ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಹಿಂದೂಸ್ತಾನಿ ಸಂಗೀತ ಪರಂಪರೆ ಉಳಿಸಿ ಬೆಳೆಸಿದ ಕೀರ್ತಿ ಮುರನಾಳ ಮಳೆಯಪ್ಪಯ್ಯನ ಮಠದ ಶ್ರೀಗಳಾದ ಮಹಾಪುರುಷರಿಗೆ ಸಲ್ಲುತ್ತದೆ ಎಂದು ಬಸವೇಶ್ವರ ಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎಸ್.ಆರ್. ಮೂಗನೂರಮಠ ಹೇಳಿದರು.ವಿದ್ಯಾಗಿರಿಯಲ್ಲಿ ನಡೆದ ಖ್ಯಾತ ಸಿತಾರ ವಾದಕ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರೊ.ವಿ.ಜಿ. ಮಹಾಪುರುಷರ 80ನೆಯ ಹುಟ್ಟುಹಬ್ಬದ ನಿಮಿತ್ತ ಏರ್ಪಡಿಸಿದ್ದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಉತ್ತರ ಕರ್ನಾಟಕದ ಭಾಗಕ್ಕೆ ಸಂಗೀತ ದಾಸೋಹ ಮೂಲಕ ತನ್ನದೆ ಆದ ಕೊಡುಗೆಯನ್ನು ಮುರನಾಳ ಮಳೆರಾಜೇಂದ್ರಸ್ವಾಮಿ ಮಠ ನೀಡಿದೆ. ಹಿಂದೂಸ್ತಾನಿ ಸಂಗೀತ ಪರಂಪರೆ ಉಳಿಸಿ ಬೆಳೆಸಿದ ಕೀರ್ತಿ ಶ್ರೀಮಠ ಹಾಗೂ ಪೂಜ್ಯರಾದ ಮಹಾಪುರುಷರಿಗೆ ಸಲ್ಲುತ್ತದೆ. ಇಲ್ಲಿ ಕಲಿತ ಅನೇಕ ಸಂಗೀತ ಕಲಾವಿದರು ನಾಡಿನ್ಯಾದ್ಯಂತ ಹೆಸರುವಾಸಿಯಾಗಿದ್ದಾರೆ. ಇಂತಹ ಮಠದ ಪರಮಪೂಜ್ಯರು ಹಾಗೂ ಸಂಗೀತ ವಿಭಾಗದ ಸೀತಾರ ವಾದನ ಪ್ರಾಧ್ಯಾಪಕರೂ ಆಗಿದ್ದ ವಿಶ್ವನಾಥ ಮಹಾಪುರುಷರು ಸೀತಾರ ವಾದನದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುವುದರ ಜೊತೆಗೆ ಜಿಲ್ಲೆಯಲ್ಲಿ ಸಂಗೀತದ ವಾದ್ಯಗಳ ಮ್ಯೂಸಿಯಂ ಮಾಡಿದ ಮೊದಲಿಗರು, ಜಿಲ್ಲೆಯ ಸಂಗೀತ ಪ್ರಾಧ್ಯಾಪಕರಲ್ಲಿ ಮೊದಲಿಗರಾಗಿದ್ದಾರೆ. ಅವರ ಸಂಗೀತ ಸೇವೆ ಸದಾಕಾಲ ನಡೆಯುತ್ತಿರಲಿ ಎಂದು ಹಾರೈಸಿದರು.ಮುಖ್ಯ ಅತಿಥಿಗಳಾಗಿ ಆಗಮಿಸಿದ ಖ್ಯಾತ ಹಿಂದೂಸ್ತಾನಿ ಗಾಯಕ ಪ್ರೊ.ಸಿದ್ದರಾಮಯ್ಯ ಮಠಪತಿ ಮಾತನಾಡಿ, ಸಂಗೀತ ವಾದ್ಯಗಳನ್ನು ಪಲ್ಲಕ್ಕಿಯಲ್ಲಿಟ್ಟು ಮೆರವಣಿಗೆ ಮಾಡಿ ರಾಜ್ಯದಲ್ಲಿ ಪ್ರಥಮ ವಿಶ್ವ ಸಂಗೀತ ದಿನ ಆಚರಿಸಿದ ಹೆಗ್ಗಳಿಕೆ ಮಹಾಪುರುಷರದ್ದು. ಲಂಡನ್‌ನಲ್ಲಿ ಸೀತಾರ ವಾದನ ಕಾರ್ಯಕ್ರಮ ಕೊಟ್ಟ ಮೊದಲಿಗರು, ಅವರ ಮಠವೇ ಸಂಗೀತಾಲಯವಾಗಿತ್ತು, ಅವರ ತಂದೆ ಗಂಗಾಧರ ಸ್ವಾಮೀಜಿ ಸೀತಾರ ವಾದಕರಾಗಿದ್ದರು, ಅಖಂಡ ಸ್ವಾಮಿಗಳು ಪಿಟಿಲು ವಾದಕರಾಗಿದ್ದರು. ಇಂದಿಗೂ ಸಂಗೀತ ಪರಂಪರೆ ಮುಂದುವರೆದಿದೆ, ಮಹಾಪುರುಷರು ಹಲವು ಮೊದಲುಗಳ ಸಾಧಕರು, ಸಂಗೀತ ಪರಂಪರೆಗೆ ಮುರನಾಳ ಮಠ ಹಾಗೂ ಬಿ.ವಿ.ವಿ. ಸಂಘದ ಕಲಾ ಮಹಾವಿದ್ಯಾಲಯದ ಸಂಗೀತ ವಿಭಾಗ ತನ್ನದೆ ಆದ ಕೊಡುಗೆ ನೀಡುವುದರ ಜೊತೆಗೆ ಇಂದಿಗೂ ಸಂಗೀತ ದಾಸೋಹ ಮುಂದುವರಿಸಿವೆ ಎಂದು ಹೇಳಿದರು.
ಉಪನ್ಯಾಸಕ ಡಾ.ಚಂದ್ರಶೇಖರ ಕಾಳನ್ನವರ ಅವರು, ಪ್ರೊ.ವಿ.ಜಿ. ಮಹಾಪುರಷ ಬದುಕು ಮತ್ತು ಸಾಧನೆ ಕುರಿತು ಉಪನ್ಯಾಸ ನೀಡಿದರು.ಕಾರ್ಯಕ್ರಮದಲ್ಲಿ ಖ್ಯಾತ ಸಿತಾರ ವಾದಕ ಪ್ರೊ.ವಿ.ಜಿ. ಮಹಾಪುರಷರ ಹಾಗೂ ಮೋನಬಾಯಿ ಮಹಾಪುರುಷ ಅವರು ಸಾನ್ನಿಧ್ಯ ವಹಿಸಿದ್ದರು. ಗದ್ದನಕೇರಿ ಮಠದ ಭಾಸ್ಕರ ಮಹಾಸ್ವಾಮಿಗಳು, ಮುರನಾಳ ಮಠದ ಜಗನ್ನಾಥ ಮಹಾಸ್ವಾಮಿಗಳು, ಮೊನ್ನಪ್ಪಯ್ಯ ಹಾಗೂ ಮೇಘರಾಜ ಸ್ವಾಮಿಗಳು, ವಿಶ್ರಾಂತ ತಬಲಾ ವಾದಕ ಪ್ರೊ.ಬಳ್ಳೂರ ಅವರು ವೇದಿಕೆ ಮೇಲೆ ಉಪಸ್ಥಿತರಿದ್ದರು.ಕಾರ್ಯಕ್ರಮ ಸಂಚಾಲಕ ಡಾ.ಸಂತೋಷ ಕಾಳನ್ನವರ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಆಕಾಶವಾಣಿ ಕಲಾವಿದ ಅಶೋಕ ಬಡಿಗೇರ ಮತ್ತವರ ತಂಡದವರಿಂದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಜರುಗಿತು. ರೇವಣಸಿದ್ದಪ್ಪ ಬೆನ್ನೂರು ಪ್ರಾರ್ಥಿಸಿದರು. ಬಸವರಾಜ ದಾಸರ ನಿರೂಪಿಸಿದರು. ಸಂಗಮೇಶ ಬಡಿಗೇರ ವಂದಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾಗಿರಿ, ಬಾಗಲಕೋಟೆ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು, ಭಕ್ತಾಧಿಗಳು, ಕುಟುಂಬದವರು ಭಾಗವಹಿಸಿದ್ದರು.