ಕನ್ನಡಪ್ರಭ ವಾರ್ತೆ ಅಥಣಿ ಕುಡಿದ ಅಮಲಿನಲ್ಲಿ ವಾಹನ ಚಲಾಯಿಸಿ ಅಪಘಾತ ಮಾಡಿ ಸಾವುಗಳು ಸಂಭವಿಸಿದರೆ ಅಂತಹ ವಾಹನ ಚಾಲಕರ ವಿರುದ್ಧ ಕೊಲೆ ಪ್ರಕರಣ ದಾಖಲಿಸಲು ಸೂಚನೆ ನೀಡಲಾಗಿದೆ. ಸಾರ್ವಜನಿಕರ ನಡುವೆ ಉತ್ತಮ ಸಂವಹನ ಮಾನವೀಯ ಭದ್ರತೆ ಅತ್ಯಂತ ಮುಖ್ಯ ಎಂದು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಹೇಳಿದರು.

ಕನ್ನಡಪ್ರಭ ವಾರ್ತೆ ಅಥಣಿ

ಕುಡಿದ ಅಮಲಿನಲ್ಲಿ ವಾಹನ ಚಲಾಯಿಸಿ ಅಪಘಾತ ಮಾಡಿ ಸಾವುಗಳು ಸಂಭವಿಸಿದರೆ ಅಂತಹ ವಾಹನ ಚಾಲಕರ ವಿರುದ್ಧ ಕೊಲೆ ಪ್ರಕರಣ ದಾಖಲಿಸಲು ಸೂಚನೆ ನೀಡಲಾಗಿದೆ. ಸಾರ್ವಜನಿಕರ ನಡುವೆ ಉತ್ತಮ ಸಂವಹನ ಮಾನವೀಯ ಭದ್ರತೆ ಅತ್ಯಂತ ಮುಖ್ಯ ಎಂದು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಹೇಳಿದರು.ಅಥಣಿ ಪೊಲೀಸ್ ಉಪವಿಭಾಗದ ವ್ಯಾಪ್ತಿಗೆ ಭಾನುವಾರ ಭೇಟಿ ನೀಡಿದ ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅಥಣಿ, ಕಾಗವಾಡ, ಕುಡಚಿ, ರಾಯಬಾಗ, ಹಾರೂಗೇರಿ, ಐಗಳಿ ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಠಾಣೆಗಳಲ್ಲಿ ಇರುವ ವಾಸ್ತವ ಸ್ಥಿತಿಗತಿ, ವ್ಯವಸ್ಥೆ, ಸಾರ್ವಜನಿಕರೊಂದಿಗೆ ಪೊಲೀಸರ ನಡುವಳಿಕೆ, ಹಲವು ಕಡತಗಳನ್ನು ಪರಿಶೀಲನೆ ನಡೆಸಿ ಪೊಲೀಸ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ನಿರ್ದೇಶನಗಳನ್ನು ನೀಡಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾನೂನು ಎಲ್ಲರಿಗೂ ಒಂದೇ, ಯಾರೇ ಪೊಲೀಸ್ ಠಾಣೆಗೆ ಬಂದು ದೂರು ನೀಡಿದರೆ ಯಾವುದೇ ರಾಜಿ ಸಂಧಾನ ಮಾಡದೆ ದೂರಿನನ್ವಯ ಎಫ್‌ಐಆರ್ ದಾಖಲಿಸಬೇಕು. ರಾಜ್ಯದಲ್ಲಿಯೇ ಅಥಣಿ ಪೊಲೀಸ್ ಉಪ ವಿಭಾಗದ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಅಪಘಾತಗಳಲ್ಲಿ ಸಾವು ನೋವುಗಳು ಸಂಭವಿಸುತ್ತಿವೆ. ಅವುಗಳನ್ನು ನಿಯಂತ್ರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ಕಾನೂನು ಬಾಹಿರ ಯಾವುದೇ ಚಟುವಟಿಕೆಗಳು ನಡೆಯದಂತೆ ಮುಂಜಾಗ್ರತಾ ಕ್ರಮ ವಹಿಸಬೇಕು. ಅಕ್ರಮ ಮದ್ಯ ಮಾರಾಟಗಾರರ ವಿರುದ್ಧ ಕೇಸ್ ದಾಖಲು ಮಾಡಿ ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಂ ಗಳು ಹೆಚ್ಚುತ್ತಿದ್ದು, ಜನರಲ್ಲಿ ಜಾಗೃತಿ ಮೂಡಿಸಬೇಕು. ಹಣದ ಆಸೆಗಾಗಿ ವಂಚಕರ ಬಲೆಗೆ ಬೀಳಬಾರದು. ಅಂತಹ ಯಾವುದೇ ಸಂದೇಹ ಬಂದಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಸಾರ್ವಜನಿಕರಿಗೆ ತಿಳಿಸಿದರು.

ಈ ವೇಳೆ ಅಥಣಿ ಪೊಲೀಸ್ ಉಪ ವಿಭಾಗದ ಡಿವೈಎಸ್ಪಿ ಪ್ರಶಾಂತ ಮುನ್ನೋಳ್ಳಿ, ಸಿಪಿಐ ಸಂತೋಷ ಹಳ್ಳೂರ, ಪಿಎಸ್‌ಐ ಗಿರಿಮಲ್ಲಪ್ಪ ಉಪ್ಪಾರ, ಅಥಣಿ ಪೊಲೀಸ್ ಉಪ ವಿಭಾಗದ ಪಿಎಸ್‌ಐ, ಎಎಸ್‌ಐ, ಎಲ್ಲ ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.ಕೋಟ್‌

ಅಥಣಿ ಪಟ್ಟಣದಲ್ಲಿ ಟ್ರಾಫಿಕ್ ಸಮಸ್ಯೆ ಜೊತೆಗೆ ಅಪರಾಧ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತವೆ. ಇಲ್ಲಿರುವ ಸಿಬ್ಬಂದಿ ಸಂಖ್ಯೆ ಕಡಿಮೆ ಇರುವುದು ಕಂಡು ಬಂದಿದೆ. ಹೆಚ್ಚುವರಿ ಸಿಬ್ಬಂದಿ ನಿಯೋಜನೆ ಮಾಡಲು ಕ್ರಮ ಕೈಗೊಳ್ಳಲಾಗುವುದು. ಅಥಣಿ ತಾಲೂಕಿಗೆ ಇನ್ನೊಂದು ಗ್ರಾಮೀಣ ಪೊಲೀಸ್ ಠಾಣೆ ಹಾಗೂ ಟ್ರಾಫಿಕ್ ಪೊಲೀಸ್ ಠಾಣೆ ಬೇಡಿಕೆ ಇದ್ದು, ಈ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು.- ಕೆ.ರಾಮರಾಜನ್, ಬೆಳಗಾವಿ ಎಸ್ಪಿ.