ಸಾರಾಂಶ
ಕೊಲೆ ಪ್ರಕರಣದಲ್ಲಿ ನನ್ನ ಮಗಳ ಪಾತ್ರ ಇಲ್ಲವೇ ಇಲ್ಲ. ಆಕೆ ಎರಡು ವರ್ಷಗಳಿಂದ ಅತ್ಯಾಚಾರಕ್ಕೆ ಒಳಗಾಗಿದ್ದರೂ ಧ್ವನಿ ಎತ್ತಲು ಆಗದೆ ಸುಮ್ಮನಿದ್ದಾಳೆ. ಈಗ ಕೊಲೆಯಾದ ಬಳಿಕ ಆಕೆಯ ಮೇಲೆ ಗೂಬೆ ಕೂರಿಸಿಲಾಗಿದೆ.
ಕೊಪ್ಪಳ:
ಕೊಲೆಯಾದ ಗವಿಸಿದ್ದಪ್ಪ ನಾಯಕ ನನ್ನ ಮಗಳು ಅಪ್ರಾಪ್ತೆಯಾಗಿದ್ದರೂ ನಿರಂತರ ಎರಡು ವರ್ಷ ಅತ್ಯಾಚಾರ ಎಸಗಿದ್ದಾನೆಂದು ಆರೋಪಿಸಿರುವ ಬಾಲಕಿ ತಾಯಿ, ತನ್ನ ಇನ್ನೊಬ್ಬ ಮಗಳೊಂದಿಗೆ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಧರಣಿ ಆರಂಭಿಸಿದ್ದು ನ್ಯಾಯ ಒದಗಿಸುವಂತೆ ಒತ್ತಾಯಿಸಿದ್ದಾರೆ.ನನ್ನ ಮಗಳಿಗೆ ನ್ಯಾಯ ಸಿಗುವ ವರೆಗೂ ಧರಣಿ ನಿಲ್ಲಿಸುವುದಿಲ್ಲ. ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಲು ಕಾರಣವಾಗಿರುವವರ ವಿರುದ್ಧವೂ ಕ್ರಮವಹಿಸಬೇಕು ಎಂದು ಆಗ್ರಹಿಸಿದ್ದಾರೆ.
ಕೊಲೆ ಪ್ರಕರಣದಲ್ಲಿ ನನ್ನ ಮಗಳ ಪಾತ್ರ ಇಲ್ಲವೇ ಇಲ್ಲ. ಆಕೆ ಎರಡು ವರ್ಷಗಳಿಂದ ಅತ್ಯಾಚಾರಕ್ಕೆ ಒಳಗಾಗಿದ್ದರೂ ಧ್ವನಿ ಎತ್ತಲು ಆಗದೆ ಸುಮ್ಮನಿದ್ದಾಳೆ. ಈಗ ಕೊಲೆಯಾದ ಬಳಿಕ ಆಕೆಯ ಮೇಲೆ ಗೂಬೆ ಕೂರಿಸಿಲಾಗಿದೆ. ಅಕೆಯೇ ಕರೆಯಿಸಿ ಕೊಲೆ ಮಾಡಿಸಿದ್ದಾಳೆ ಎಂದು ಆರೋಪಿಸುತ್ತಿದ್ದಾರೆ. ನನ್ನ ಮಗಳನ್ನು ಬಾಲ ನ್ಯಾಯ ಮಂಡಳಿಗೆ ಒಪ್ಪಿಸಿದ್ದು ದಾವಣಗೆರೆಯ ಬಾಲಮಂದಿರದಲ್ಲಿ ಇರಿಸಲಾಗಿದೆ. ಇದರಿಂದ ನನ್ನ ಮಗಳು ಜರ್ಝರಿತವಾಗಿದ್ದು ನಮ್ಮ ಕುಟುಂಬ ತೀವ್ರ ಆತಂಕಗೊಂಡಿದೆ. ಆಕೆ ನೋವು ಅನುಭವಿಸಿದರೂ ಆಕೆಯ ಮೇಲೆಯೇ ಈಗ ಗವಿಸಿದ್ದಪ್ಪ ನಾಯಕ ಕುಟುಂಬಸ್ಥರು ಆರೋಪಿಸಿದ್ದಾರೆಂದು ಕಣ್ಣೀರು ಹಾಕಿದರು.ನನ್ನ ಮಗಳ ಮೇಲೆ ಕೊಲೆಯಾಗುವ ಮುನ್ನ ಅತ್ಯಾಚಾರ ಮಾಡುವುದಕ್ಕೆ ಪರೋಕ್ಷ ಮತ್ತು ಪ್ರತ್ಯಕ್ಷ ಸಹಕಾರ ನೀಡಿದವರೆಲ್ಲರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ನಡುವೆ ಧರಣಿ ನಿರತ ತಾಯಿ, ಮಗಳನ್ನು ಪೊಲೀಸರು ಮನವೊಲಿಸಿ ಪೊಲೀಸ್ ವರಿಷ್ಠಾಧಿಕಾರಿ ಬಳಿಕ ಕರೆದುಕೊಂಡು ಹೋಗಲು ಯತ್ನಿಸಿದರಾದರೂ ಒಪ್ಪದೇ ಧರಣಿ ಮುಂದುವರಿಸಿದ್ದಾರೆ.ಗವಿಸಿಪ್ಪಪ್ಪ ಕೊಲೆ ಪ್ರಕರಣವನ್ನು ಎನ್‌ಐಎಗೆ ವಹಿಸಬೇಕೆಂದು ಬುಧವಾರ ಬಿಜೆಪಿ ಹಾಗೂ ಜೆಡಿಎಸ್ ನಿಯೋಗ ಮೃತನ ಕುಟುಂಬಸ್ಥರೊಂದಿಗೆ ರಾಜ್ಯಪಾಲರನ್ನು ಭೇಟಿ ಮಾಡಿದ ಬೆನ್ನಲ್ಲೆ ಇದೀಗ ಯುವತಿ ತಾಯಿ ಪ್ರತಿಭಟನೆಗೆ ಮುಂದಾಗಿದ್ದು ಕೊಲೆ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ.
ನನ್ನ ಮಗಳ ಮೇಲೆ ಕೊಲೆಯಾದ ವ್ಯಕ್ತಿ ಅತ್ಯಾಚಾರ ಮಾಡಿದ್ದಾನೆಂದು ಬಾಲಕಿಯ ತಾಯಿಯೇ ಇದೀಗ ಗಂಭೀರ ಆರೋಪ ಮಾಡಿರುವುದರಿಂದ ಪ್ರಕರಣ ಮತ್ತಷ್ಟು ಗಂಭೀರ ಸ್ವರೂಪ ಪಡೆದುಕೊಂಡಿದೆ.