ಸುಪಾರಿ ಕೊಟ್ಟು ವ್ಯಕ್ತಿಯ ಕೊಲೆ

| Published : Oct 13 2023, 12:15 AM IST

ಸಾರಾಂಶ

ಸುಪಾರಿ ಕೊಟ್ಟ ವ್ಯಕ್ತಿ ಹಾಗೂ ಕೊಲೆಯಾದ ವ್ಯಕ್ತಿಯ ನಡುವೆ ಹಣದ ವ್ಯವಹಾರ ಇತ್ತು ಎನ್ನಲಾಗಿದೆ. ಸುಪಾರಿ ನೀಡಿದ ಆರೋಪಿ ಪರಾರಿಯಾಗಿದ್ದು, ಹುಡುಕಾಟ ನಡೆದಿದೆ. ಆರೋಪಿಯಿಂದದ ಕೃತ್ಯಕ್ಕೆ ಬಳಸಿದ ಕಾರು, ಮೃತನ ಮೋಟಾರ್ ಸೈಕಲ್, ಮೊಬೈಲ್‌, ಚಪ್ಪಲಿ, ವಾಚ್ ಜಪ್ತಿ ಮಾಡಿದ್ದಾರೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ

ಕುಕನೂರು: ತಾಲೂಕಿನ ತಳಬಾಳ ಸೀಮಾದಲ್ಲಿ ಇತ್ತೀಚೆಗೆ ವ್ಯಕ್ತಿಯ ಕೈಗಳಿಗೆ ಕಲ್ಲು ಕಟ್ಟಿ ಬಾವಿಯಲ್ಲಿ ಮುಳುಗಿಸಿದ ಪ್ರಕರಣಕ್ಕೆ ತಿರುವು ದೊರೆತಿದ್ದು, ಸುಪಾರಿ ನೀಡಿ ಕೊಲೆ ಮಾಡಿಸಿರುವ ಮಾಹಿತಿ ಬಯಲಿಗೆ ಬಂದಿದೆ.

ಪ್ರಕರಣದ ವಿಚಾರಣೆ ನಡೆಸಿದ ಪೊಲೀಸರು ಸುಪಾರಿ ಪಡೆದ ಆಂಧ್ರಪ್ರದೇಶದ ಸುಧೀರಕುಮಾರ ಶ್ರೀಹರಿ ಮಾನುಕೊಂಡ ಎಂಬಾತನನ್ನು ಬಂಧಿಸಿದ್ದಾರೆ. ಸುಪಾರಿ ಕೊಟ್ಟು ಕೊಲೆ ಮಾಡಿಸಿರುವ ವ್ಯಕ್ತಿ ತಲೆ ಮರೆಸಿಕೊಂಡಿದ್ದು, ತನಿಖೆ ನಡೆಸಿದ್ದೇವೆ ಎಂದು ಎಸ್ಪಿ ಯಶೋದಾ ವಂಟಗೋಡಿ ಹೇಳಿದರು.

ಪಟ್ಟಣದ ಪೊಲೀಸ್ ಠಾಣೆಯಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕುಕನೂರು ಪೊಲೀಸ್ ಠಾಣೆ ವ್ಯಾಪ್ತಿಯ ತಳಬಾಳ ಸೀಮಾದಲ್ಲಿ ಸೆ.೨೯ರಿಂದ ಆ.೪ರ ಸಂಜೆ ಅವಧಿಯಲ್ಲಿ ಕೊಪ್ಪಳ ತಾಲೂಕಿನ ಡಂಬರಳ್ಳಿಯ ಚಂದ್ರಗೌಡ ನಿಂಗನಗೌಡ ನಂದನಗೌಡ್ರ ಎನ್ನುವ ವ್ಯಕ್ತಿಯ ಕೈಗಳಿಗೆ ಕಲ್ಲು ಕಟ್ಟಿ ಬಾವಿಯಲ್ಲಿ ಮುಳುಗಿಸಿದ್ದರು. ಪ್ರಕರಣ ಭೇದಿಸಿದಾಗ ಚಂದ್ರಗೌಡನನ್ನು ಕೊಪ್ಪಳ ತಾಲೂಕಿನ ಮಂಗಳಾಪುರ ಸಮೀಪದ ತೋಟವೊಂದರಲ್ಲಿ ಊಟಕ್ಕೆ ಕರೆದಿದ್ದರು. ಊಟದ ನಂತರ ತಲೆಗೆ ಸುತ್ತಿಗೆಯಿಂದ ಜೋರಾಗಿ ಹೊಡೆದು ಕೊಲೆ ಮಾಡಿದ್ದಾರೆ. ನಂತರ ಕಾರಿಗೆ ಹೊದಿಸುವ ಕವರ್‌ನಲ್ಲಿ ಶವ ಸುತ್ತಿ ಕಾರಿನ ಡಿಕ್ಕಿಯಲ್ಲಿ ಹಾಕಿ, ತಳಬಾಳ ಸಮೀಪದ ಬಾವಿಯಲ್ಲಿ ಶವಕ್ಕೆ ಕಲ್ಲು ಕಟ್ಟಿ ಎಸೆದಿದ್ದರು. ನಂತರ ಸುಪಾರಿ ಪಡೆದ ಆರೋಪಿಯು ಕೊಲೆಯಾದ ವ್ಯಕ್ತಿಯ ಬೈಕ್ ಚಲಾಯಿಸಿಕೊಂಡು ಚಿತ್ರದುರ್ಗದ ಜಗಳೂರು ಬಳಿ ವಾಚ್, ಮೊಬೈಲ್ ಎಸೆದು ಹೋಗಿರುವ ಸುಳಿವಿನ ಆಧಾರದಲ್ಲಿ ಬಂಧಿಸಲಾಗಿದೆ. ನಂತರ ಸುಪಾರಿ ಪಡೆದ ಬಗ್ಗೆ ಪೊಲೀಸರ ತನಿಖೆ ವೇಳೆ ತಿಳಿದುಬಂದಿದೆ ಎಂದರು.

ಸುಪಾರಿ ಕೊಟ್ಟ ವ್ಯಕ್ತಿ ಹಾಗೂ ಕೊಲೆಯಾದ ವ್ಯಕ್ತಿಯ ನಡುವೆ ಹಣದ ವ್ಯವಹಾರ ಇತ್ತು ಎನ್ನಲಾಗಿದೆ. ಸುಪಾರಿ ನೀಡಿದ ಆರೋಪಿ ಪರಾರಿಯಾಗಿದ್ದು, ಹುಡುಕಾಟ ನಡೆದಿದೆ. ಆರೋಪಿಯಿಂದದ ಕೃತ್ಯಕ್ಕೆ ಬಳಸಿದ ಕಾರು, ಮೃತನ ಮೋಟಾರ್ ಸೈಕಲ್, ಮೊಬೈಲ್‌, ಚಪ್ಪಲಿ, ವಾಚ್ ಜಪ್ತಿ ಮಾಡಿದ್ದಾರೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಡಿವೈಎಸ್ಪಿ ಶರಣಬಸಪ್ಪ ಸುಬೇದಾರ, ಸಿಪಿಐ ಮೌನೇಶ್ವರ ಮಾಲಿಪಾಟೀಲ್, ಎಎಸ್‌ಐ ಶರಣಪ್ಪ ಗೂಳರಡ್ಡಿ, ಸಿಬ್ಬಂದಿ ಸರ್ವೇಶ, ಮೆಹಬೂಬ, ವಿಶ್ವನಾಥ, ಮಹಾಂತಗೌಡ, ಮಾರುತಿ, ಕೊಟೇಶ, ಪ್ರಸಾದ, ನಾಗರಾಜ, ಶರಣಪ್ಪ ಇದ್ದರು.