ಸಾರಾಂಶ
ಆನಂದ ಮಾರ್ಗ ಆಶ್ರಮದಲ್ಲಿ ಜಮೀನು ವಿವಾದದ ವಿಚಾರವಾಗಿ ಸ್ವಾಮೀಜಿಗಳ ಎರಡು ಗುಂಪುಗಳ ನಡುವೆ ಸಂಭವಿಸಿದ ಮಾರಾಮಾರಿಯಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಒಬ್ಬ ಸ್ವಾಮೀಜಿ ಮೃತಪಟ್ಟ ಘಟನೆ ಶನಿವಾರ ನಡೆದಿದೆ. ಈ ಸಂಬಂಧ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಮಾಲೂರು (ಕೋಲಾರ) : ತಾಲೂಕಿನ ಸಂತೇಹಳ್ಳಿ ಕ್ರಾಸ್ ಬಳಿಯ ಆನಂದ ಮಾರ್ಗ ಆಶ್ರಮದಲ್ಲಿ ಜಮೀನು ವಿವಾದದ ವಿಚಾರವಾಗಿ ಸ್ವಾಮೀಜಿಗಳ ಎರಡು ಗುಂಪುಗಳ ನಡುವೆ ಸಂಭವಿಸಿದ ಮಾರಾಮಾರಿಯಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಒಬ್ಬ ಸ್ವಾಮೀಜಿ ಮೃತಪಟ್ಟ ಘಟನೆ ಶನಿವಾರ ನಡೆದಿದೆ. ಈ ಸಂಬಂಧ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಆನಂದ ಮಾರ್ಗ ಆಶ್ರಮದಲ್ಲಿ ನಡೆಯುತ್ತಿದ್ದ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿದ್ದ ಹಾಗೂ ಸದ್ಯ ಆಶ್ರಮದ ಆಸ್ತಿ ನಿರ್ವಹಣೆ ಮಾಡುತ್ತಿದ್ದ ಅಚಾರ್ಯ ಚಿನ್ಮಯಾನಂದ ಅವಧೂತರು (೬೮) ಮೃತ ಸ್ವಾಮೀಜಿ. ಗಂಭೀರ ಗಾಯಗೊಂಡಿದ್ದ ಅವರು ಕೋಲಾರದ ಜಾಲಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮಧ್ಯಾಹ್ನ ಮೃತಪಟ್ಟರು.
ಪ್ರಕರಣಕ್ಕೆ ಸಂಬಂಧಿಸಿ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಅದೇ ಆಶ್ರಮದ ಆಚಾರ್ಯ ಧರ್ಮಪ್ರಾಣಾನಂದ, ಆಚಾರ್ಯ ಪ್ರಾಣೇಶ್ವರಾನಂದ ಅವಧೂತ ಮತ್ತು ಅರುಣ್ ಕುಮಾರ್ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.
1986ರಲ್ಲಿ ಆಶ್ರಮ ಸ್ಥಾಪನೆ:
ಆನಂದ ಮಾರ್ಗ ಎಂಬುದು ಸಾಮಾಜಿಕ-ಧಾರ್ಮಿಕ ಪ್ರಚಾರ ಸಂಸ್ಥೆಯಾಗಿದ್ದು, ಕೋಲ್ಕತಾ, ರಾಂಚಿ, ಪಶ್ಚಿಮ ಬಂಗಾಳ ಪ್ರಾಂತ್ಯದಲ್ಲಿ ಹಲವು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದೆ. ಈ ಸಂಸ್ಥೆಯ ಗುರುಗಳೊಬ್ಬರು ಧರ್ಮ ಪ್ರಚಾರಕ್ಕಾಗಿ 1986ರಲ್ಲಿ ಮಾಲೂರು ತಾಲೂಕಿಗೆ ಭೇಟಿ ಕೊಟ್ಟಿದ್ದಾಗ ವಿದ್ಯಾಸಂಸ್ಥೆ ಪ್ರಾರಂಭಿಸಲೆಂದು ಮೈಲಾಂಡಹಳ್ಳಿಯ ಈರಣ್ಣ ಕುಟುಂಬದವರು ಸುಮಾರು 3 ಎಕರೆ ಜಮೀನನ್ನು ಆನಂದ ಮಾರ್ಗ ಸಂಸ್ಥೆ ಹೆಸರಿಗೆ ಉಚಿತವಾಗಿ ನೀಡಿದ್ದರು.
ಇದೇ ಜಮೀನಲ್ಲಿ ಕೋಲಾರ ಜಿಲ್ಲೆಯಲ್ಲೇ ಪ್ರಥಮವಾಗಿ ಆನಂದ ಮಾರ್ಗ ಪಾಲಿಟೆಕ್ನಿಕ್ ವಿದ್ಯಾಸಂಸ್ಥೆ ಆರಂಭಿಸಲಾಗಿದ್ದು, ಇಲ್ಲಿ ನೂರಾರು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದರು. ಈ ಸಂಸ್ಥೆಗಾಗಿ ಉಚಿತವಾಗಿ ಸಿಕ್ಕ 3 ಎಕರೆ ಜಮೀನು ಜತೆಗೆ ಕಾಲಾನಂತರ 10 ಎಕರೆಗೂ ಹೆಚ್ಚು ಜಮೀನನ್ನು ಸಂಸ್ಥೆ ಹೆಸರಲ್ಲಿ ಖರೀದಿಸಲಾಗಿತ್ತು. ಇದೇ ಜಮೀನು ಮತ್ತು ಕಾಲೇಜಿನ ಅಧಿಕಾರದ ವಿಚಾರವಾಗಿ ಸಂಸ್ಥೆಯಲ್ಲಿ ಸ್ವಾಮೀಜಿಗಳ ನಡುವೆ ಒಡಕು ಮೂಡಿ ಸದಾ ಜಗಳ ನಡೆಯುತ್ತಿತ್ತು.
2 ದಶಕದಿಂದ ನಡೆಯುತ್ತಿದ್ದ ಗಲಾಟೆ:
ಕಾಲೇಜಿನ ಪ್ರಾಂಶುಪಾಲರೂ ಆಗಿದ್ದ ಆಚಾರ್ಯ ಚಿನ್ಮಯಾನಂದ ಅವಧೂತರು ಮತ್ತು ಆಚಾರ್ಯ ಧರ್ಮಪ್ರಾಣಾನಂದ ಸ್ವಾಮಿಗಳ ಗುಂಪುಗಳ ಮಧ್ಯೆ 20 ವರ್ಷಗಳಿಂದಲೂ ಈ ತಿಕ್ಕಾಟ ನಡೆಯುತ್ತಿತ್ತು. ಆರಂಭದಲ್ಲಿ ಎಲ್ಲರೂ ಚೆನ್ನಾಗಿಯೇ ಇದ್ದರಾದರೂ ಕಾಲೇಜಿನ ವಿಸ್ತರಣೆಗಾಗಿ ಹೆಚ್ಚುವರಿ ಜಾಗ ಖರೀದಿಸಿದ ಬಳಿಕ ಬಣಜಗಳ ಶುರುವಾಯಿತು. ಈ ಜಗಳ ವಿಕೋಪಕ್ಕೆ ತಿರುಗಿ ಹಲವು ಬಾರಿ ಸ್ವಾಮೀಜಿಗಳು ಪೊಲೀಸ್ ಠಾಣೆಗೂ ಹೋಗಿದ್ದರು. ಕೊನೆಗೆ ಕೋರ್ಟ್ ಮೆಟ್ಟಿಲೇರಿದ್ದರು. ಈ ಜಗಳ ಹಾಗೂ ವಿದ್ಯಾರ್ಥಿಗಳ ಕೊರತೆಯಿಂದಾಗಿ ಒಂದೂವರೆ ದಶಕದ ಹಿಂದೆಯೇ ಕಾಲೇಜು ಕೂಡ ಮುಚ್ಚಲ್ಟಟ್ಟಿದೆ.
ಕೋರ್ಟ್‌ಗೆ ಹೋಗಬೇಕಿತ್ತು:
ಈ ವಿವಾದಕ್ಕೆ ಸಂಬಂಧಿಸಿ ಶನಿವಾರ ಚಿನ್ಮಯಾನಂದ ಶ್ರೀಗಳು ನ್ಯಾಯಾಲಯಕ್ಕೆ ಹೋಗಬೇಕಾಗಿತ್ತು. ಅದರಂತೆ ಅವರು ಬೆಳಗ್ಗೆ 6 ಗಂಟೆಗೆ ಸ್ನಾನಕ್ಕೆಂದು ಹೋದಾಗ ಅಲ್ಲಿಗೆ ಬಂದ ಆಚಾರ್ಯ ಧರ್ಮಪ್ರಾಣಾನಂದ, ಆಚಾರ್ಯ ಪ್ರಾಣೇಶ್ವರಾನಂದ ಮತ್ತು ಅರುಣ್ ಕುಮಾರ್ ನಡುವೆ ಮಾತಿಗೆ ಮಾತು ಬೆಳೆದಿದೆ. ಕೊನೆಗೆ ಮೂವರೂ ಸೇರಿ ಚಿನ್ಮಯಾನಂದ ಸ್ವಾಮೀಜಿ ಮೇಲೆ ದೊಣ್ಣೆಗಳಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಇದನ್ನು ಗಮನಿಸಿ ಸ್ಥಳಕ್ಕೆ ಬಂದ ಗ್ರಾಮಸ್ಥರು ಗಲಾಟೆಯಲ್ಲಿ ಗಾಯಗೊಂಡ ಸ್ವಾಮೀಜಿಯನ್ನು ಚಿಕಿತ್ಸೆಗಾಗಿ ಕೋಲಾರದ ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
ಸುದ್ದಿ ತಿಳಿದು ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರವಿಶಂಕರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಮಾಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.