ಮುದ್ದೆ ಕೋಲಿಂದ ಹೊಡೆದು ಪತಿಯ ಕೊಲೆ

| Published : Jul 04 2025, 11:54 PM IST

ಸಾರಾಂಶ

ಬೆಂಗಳೂರು ತಮ್ಮ ಮನೆ ಕೆಲಸದ ಮಹಿಳೆ ಜತೆ ಅಕ್ರಮ ಸಂಬಂಧ ಶಂಕೆ ಮೇರೆಗೆ ಪತಿಯನ್ನು ಕೊಂದು ಬಳಿಕ ಹೃದಯಾಘಾತದ ಸಾವು ಎಂದು ನಾಟಕವಾಡಿದ್ದ ಮೃತನ ಎರಡನೇ ಪತ್ನಿ ಕೊನೆಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದಾಳೆ.

ಪೋಟೋ ಇದೆ. ಕನ್ನಡಪ್ರಭ ವಾರ್ತೆ ಬೆಂಗಳೂರು

ತಮ್ಮ ಮನೆ ಕೆಲಸದ ಮಹಿಳೆ ಜತೆ ಅಕ್ರಮ ಸಂಬಂಧ ಶಂಕೆ ಮೇರೆಗೆ ಪತಿಯನ್ನು ಕೊಂದು ಬಳಿಕ ಹೃದಯಾಘಾತದ ಸಾವು ಎಂದು ನಾಟಕವಾಡಿದ್ದ ಮೃತನ ಎರಡನೇ ಪತ್ನಿ ಕೊನೆಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದಾಳೆ.

ಭವಾನಿ ನಗರದ ನಿವಾಸಿ ಭಾಸ್ಕರ್ (42) ಕೊಲೆಯಾದ ದುರ್ದೈವಿ. ಹತ್ಯೆ ಸಂಬಂಧ ಮೃತನ ಪತ್ನಿ ಶೃತಿಯನ್ನು ಸದ್ದುಗುಂಟೆಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕೆಲ ದಿನಗಳ ಹಿಂದೆ ಸ್ನಾನದ ಮನೆಯಲ್ಲಿ ಕುಸಿದು ಬಿದ್ದು ಭಾಸ್ಕರ್ ಮೃತಪಟ್ಟಿದ್ದಾರೆ ಎಂದು ದೂರು ದಾಖಲಾಗಿತ್ತು. ಆದರೆ ಮೃತದೇಹದ ಮರಣೋತ್ತರ ಪರೀಕ್ಷಾ ವರದಿಯಲ್ಲಿ ಸತ್ಯ ಬಯಲಾಗಿದೆ. ಭಾಸ್ಕರ್ ಮೇಲೆ ಹಲ್ಲೆ ನಡೆದು ಆಂತರಿಕ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ಹೇಳಿದ್ದರು. ಶಂಕೆ ಮೇರೆಗೆ ಶೃತಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಿಸಿದಾಗ ತಪ್ಪೊಪ್ಪಿಕೊಂಡಿದ್ದಾಳೆ.

12 ವರ್ಷಗಳ ಹಿಂದೆ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಶೃತಿ ಜತೆ ಖಾಸಗಿ ಕಂಪನಿ ಉದ್ಯೋಗಿ ಭಾಸ್ಕರ್‌ 2ನೇ ವಿವಾಹವಾಗಿದ್ದು, ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಇದಕ್ಕೂ ಮುನ್ನ ಮೊದಲ ಪತ್ನಿಗೆ ವಿಚ್ಛೇದನ ನೀಡಿದ್ದನು. ಸದ್ದುಗುಂಟೆಪಾಳ್ಯದ ಹತ್ತಿರದ ಭವಾನಿ ನಗರದಲ್ಲಿ ನೆಲೆಸಿದ್ದ ಭಾಸ್ಕರ್‌ ಕುಟುಂಬ ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿತ್ತು. ತಿಂಗಳ ಸಂಬಳವಲ್ಲದೆ ಆತನಿಗೆ ವಾಣಿಜ್ಯ ಕಟ್ಟಡಗಳಿಂದ ಪ್ರತಿ ತಿಂಗಳು 1.5 ಲಕ್ಷ ದಷ್ಟು ಬಾಡಿಗೆ ಬರುತ್ತಿತ್ತು ಎಂದು ಮೂಲಗಳು ಹೇಳಿವೆ.

ಪರಸ್ತ್ರೀಯರ ಸಂಗ ತಂದ ಸಾವು : ಮೃತ ಭಾಸ್ಕರ್ ಸ್ತ್ರೀಲೋಲ. ಮಹಿಳೆಯರ ಜತೆ ಸ್ನೇಹ ಮಾಡಿ ಮೋಜು ಮಸ್ತಿ ಮಾಡುವುದು ಆತನ ಖಯಾಲಿ ಆಗಿತ್ತು. ಮನೆ ಕಡೆ ಆತನಿಗೆ ಲಕ್ಷ್ಯವಿರಲಿಲ್ಲ. ವಾರಕ್ಕೆರಡು ಮೂರು ದಿನ ಮನೆ ಕಡೆ ಸುಳಿಯುತ್ತಿರಲಿಲ್ಲ. ತನ್ನ ಮಕ್ಕಳ ಬಗ್ಗೆಯೂ ಕಾಳಜಿ ಇರಲಿಲ್ಲ. ಹೀಗಾಗಿ ತನ್ನ ಪತಿಯ ಉಡಾಫೆ ವರ್ತನೆಗೆ ಶೃತಿ ಬೇಸರ ಗೊಂಡಿದ್ದಳು. ಇದೇ ವಿಚಾರವಾಗಿ ಮನೆಯಲ್ಲಿ ಆಗಾಗ ಜಗಳವಾಗುತ್ತಿತ್ತು. ಇತ್ತೀಚೆಗೆ ಮನೆ ಕೆಲಸದ ಮಹಿಳೆ ಜತೆ ಪತಿ ಅಕ್ರಮ ಸಂಬಂಧ ಹೊಂದಿದ್ದಾನೆ ಎಂದು ಆಕೆಗೆ ಅನುಮಾನವಿತ್ತು. ಕೌಟುಂಬಿಕ ಕಲಹದ ಬೆಂಕಿಗೆ ಈ ಗುಮಾನಿ ಮತ್ತಷ್ಟು ತುಪ್ಪ ಸುರಿಯಿತು. ದಾಂಪತ್ಯ ಜಗಳ ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯ ಕಂಡಿದೆ.

ಜೂ.27 ರಂದು ರಾತ್ರಿ ಮದ್ಯ ಸೇವಿಸಿ ಭಾಸ್ಕರ್ ಮನೆಗೆ ಬಂದಾಗ ಶೃತಿ ಆಕ್ಷೇಪಿಸಿದ್ದಾಳೆ. ಈ ಹಂತದಲ್ಲಿ ಸತಿ-ಪತಿ ಮಧ್ಯೆ ಮಾತಿನ ಚಕಮಕಿ ನಡೆದು ಪರಸ್ಪರ ಕೈ-ಕೈ ಮಿಲಾಯಿಸಿದ್ದಾರೆ. ಈ ಹಂತದಲ್ಲಿ ಶೃತಿ, ಪತಿ ಮುಖಕ್ಕೆ ಬಲವಾಗಿ ಗುದ್ದಿದ್ದಾಳೆ. ಈ ಪೆಟ್ಟಿಗೆ ಮದ್ಯದ ಅಮಲಿನಲ್ಲಿದ್ದ ಆತ ಕುಸಿದು ಬಿದ್ದಿದ್ದಾನೆ. ಬಳಿಕ ಅಡುಗೆ ಮನೆಯಿಂದ ಹಿಟ್ಟಿನ ಕೋಲು ತಂದು ಗಂಡನಿಗೆ ಬಾರಿಸಿದ್ದಾಳೆ. ಈ ಹೊಡೆತದಿಂದ ಭಾಸ್ಕರ್‌ ಕೊನೆಯುಸಿರೆಳೆದಿದ್ದಾನೆ.

ಪತಿ ಸಾವಿನ್ನಪ್ಪಿದ್ದರಿಂದ ಆತಂಕಗೊಂಡ ಶೃತಿ, ಮೃತದೇಹವನ್ನು ಸ್ನಾನ ಕೋಣೆಗೆ ಎಳೆದೊಯ್ದು ತೊಳೆದಿದ್ದಾಳೆ. ಮರು ದಿನ ಬೆಳಗ್ಗೆ ತಮ್ಮ ಸಂಬಂಧಿಕರ ಮುಂದೆ ಪತಿ ಸ್ನಾನದ ಮನೆಯಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ ಎಂದು ಸುಳ್ಳಿನ ಕತೆ ಹೆಣೆದಿದ್ದಳು. ಆದರೆ ಸೊಸೆ ಮೇಲೆ ಭಾಸ್ಕರ್ ಪೋಷಕರು ಶಂಕೆ ವ್ಯಕ್ತಪಡಿಸಿ ಸದ್ದುಗುಂಟೆಪಾಳ್ಯ ಠಾಣೆಯಲ್ಲಿ ಅವರು ನೀಡಿದ ದೂರಿನ ಮೇರೆಗೆ ಶಂಕಾಸ್ಪದ ಸಾವು ಪ್ರಕರಣ ದಾಖಲಾಯಿತು. ಮರಣೋತ್ತರ ಪರೀಕ್ಷಾ ವರದಿಯಲ್ಲಿ ಕೋಲಿನಿಂದ ನಡೆದ ಹಲ್ಲೆಯಿಂದ ಆತ ಮೃತಪಟ್ಟಿದ್ದಾನೆ ಎಂದು ವೈದ್ಯರು ಅಭಿಪ್ರಾಯ ತಿಳಿಸಿದ್ದರು. ಈ ವರದಿ ಆಧರಿಸಿ ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.