ಆಸ್ತಿಯಲ್ಲಿ ಪಾಲು ಕೇಳಿದ ಮಗನನನ್ನೆ ಕೊಲೆ ಮಾಡಿದ ಹಳಿಯಾಳದ ಅಪ್ಪ-ಅಮ್ಮ ಹಾಗೂ ಅವರಿಗೆ ಸಹಕರಿಸಿದ ಇನ್ನೋರ್ವ ಮಗನಿಗೂ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ಹಳಿಯಾಳ: ಆಸ್ತಿಯಲ್ಲಿ ಪಾಲು ಕೇಳಿದ ಮಗನನನ್ನೆ ಕೊಲೆ ಮಾಡಿದ ಅಪ್ಪ-ಅಮ್ಮ ಹಾಗೂ ಅವರಿಗೆ ಸಹಕರಿಸಿದ ಇನ್ನೋರ್ವ ಮಗನಿಗೂ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ಕೇಶವ್ ಕಿತ್ತೂರಕರ್ ಅವರನ್ನು ಕೊಲೆ ಮಾಡಿದ ಪಾಂಡುರಂಗ ಕಿತ್ತೂರಕರ್, ಆತನ ಪತ್ನಿ ಲತಾ (ತುಳಸಾಯಿ) ಕಿತ್ತೂರಕರ್ ಹಾಗೂ ಕಿರಿಯ ಮಗ ಅಕ್ಷಯ (ಆಕಾಶ) ಕಿತ್ತೂರಕರ್ ಜೀವಾವಧಿ ಶಿಕ್ಷೆಗೆಗೆ ಒಳಗಾದವರು.ಹಳಿಯಾಳ ತಾಲೂಕಿನ ಬಿದ್ರೋಳ್ಳಿ ಗ್ರಾಮದಲ್ಲಿ 2019ರಲ್ಲಿ ಈ ಕೊಲೆ ನಡೆದಿತ್ತು.
ಪಾಂಡುರಂಗ ಕಿತ್ತೂರಕರ ಅವರು ತಮ್ಮ ಪತ್ನಿ ಲತಾ (ತುಳಸಾಯಿ) ಕಿತ್ತೂರಕರ್ ಹಾಗೂ ಕಿರಿಯ ಮಗ ಅಕ್ಷಯ (ಆಕಾಶ್) ಕಿತ್ತೂರಕರ ಜತೆ ಸೇರಿ ಕೇಶವ್ ಕಿತ್ತೂರಕರ್ ಕೊಲೆ ಮಾಡಿದ್ದರು. ಕೊಲೆ ಮಾಡಿದ ಮರುದಿನ ಬಿದ್ರೋಳ್ಳಿ ಗ್ರಾಮದ ಗಣಪತಿ ಯಲ್ಲಪ್ಪಾ ಕಿತ್ತೂರಕರ್ ಹಾಗೂ ಲಕ್ಷ್ಮಣ ಕೇದಾರಿ ಕಿತ್ತೂರಕರ್ ಅವರ ಸಹಾಯ ಪಡೆದು ಸಾಕ್ಷಿ ನಾಶದ ಪ್ರಯತ್ನ ನಡೆಸಿದ್ದ ಕುರಿತು ಅಂದಿನ ಹಳಿಯಾಳ ಸಿಪಿಐ ಬಿ.ಎಸ್. ಲೋಕಾಪುರ್ ಅವರು ಪ್ರಕರಣ ದಾಖಲಿಸಿಕೊಂಡು ಸಮಗ್ರ ವಿಚಾರಣೆ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.ಸರ್ಕಾರಿ ಅಭಿಯೋಜಕ ರಾಜೇಶ್ ಮಳಗಿಕರ ಅವರು ವಾದ ಮಂಡಿಸಿದ್ದರು. ಶಿರಸಿಯ 1ನೇ ಅಧಿಕ ಜಿಲ್ಲಾ ಮತ್ತು ಸೆಶೆನ್ಸ್ ನ್ಯಾಯಾಲಯ ಶುಕ್ರವಾರ ಪ್ರಕರಣದ ತೀರ್ಪು ಪ್ರಕಟಿಸಿದೆ. ಕೊಲೆ ಪ್ರಕರಣದಲ್ಲಿ ಮೂವರ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿದೆ. ಯಲ್ಲಾಪುರ ಪೀಠಾಸಿನ ನ್ಯಾಯಾಧೀಶರಾದ ಕಿರಣ ಕಿಣಿ ಈ ತೀರ್ಪು ನೀಡಿದರು.
ತಲೆಮರೆಸಿಕೊಂಡಿದ್ದ ಆರೋಪಿ ಪೊಲೀಸರ ಬಲೆಗೆ:ನ್ಯಾಯಾಲಯದ ಸತತ ಆದೇಶಗಳು ಹಾಗೂ ವಾರಂಟ್‌ಗಳನ್ನು ಲೆಕ್ಕಿಸದೆ ಬರೋಬ್ಬರಿ 4 ವರ್ಷಗಳಿಂದ ಪೊಲೀಸರಿಂದ ತಲೆಮರೆಸಿಕೊಂಡು ತಿರುಗಾಡುತ್ತಿದ್ದ ವಂಚನೆ ಪ್ರಕರಣದ ಆರೋಪಿಯನ್ನು ಕೊನೆಗೂ ಬಂಧಿಸುವಲ್ಲಿ ಕಾರವಾರ ನಗರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಅಂಕೋಲಾ ತಾಲೂಕಿನ ಅಲಗೇರಿ ಗ್ರಾಮದ ನಿವಾಸಿ ವಿಕ್ರಂ ಎನ್. ಪಂತ ಬಂಧಿತ ಆರೋಪಿಯಾಗಿದ್ದಾನೆ. ಈತನ ವಿರುದ್ಧ 2022ರಲ್ಲಿ ಹಣಕಾಸು ವಂಚನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿತ್ತು. ಈತ ವಿಚಾರಣೆಗೆ ಹಾಜರಾಗದೆ ಸತತವಾಗಿ ಗೈರಾಗುತ್ತಿದ್ದ. ಆರೋಪಿಯ ವಿರುದ್ಧ ಕಾರವಾರದ ಸಿವಿಲ್ ಜಡ್ಜ್ ಹಾಗೂ ಸಿಜೆಎಂ ನ್ಯಾಯಾಲಯ ಬರೋಬ್ಬರಿ 4 ಜಾಮೀನು ರಹಿತ ವಾರಂಟ್‌ಗಳು, 5 ಪ್ರೋಕ್ಲಮೇಷನ್ ವಾರಂಟ್‌ಗಳು ಹಾಗೂ 1 ಅಟ್ಯಾಚ್‌ಮೆಂಟ್ ಆದೇಶವನ್ನು ಹೊರಡಿಸಿತ್ತು. ಇಷ್ಟೆಲ್ಲ ಕಟ್ಟುನಿಟ್ಟಿನ ಆದೇಶಗಳಿದ್ದರೂ ಆರೋಪಿತನು ನ್ಯಾಯಾಂಗ ವ್ಯವಸ್ಥೆಯನ್ನು ನಿರ್ಲಕ್ಷಿಸಿ, ವಿಚಾರಣೆಗೆ ಹಾಜರಾಗದೇ ದೀರ್ಘಕಾಲದಿಂದ ಅಜ್ಞಾತವಾಸದಲ್ಲಿದ್ದನು.ತಲೆಮರೆಸಿಕೊಂಡಿದ್ದ ಆರೋಪಿಯ ಚಲನವಲನಗಳ ಬಗ್ಗೆ ಇತ್ತೀಚೆಗೆ ಖಚಿತ ಮಾಹಿತಿ ಕಲೆಹಾಕಿದ ಕಾರವಾರ ನಗರ ಪೊಲೀಸರು, ಏ. 8ರಂದು ಕಾರ್ಯಾಚರಣೆ ನಡೆಸಿ, ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯನ್ನು ಕೂಡಲೇ ನ್ಯಾಯಾಲಯದ ಮುಂದೆ ಹಾಜರುಪಡಿಸಿ ಮುಂದಿನ ಕಾನೂನು ಕ್ರಮ ಜರುಗಿಸಲಾಗಿದೆ.ಈ ಸುದೀರ್ಘ ಹಾಗೂ ಯಶಸ್ವಿ ಕಾರ್ಯಾಚರಣೆಯಲ್ಲಿ ಕಾರವಾರ ನಗರ ಪೊಲೀಸ್ ಠಾಣೆಯ ಸಿಬ್ಬಂದಿ ಗುರು ನಾಯಕ್ ಅವರು ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದು, ಇವರ ಕರ್ತವ್ಯನಿಷ್ಠೆ ಹಾಗೂ ಕಾರ್ಯವೈಖರಿಯನ್ನು ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಶ್ಲಾಘಿಸಿದ್ದಾರೆ.