ಸಾರಾಂಶ
ನಿಗಮದಲ್ಲಿ ಎಲ್ಲರೂ ತಂಡವಾಗಿ ಕೆಲಸ ಮಾಡಬೇಕಿದ್ದು, ಆ ಮೂಲಕ ನಿಗಮದ ಎಲ್ಲಾ ಕೆಲಸಗಳು ವೇಗವಾಗಿ ಪೂರ್ಣಗೊಳಿಸಲು ಆದ್ಯತೆ ನೀಡಬೇಕು
ಕನ್ನಡಪ್ರಭ ವಾರ್ತೆ ಮೈಸೂರು
ಪ್ರತಿಯೊಬ್ಬರು ತಮ್ಮ ಜವಾಬ್ದಾರಿಯನ್ನು ಅರಿತು ಸಮರ್ಪಕವಾಗಿ ಕೆಲಸ ಮಾಡುವ ಮೂಲಕ ಚಾಮುಂಡೇಶ್ವರಿ ವಿದ್ಯುತ್‌ಸರಬರಾಜು ನಿಗಮ ನಿಯಮಿತವನ್ನು (ಸೆಸ್ಕ್) ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಶ್ರಮಿಸೋಣ ಎಂದು ಸೆಸ್ಕ್ ಪ್ರಭಾರ ವ್ಯವಸ್ಥಾಪಕ ನಿರ್ದೇಶಕ ಕೆ.ಎಂ. ಮುನಿಗೋಪಾಲ್ ರಾಜು ತಿಳಿಸಿದರು.ವಿಜಯನಗರ 2ನೇ ಹಂತದಲ್ಲಿರುವ ನಿಗಮದ ಪ್ರಧಾನ ಕಚೇರಿಯಲ್ಲಿ ಶನಿವಾರ ಪ್ರಭಾರ ವ್ಯವಸ್ಥಾಪಕರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ನಿಗಮದಲ್ಲಿ ಎಲ್ಲರೂ ತಂಡವಾಗಿ ಕೆಲಸ ಮಾಡಬೇಕಿದ್ದು, ಆ ಮೂಲಕ ನಿಗಮದ ಎಲ್ಲಾ ಕೆಲಸಗಳು ವೇಗವಾಗಿ ಪೂರ್ಣಗೊಳಿಸಲು ಆದ್ಯತೆ ನೀಡಬೇಕು ಎಂದರು. ನಿಗಮದ ಏಳಿಗೆಯ ಜೊತೆಗೆ, ಸಿಬ್ಬಂದಿಯ ಕ್ಷೇಮಾಭಿವೃದ್ಧಿಗೆ ಸಾಕಷ್ಟು ಯೋಜನೆಗಳನ್ನು ಮಾಡಿಕೊಳ್ಳಲಾಗಿದೆ. ಹೀಗಾಗಿ ಯಾವುದೇ ಸಮಸ್ಯೆ ಅಥವಾ ತೊಂದರೆಗಳಿದ್ದಲ್ಲಿ ಅದನ್ನು ನೇರವಾಗಿ ನನ್ನ ಅಥವಾ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಬೇಕು. ನಿಗಮ ಈಗಾಗಲೇ ತಾಂತ್ರಿಕ ನಿರ್ವಹಣೆಯಲ್ಲಿ ಸುಧಾರಣೆ ಕಂಡಿದ್ದು, ಆರ್ಥಿಕ ಮತ್ತು ಆಡಳಿತ ವಿಭಾಗದಲ್ಲಿ ಮತ್ತಷ್ಟು ಸುಧಾರಣೆ ಆಗಬೇಕಿದೆ. ಹೊಸ ಕೆಲಸಗಳೊಂದಿಗೆ ಈಗಾಗಲೇ ಚಾಲ್ತಿಯಲ್ಲಿರುವ ಕೆಲಸಗಳು ಸಹ ನಿಗದಿತ ಸಮಯದಲ್ಲಿ ಪೂರ್ಣವಾಗುವಂತೆ ಗಮನವಹಿಸಿ ಎಂದು ಹೇಳಿದರು. ಸೆಸ್ಕ್‌ಹಾಗೂ ಕೆಪಿಟಿಸಿಎಲ್‌ಹಿರಿಯ ಅಧಿಕಾರಿಗಳು, ಸಿಬ್ಬಂದಿ ಸೇರಿದಂತೆ ಅನೇಕರು ಪ್ರಭಾರ ವ್ಯವಸ್ಥಾಪಕ ನಿರ್ದೇಶಕರಿಗೆ ಶುಭ ಕೋರಿದರು.ಈ ಹಿಂದೆ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಜಿ. ಶೀಲಾ ಅವರು ಸೇವೆಯಿಂದ ನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ ನಿಗಮದ ತಾಂತ್ರಿಕ ನಿರ್ದೇಶಕರಾಗಿರುವ ಕೆ.ಎಂ. ಮುನಿಗೋಪಾಲರಾಜು ಅವರು ಪ್ರಭಾರ ವ್ಯವಸ್ಥಾಪಕ ನಿರ್ದೇಶಕರಾಗಿ ನಿಯೋಜನೆಗೊಂಡಿದ್ದಾರೆ.