಗೆ ಪಾವತಿಸಬೇಕು. ಬೇಸಿಗೆ ಕಾಲ ಪ್ರಾರಂಭವಾಗಿರುವುದರಿಂದ ನಾಗರೀಕರು ನಗರಸಭೆಯಿಂದ ಸರಬರಾಜು ಮಾಡಲಾಗುವ ಕುಡಿಯುವ ನೀರನ್ನು ಮಿತವಾಗಿ ಬಳಸಬೇಕು. ಕುಡಿಯುವ ನೀರಿನಲ್ಲಿ ವಾಹನಗಳನ್ನು ತೊಳೆಯುವುದು, ಅನವಶ್ಯಕವಾಗಿ ವ್ಯರ್ಥಮಾಡುವುದು ಕಂಡುಬಂದಲ್ಲಿ ದಂಡ ವಿಧಿಸಲಾಗುವುದು. ಬಾಕಿ ಉಳಿಸಿಕೊಂಡಿರುವ ನೀರಿನ ಶುಲ್ಕ, ಸೇರಿದಂತೆ ಎಲ್ಲಾ ಶುಲ್ಕ್ ಹಾಗೂ ತೆರಿಗೆಯನ್ನು ಪಾವತಿಸಬೇಕು. ಪಾವತಿಸಲು ವಿಫಲರಾದಲ್ಲಿ ಸಂಪರ್ಕವನ್ನು ಕಡಿತಗೊಳಿಸಲಾಗುವುದು ಹಾಗೂ ನಗರಸಭಾ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಒಳಚರಂಡಿ ಸಂಪರ್ಕವನ್ನು ತೆಗೆದುಕೊಂಡ ಕಟ್ಟಡ ಮಾಲೀಕರು ಒಳಚರಂಡಿ ಸಂಪರ್ಕ ಶುಲ್ಕ ಮತ್ತು ವಾರ್ಷಿಕ ಬಳಕೆದಾರರ ಶುಲ್ಕವನ್ನು ಏ. 1 ರಿಂದ ಕಡ್ಡಾಯವಾಗಿ ನಗರಸಭೆಗೆ ಪಾವತಿಸಿ ಸಕ್ರಮ ಮಾಡಿಕೊಳ್ಳಬೇಕು. ವಿಫಲರಾದಲ್ಲಿ ಒಳಚರಂಡಿ ಸಂಪರ್ಕವನ್ನು ಕಡಿತಗೊಳಿಸಲಾಗುವುದು ಹಾಗೂ ನಗರಸಭೆಯ ಅನುಮತಿ ಇಲ್ಲದೆ ಹೊಸ ಒಳಚರಂಡಿ ಸಂಪರ್ಕವನ್ನು ಪಡೆದಲ್ಲಿ ದಂಡ ವಿಧಿಸಿ ಕಾನೂನು ರೀತ್ಯಾ ಕ್ರಮವಹಿಸಲಾಗುವುದು ಎಂದು ತಿಳಿಸಿದ್ದಾರೆ.