ಸಾರಾಂಶ
ಭಟ್ಕಳ:
ಪುರಾಣ ಪ್ರಸಿದ್ಧ ಪಂಚ ಶಿವಕ್ಷೇತ್ರಗಳಲ್ಲಿ ಒಂದಾದ ಶ್ರೀಮುರ್ಡೇಶ್ವರ ದೇವರ ಮಹಾರಥೋತ್ಸವ ಶನಿವಾರ ಸಂಜೆ ವಿಜೃಂಭಣೆಯಿಂದ ಸಂಪನ್ನಗೊಂಡಿತು.ಮಕರ ಸಂಕ್ರಮಣದ ದಿನದಿಂದಲೇ ಮಹಾರಥೋತ್ಸವದ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡಿದ್ದವು. ಮಹಾರಥೋತ್ಸವದ ಪ್ರಯುಕ್ತ ದೇವಸ್ಥಾನದಲ್ಲಿ ಶನಿವಾರ ಬೆಳಗ್ಗೆಯಿಂದಲೇ ವಿಶೇಷ ಪೂಜೆ, ಪುನಸ್ಕಾರ, ಹೋಮ ಹವನಗಳು ಜರುಗಿದವು. ಬೆಳಗ್ಗೆಯಿಂದ ಸಂಜೆ ತನಕ ಮಹಾರಥೋತ್ಸವ ಆರಂಭಗೊಳ್ಳುವ ವರೆಗೂ ಭಕ್ತರು ರಥಕಾಣಿಕೆ, ಪೂಜೆ ಸಲ್ಲಿಸಿದರು.ರಥೋತ್ಸವದ ಧಾರ್ಮಿಕ ವಿಧಿ-ವಿಧಾನಗಳನ್ನು ದೇವಸ್ಥಾನದ ಅರ್ಚಕ ಜಯರಾಮ ಅಡಿಗಳ ಮತ್ತು ಅವರ ತಂಡ ನಡೆಸಿಕೊಟ್ಟಿತು. ಶನಿವಾರ ಸಂಜೆ 5.15ಕ್ಕೆ ಉತ್ಸವ ಮೂರ್ತಿಯನ್ನು ಹೊತ್ತ ಬ್ರಹ್ಮರಥ ಎಳೆಯುವ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಪತ್ನಿ ಪುಷ್ಪಲತಾ ವೈದ್ಯ, ಪುತ್ರಿ ಬೀನಾ ವೈದ್ಯ, ದೇವಸ್ಥಾನದ ಆಡಳಿತ ಮೊಕ್ತೇಸರ ಸತೀಶ ಆರ್. ಶೆಟ್ಟಿ, ದೇವಸ್ಥಾನದ ವ್ಯವಸ್ಥಾಪಕ ಮಂಜುನಾಥ ಶೆಟ್ಟಿ, ಈಶ್ವರ ಎನ್. ನಾಯ್ಕ, ಗೌರೀಶ ನಾಯ್ಕ, ಆರ್ ಆರ್. ಶ್ರೇಷ್ಟಿ, ಗೋಪಾಲ ನಾಯ್ಕ, ಈಶ್ವರ ದೊಡ್ಮನೆ, ಕಾಯ್ಕಿಣಿ ಗ್ರಾಪಂ ಅಧ್ಯಕ್ಷ ರಾಜು ನಾಯ್ಕ ಸೇರಿದಂತೆ ಮಾವಳ್ಳಿ ಗ್ರಾಪಂ ಸದಸ್ಯರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು, ವಿವಿಧ ಸಮಾಜದ ಮುಖಂಡರು ಉಪಸ್ಥಿತರಿದ್ದರು.ಮುಂಜಾಗ್ರತಾ ಕ್ರಮವಾಗಿ ಬೀಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಜ. ೨೨ರಂದು ಸೋಮವಾರ ಚೂರ್ಣೋತ್ಸವ, ಅವಭೃಥ ಸ್ನಾನ, ಧ್ವಜಾರೋಹಣ, ಅಂಕುರಾರೋಪಣ ನಡೆಯಲಿದ್ದು, ಅಂದು ರಥೋತ್ಸವದ ಕಾರ್ಯಕ್ರಮಗಳು ಮುಕ್ತಾಯವಾಗಲಿದೆ. ಪ್ರತಿ ವರ್ಷದಂತೆ ಈ ಸಲವೂ ಸಹ ಮಹಾಥೋತ್ಸವದಲ್ಲಿ ಪ್ರವಾಸಿಗರು ಸೇರಿದಂತೆ ಸ್ಥಳೀಯ ಸಾವಿರಾರರು ಭಕ್ತರು ಪಾಲ್ಗೊಂಡಿದ್ದರು.
ರಥೋತ್ಸವದ ಹಿನ್ನೆಲೆ ದೇವಸ್ಥಾನ ಸೇರಿದಂತೆ ದೇವಸ್ಥಾನದ ಆವರಣದಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು.