ಕನ್ನಡಪ್ರಭ ವಾರ್ತೆ ಆಲೂರು
ಸದಾ ಒತ್ತಡದಲ್ಲಿರುವ ಪತ್ರಕರ್ತರು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಕ್ರೀಡಾಕೂಟ ಸಹಕಾರಿಯಾಗಿದೆ ಎಂದು ಕಾಂಗ್ರೆಸ್ ಮುಖಂಡ ಮುರಳಿ ಮೋಹನ್ ತಿಳಿಸಿದರು.ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಆಲೂರು ತಾಲೂಕಿನ ಕಾರ್ಯನಿರತ ಪತ್ರಕರ್ತರ ಸಂಘವು ಪತ್ರಿಕಾ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ 20ನೇ ವರ್ಷದ ಸೌಹಾರ್ದಯುತ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು. ಮಾಧ್ಯಮ ಕ್ಷೇತ್ರಕ್ಕೆ ಸಮಾಜದಲ್ಲಿ ತನ್ನದೆ ಆದ ಘನತೆ ಗೌರವವಿದೆ. ಇಂಥ ರಂಗದಲ್ಲಿ ಕೆಲಸ ಮಾಡುವ ಪತ್ರಕರ್ತರು ಮಾನಸಿಕ ಮತ್ತು ದೈಹಿಕವಾಗಿ ಸದೃಢರಾಗಬೇಕು. ಹೀಗಾಗಿ ಕ್ರೀಡಾಕೂಟದಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳಬೇಕು ಎಂದರು. ಸದಾ ಒತ್ತಡದಲ್ಲಿರುವ ಪತ್ರಕರ್ತರು ವರ್ಷಕ್ಕೊಮ್ಮೆಯಾದರೂ ಇಡೀ ಒಂದು ದಿನ ಬೆರತು ಆಟೋಟಗಳಲ್ಲಿ ಪಾಲ್ಗೊಂಡು ಜೀವನದ ಜಂಜಾಟ ಮರೆಯಲು ಪ್ರಯತ್ನಿಸಬೇಕು ಎಂದು ಕ್ರೀಡಾಪಟುಗಳಿಗೆ ಶುಭ ಕೋರಿದರು.
ಈವರೆಗೂ ಚುನಾಯಿತ ಜನಪ್ರತಿನಿಧಿಗಳು ಆಲೂರು ತಾಲೂಕಿನ ಕಾರ್ಯನಿರತ ಪತ್ರಕರ್ತರ ಭವನ ನಿರ್ಮಾಣಕ್ಕೆ ಅವಶ್ಯಕವಾಗಿರುವ ಜಾಗವನ್ನು ಗುರುತಿಸಿಕೊಡುವಲ್ಲಿ ವಿಫಲರಾಗಿದ್ದಾರೆ. ಇದು ಬೇಸರದ ಸಂಗತಿಯಾಗಿದೆ. ಮುಂದಿನ ದಿನಗಳಲ್ಲಿ ಪಟ್ಟಣ ವ್ಯಾಪ್ತಿಯಲ್ಲಿರುವ ಸರ್ಕಾರಿ ಜಾಗವನ್ನು ಗುರುತಿಸಿ ಪತ್ರಕರ್ತರ ಭವನ ನಿರ್ಮಾಣಕ್ಕೆ ಸಹಕಾರ ನೀಡುವುದಾಗಿ ತಿಳಿಸಿದರು.ಕ್ರಿಕೆಟ್ ಪಂದ್ಯಾವಳಿಯಲ್ಲಿ ತಾಲೂಕಿನ ವಕೀಲರ ಸಂಘ, ಆರೋಗ್ಯ ಇಲಾಖೆ, ಲಯನ್ಸ್ ಸೇವಾ ಸಂಸ್ಥೆ, ಚಾಯಗ್ರಾಹಕ ಸಂಘ, ವಿದ್ಯುತ್ ಇಲಾಖೆ, ಶಿಕ್ಷಣ ಇಲಾಖೆ, ವಸತಿ ನಿಲಯಗಳ ವಿದ್ಯಾರ್ಥಿಗಳು, ಆಲೂರು ತಾಲೂಕು ಕಾರ್ಯನಿರತರ ಪತ್ರಕರ್ತ ಸಂಘ ಸೇರಿದಂತೆ 10 ತಂಡಗಳು ಭಾಗವಹಿಸಿದ್ದವು. ಇವುಗಳನ್ನು ಎ ಹಾಗೂ ಬಿ ತಂಡಗಳೆಂದು ವಿಂಗಡನೆ ಮಾಡಿ ಕ್ರಿಕೆಟ್ ಪಂದ್ಯಾವಳಿಯನ್ನು ನಡೆಸಲಾಯಿತು. ಎ.ತಂಡದಲ್ಲಿ ಛಾಯಾಗ್ರಾಹಕರ ತಂಡ, ಆರೋಗ್ಯ ಇಲಾಖೆ ತಂಡ, ಶಿಕ್ಷಣ ಇಲಾಖೆ ತಂಡ ಹಾಗೂ ಲಯನ್ಸ್ ಸೇವಾ ಸಂಸ್ಥೆ ಎ ಟೀಂ ತಂಡಗಳು ಭಾಗವಹಿಸಿದ್ದರು. ಪ್ರಥಮ ಸ್ಥಾನವನ್ನು ಶಿಕ್ಷಣ ಇಲಾಖೆ ತಂಡ ಪಡೆದರೆ, ದ್ವಿತೀಯ ಸ್ಥಾನವನ್ನು ಆರೋಗ್ಯ ಇಲಾಖೆ ತಂಡ ಹಾಗೂ ತೃತೀಯ ಸ್ಥಾನವನ್ನು ವಕೀಲರ ತಂಡದ ಸದಸ್ಯರು ಪಡೆದರು.ಬಿ. ತಂಡದಲ್ಲಿ ವಕೀಲರ ತಂಡ ಪ್ರಥಮ ಸ್ಥಾನವನ್ನು ಪಡೆದರೆ, ಕೆಇಬಿ ಇಲಾಖೆ ತಂಡ ದ್ವಿತೀಯ ಸ್ಥಾನ ಪಡೆದರೆ, ಆಲೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ತಂಡ ತೃತಿಯ ಸ್ಥಾನವನ್ನು ಪಡೆಯಿತು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಹಿರಿಯ ಮುಖಂಡರಾದ ಶಾಂತಕೃಷ್ಣ, ಶಿಕ್ಷಕ ಸಾಹಿತಿ ಎಸ್. ಕೊಟ್ರೇಶ್ ಉಪ್ಪಾರ್, ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಕಾರ್ಯದರ್ಶಿ ರಘು ಪಾಳ್ಯ, ವಕೀಲರ ಸಂಘದ ಅಧ್ಯಕ್ಷ ಎಂ.ಎಸ್ ಮಹೇಶ್, ಲಯನ್ ಸೇವಾ ಸಂಸ್ಥೆಯ ಮಾಜಿ ಅಧ್ಯಕ್ಷರುಗಳಾದ ನವೀನ್ ದಡದಲ್ಲಿ, ವಕೀಲ ಮಂಜೇಗೌಡ, ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ಮಂಡಳಿಯ ಸದಸ್ಯ ಹೆತ್ತೂರು ನಾಗರಾಜ್, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಎಚ್.ವಿ ರಾಘವೇಂದ್ರ, ಆಲೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಆದಿಲ್, ಪ್ರಧಾನ ಕಾರ್ಯದರ್ಶಿ ರುದ್ರಕುಮಾರ್, ಸಹ ಕಾರ್ಯದರ್ಶಿ ಸತೀಶ್ ಚಿಕ್ಕಕಣಗಾಲು, ಖಜಾಂಚಿ ಚೇತನ್, ನಿಕಟಪೂರ್ವ ಅಧ್ಯಕ್ಷ ಪೃಥ್ವಿರಾಮ್, ಮಾಜಿ ಅಧ್ಯಕ್ಷ ನಟರಾಜ್ ನಾಕಲಗೋಡು, ಜಿಲ್ಲಾ ಮಾಜಿ ಪ್ರಧಾನ ಕಾರ್ಯದರ್ಶಿ ಬನವಾಸೆ ಮಂಜು ಸೇರಿದಂತೆ ವಿವಿಧ ಸರ್ಕಾರಿ ಇಲಾಖೆಗಳ ಅಧಿಕಾರಿಗಳು ಹಾಗೂ ಸಂಘ ಸಂಸ್ಥೆಗಳ ಮುಖಂಡರು ಹಾಜರಿದ್ದರು.