ಜಿಲ್ಲೆಯಲ್ಲಿ ಒಂದೇ ತಿಂಗಳಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ, ಕೊಲೆ ಪ್ರಕರಣಗಳು ಜರುಗಿದ್ದು, ರಾಜ್ಯ ಸರ್ಕಾರದ ಅಡಳಿತ ವೈಫಲ್ಯ ಸಾಬೀತಾಗಿದೆ. ಕೂಡಲೇ ಆರೋಪಿಗಳಿಗೆ ಕಠಿಣ ಶಿಕ್ಷೆ ಹಾಗೂ ಮೃತರ ಕುಟುಂಬಗಳಿಗೆ ಪರಿಹಾರ ನೀಡಬೇಕೆಂದು ವಿಪ ವಿರೋಧ ಪಕ್ಷದ ನಾಯಕ ಛಲವಾದಿ ಟಿ. ನಾರಾಯಣಸ್ವಾಮಿ ಒತ್ತಾಯಿಸಿದರು.

ದೇವದುರ್ಗ: ಜಿಲ್ಲೆಯಲ್ಲಿ ಒಂದೇ ತಿಂಗಳಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ, ಕೊಲೆ ಪ್ರಕರಣಗಳು ಜರುಗಿದ್ದು, ರಾಜ್ಯ ಸರ್ಕಾರದ ಅಡಳಿತ ವೈಫಲ್ಯ ಸಾಬೀತಾಗಿದೆ. ಕೂಡಲೇ ಆರೋಪಿಗಳಿಗೆ ಕಠಿಣ ಶಿಕ್ಷೆ ಹಾಗೂ ಮೃತರ ಕುಟುಂಬಗಳಿಗೆ ಪರಿಹಾರ ನೀಡಬೇಕೆಂದು ವಿಪ ವಿರೋಧ ಪಕ್ಷದ ನಾಯಕ ಛಲವಾದಿ ಟಿ. ನಾರಾಯಣಸ್ವಾಮಿ ಒತ್ತಾಯಿಸಿದರು.

ತಾಲೂಕಿನ ಹದ್ದಿನಾಳ ಗ್ರಾಮದಲ್ಲಿ ಇತ್ತೀಚಿಗೆ ಕೊಲೆಯಾಗಿರುವ ಭೂಮಾನಂದ ಮನೆಗೆ ಗುರುವಾರ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಹಾಡುಹಗಲೇ ಯುವಕನ ಬರ್ಬರ ಹತ್ಯೆ, ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಕೊಲೆ ಮಾಡಿರುವುದು ಆಡಳಿತದ ವೈಫಲ್ಯವಾಗಿದೆ. ದಲಿತರ ಮೇಲೆ ದೌರ್ಜನ್ಯ, ಕೊಲೆ, ಅತ್ಯಾಚಾರ ಪ್ರಕರಣಗಳು ಜಿಲ್ಲೆಯಲ್ಲಿ ಒಂದೇ ತಿಂಗಳಲ್ಲಿ ನಡೆದಿದ್ದರೂ ಸಮಾಜ ಕಲ್ಯಾಣ ಸಚಿವರಾಗಲಿ, ಇದೇ ಪ್ರದೇಶದವರಾದ ಗೃಹಮಂತ್ರಿ ಪ್ರಿಯಾಂಕ್‌ ಖರ್ಗೆಯಾಗಲೀ ಭೇಟಿ ನೀಡಿ ಸಂತ್ರಸ್ತರಿಗೆ ಸಾಂತ್ವನ ಹೇಳುವ ಕನಿಷ್ಠ ಸೌಜನ್ಯ ತೋರಿಸದೇ ಇರುವುದು ಖಂಡನೀಯ ಎಂದರು.

ಕೂಡಲೇ ಆರೋಪಿಗಳಿಗೆ ಕಠಿಣ ಶಿಕ್ಷೆ ಹಾಗೂ ಮೃತಪಟ್ಟ ಕುಟುಂಬಗಳಿಗೆ ಸರ್ಕಾರಿ ನೌಕರಿ ಸೇರಿದಂತೆ ಸೂಕ್ತ ಪರಿಹಾರ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು. ತಹಸೀಲ್ದಾರ ನಾಗಮ್ಮ ಎಂ.ಕಟ್ಟೀಮನಿ, ವಿವಿಧ ಇಲಾಖೆಯ ಅಧಿಕಾರಿ, ಸಿಬ್ಬಂದಿ ಇದ್ದರು

ಹೊಕ್ರಾಣಿಯಲ್ಲಿ ಹತ್ಯೆಯಾದ ಯುವತಿ ಮನೆಗೆ ಭೇಟಿ; ಸಾಂತ್ವನ

ಸಿರವಾರ: ತಾಲೂಕಿನ ಹೊಕ್ರಾಣಿ ಗ್ರಾಮದಲ್ಲಿ ಇತ್ತೀಚೆಗೆ ಹತ್ಯೆಯಾದ ಯುವತಿ ಅಶ್ವಿನಿ ಅವರ ಮನೆಗೆ ಛಲವಾದಿ ನಾರಾಯಣಸ್ವಾಮಿ ಗುರುವಾರ ಸಂಜೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಕುಟುಂಬಸ್ಥರ ಅಳಲು ಆಲಿಸಿದ ಅವರು, ಹತ್ಯೆ ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸಿ ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿದರು. ಸೂಕ್ತ ಪರಿಹಾರ ಮತ್ತು ನ್ಯಾಯ ದೊರಕಿಸಿಕೊಡುವ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರು, ಸ್ಥಳೀಯ ಮುಖಂಡರು ಹಾಗೂ ಗ್ರಾಮಸ್ಥರು ಇದ್ದರು.