ಸಾರಾಂಶ
ಪ್ರೇಯಸಿ ಮದುವೆಯಾಗುವಂತೆ ಪದೇ ಪದೇ ಒತ್ತಾಯಿಸಿದ್ದರಿಂದ ಬೇಸತ್ತು ಅವಳನ್ನು ತನ್ನ ಹೊಲಕ್ಕೆ ಕರೆದೊಯ್ದು ಹತ್ಯೆಗೈದು ಹೊಲದ ದಂಡೆಯ ಬದುವಿನಲ್ಲಿ ಹೂತು ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯ ಮೃತದೇಹದ ಅವಶೇಷಗಳಿಗಾಗಿ ಮಂಗಳವಾರ ಶೋದ ಕಾರ್ಯ ನಡೆಸಲಾಯಿತು.
ಗದಗ: ಪ್ರೇಯಸಿ ಮದುವೆಯಾಗುವಂತೆ ಪದೇ ಪದೇ ಒತ್ತಾಯಿಸಿದ್ದರಿಂದ ಬೇಸತ್ತು ಅವಳನ್ನು ತನ್ನ ಹೊಲಕ್ಕೆ ಕರೆದೊಯ್ದು ಹತ್ಯೆಗೈದು ಹೊಲದ ದಂಡೆಯ ಬದುವಿನಲ್ಲಿ ಹೂತು ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯ ಮೃತದೇಹದ ಅವಶೇಷಗಳಿಗಾಗಿ ಮಂಗಳವಾರ ಶೋದ ಕಾರ್ಯ ನಡೆಸಲಾಯಿತು.
ಗದಗ ತಾಲೂಕಿನ ನಾರಾಯಣಪುರ ಗ್ರಾಮದ ಸತೀಶ್ ಹಿರೇಮಠ, ಅದೇ ಗ್ರಾಮದ ತನ್ನ ಪ್ರೇಯಸಿ ಮಧುಶ್ರೀ ಅಂಗಡಿಯನ್ನು ಕೊಲೆ ಮಾಡಿ ನಾರಾಯಣಪುರ ಗ್ರಾಮದ ತಮ್ಮ ಹೊಲದ ಬದುವಿನಲ್ಲಿ ಹೂತು ಹಾಕಿದ್ದ. ಈ ಸ್ಥಳದಲ್ಲಿ ಗದಗ ಉಪವಿಭಾಗಾಧಿಕಾರಿ ಗಂಗಪ್ಪ ಅವರ ಸಮ್ಮುಖದಲ್ಲಿ ಶೋಧ ಕಾರ್ಯ ಕೈಗೊಳ್ಳಲಾಯಿತು.ಶೋಧ ಕಾರ್ಯಾಚರಣೆ:ಆರೋಪಿ ಸತೀಶ್ ನೀಡಿದ ಮಾಹಿತಿಯ ಆಧಾರದ ಮೇಲೆ, ಪೊಲೀಸರು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಹೂತು ಹಾಕಿದ ಸ್ಥಳದಲ್ಲಿ ಮಂಗಳವಾರ ಶೋಧ ಕಾರ್ಯ ನಡೆಸಿದರು. ಈ ಕಾರ್ಯಾಚರಣೆಯ ಸಂದರ್ಭದಲ್ಲಿ ಬೆಟಗೇರಿ ಬಡಾವಣೆ ಸಿಪಿಐ ಧೀರಜ್ ಸಿಂಧೆ ಮತ್ತು ಪಿಎಸ್ಐ ಮಾರುತಿ ಅವರು ಸ್ಥಳದಲ್ಲಿ ಉಪಸ್ಥಿತರಿದ್ದು, ಪರಿಶೀಲನೆ ನಡೆಸಿ, ಮೃತ ಯುವತಿಯ ದೇಹದ್ದು ಎಂದು ಹೇಳಲಾಗುವ ಮೂಳೆಗಳು ಸೇರಿದಂತೆ ಇನ್ನುಳಿದ ವಸ್ತುಗಳನ್ನು ವಶಕ್ಕೆ ಪಡೆಯಲಾಯಿತು. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ. ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿರುವ ಯುವತಿಯ ಕೊಲೆ ಪ್ರಕರಣದ ತನಿಖೆ ಈಗ ಮಹತ್ವದ ಹಂತ ತಲುಪಿದ್ದು, ಇನ್ನಷ್ಟೇ ನಿಖರತೆ ಹೊರಬರಬೇಕಿದೆ. ಪ್ರೀತಿಸಿದ ಯುವತಿ ಮದುವೆಯಾಗುವಂತೆ ಪೀಡಿಸಿದ ಕಾರಣಕ್ಕಾಗಿ ನಿರ್ದಯವಾಗಿ ಕೊಲೆ ಮಾಡಿ ನಾಕ್ಷಿ ನಾಶ ಮಾಡಲು ಯತ್ನಿಸಿದ ಆ ಯುವಕನಿಗೆ ಕಠಿಣ ಶಿಕ್ಷೆಯಾಗಬೇಕು ಎನ್ನುವ ಮಾತು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿವೆ.