ಮುರಿನಕಟ್ಟೆ ವಿಚಾರ ಮುಸ್ಲಿಮರಿಗೆ ಸಂಬಂಧಿಸಿದ್ದಲ್ಲ: ಕಟ್ಟೆ ಧ್ವಂಸ ತೀರಾ ಖಂಡನೀಯ

ಕನ್ನಡಪ್ರಭ ವಾರ್ತೆ ಭಟ್ಕಳ

ಮುರಿನಕಟ್ಟೆಯನ್ನು ಹೆದ್ದಾರಿ ಮಧ್ಯದಲ್ಲೇ ನಿರ್ಮಿಸಲು ಒಟ್ಟಾಭಿಪ್ರಾಯ ಸಂಗ್ರಹಿಸಲಾಗಿದ್ದು, ಜಿಲ್ಲಾಡಳಿತ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳ ಜತೆ ಚರ್ಚೆ ನಡೆಸಲಾಗಿದೆ. ಶೀಘ್ರದಲ್ಲಿ ಹಿಂದೂಗಳ ಧಾರ್ಮಿಕ ಆಚರಣೆಗೆ ಯಾವುದೇ ಧಕ್ಕೆ ಬಾರದಂತೆ ಹಿಂದೆ ಕಟ್ಟೆ ಇದ್ದ ಸ್ಥಳದಲ್ಲೇ ಮುರಿನಕಟ್ಟೆ ನಿರ್ಮಿಸಲಾಗುವುದು ಎಂದು ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಪ್ರವಾಸಿ ಮಂದಿರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮುರಿನಕಟ್ಟೆಯನ್ನು ಈಗಿದ್ದ ಸ್ಥಳದಲ್ಲೇ ಸುಮಾರು 150 ಚದರ ಅಡಿ ಪ್ರದೇಶದಲ್ಲಿ ನಿರ್ಮಿಸಲಾಗುತ್ತದೆ. ಹೆದ್ದಾರಿ ಪ್ರಾಧಿಕಾರದ ವತಿಯಿಂದ ಈ ಬಗ್ಗೆ ನೀಲ ನಕ್ಷೆಯನ್ನು ಸಹ ತಯಾರಿಸಲಾಗಿದ್ದು ಜಾಗ ಗುರುತಿಸಿಕೊಂಡು ಆದಷ್ಟು ಶೀಘ್ರದಲ್ಲಿ ಕಟ್ಟೆ ನಿರ್ಮಾಣ ಮಾಡಲಿದ್ದೇವೆ ಎಂದರು.

ಮುರಿನಕಟ್ಟೆಗೆ ಯಾವುದೇ ರೀತಿಯ ತೊಂದರೆಯಾಗದಂತೆ ಲೈಟಿಂಗ್, ಗ್ರಿಲ್ಸ್ ಹಾಕಲಾಗುವುದು, ಅದರ ಪಕ್ಕದಲ್ಲಿ ಬಸ್ ಬೇ ನಿರ್ಮಾಣ ಮಾಡಲು ಕೂಡಾ ಕ್ರಮ ಕೈಗೊಳ್ಳಲಾಗುವುದು ಎಂದ ಅವರು, ಯಾವುದೇ ರೀತಿಯಲ್ಲಿ ವಾಹನ ಓಡಾಟಕ್ಕೆ ತೊಂದರೆಯಾಗದಂತೆ ನೀಲ ನಕ್ಷೆ ತಯಾರಿಸಲಾಗಿದೆ ಎಂದರು.


ಸುದ್ದಿಗಾರರು ಕೇಳಿದ ಪ್ರಶ್ನೆಗುತ್ತರಿಸಿದ ಅವರು ಯಾವುದೇ ಕಾರಣಕ್ಕೂ ರಾಷ್ಟ್ರೀಯ ಹೆದ್ದಾರಿ ವಶಪಡಿಸಿಕೊಂಡ ಜಾಗಾವನ್ನು ಅತಿಕ್ರಮಣ ಮಾಡಲು ಬಿಡುವುದಿಲ್ಲ. ಕಾನೂನಾತ್ಮಕವಾಗಿ ಎಲ್ಲಾ ಕೆಲಸಗಳನ್ನು ಕೂಡಾ ತ್ವರಿತಗತಿಯಲ್ಲಿ ಮಾಡಿ ಮುಗಿಸುತ್ತೇವೆ ಎಂದರು.

ಕಟ್ಟೆ ನಿರ್ಮಾಣವನ್ನು ಸೌಹಾರ್ದಯುತವಾಗಿ ಮಾಡಲಾಗುವುದು. ಮುಸ್ಲಿಂ ಮತಾಂಧರು, ಕೆರಳಿದ ಯುವಕರ ಗುಂಪು ನಮ್ಮ ಮುರಿನಕಟ್ಟೆಯ ಸನಿಹದಲ್ಲಿ ನಿರ್ಮಿಸಲಾದ ನೂತನ ಕಟ್ಟೆಯನ್ನು ಧ್ವಂಸ ಮಾಡಿರುವುದು ತೀರಾ ಖಂಡನೀಯ. ಮುರಿನಕಟ್ಟೆಯ ವಿಚಾರ ಹಿಂದೂಗಳಿಗೆ, ಜಿಲ್ಲಾಡಳಿತಕ್ಕೆ ಮತ್ತು ಎನ್ಎಚ್ಐಎಗೆ ಸಂಬಂಧಿಸಿದ್ದು. ಆದರೆ ಭಟ್ಕಳದ ತಂಝೀಂ ಸಂಸ್ಥೆ, ಮುಸ್ಲಿಮರು ಇದರಲ್ಲಿ ತಲೆ ಹಾಕಿರುವುದು ಸರಿಯಲ್ಲ. ಭಟ್ಕಳದಲ್ಲಿ ಶಾಂತಿ ಕದಡಲು ಕಾಲು ಕೆರೆದು ಜಗಳ ಮಾಡಿದಂತಾಗಿದೆ. ರಾಜ್ಯದಲ್ಲಿ ಬಿಗು ಆಡಳಿತ ವ್ಯವಸ್ಥೆ ಇದ್ದಿದ್ದರೆ ಇಂತಹ ಕೃತ್ಯ ನಡೆಯುತ್ತಿರಲಿಲ್ಲ. ಕಾಂಗ್ರೆಸ್ಸಿನ ಓಲೈಕೆ ರಾಜಕಾರಣದಿಂದಲೇ ರಾಜ್ಯದಲ್ಲಿ ಕಾನೂನು ಕೈಗೆ ತೆಗದುಕೊಳ್ಳುವ ಕೃತ್ಯ ನಡೆಯುತ್ತಿದೆ ಅಪರಾಧಿ ಕೃತ್ಯಕ್ಕೆ ಕಾಂಗ್ರೆಸ್ ಸರಕಾರದ ಬೆಂಬಲ ಇದೆ ಎಂದು ಆರೋಪಿಸಿದರು. ಹಿಂದೂ ಸಂಘಟನೆಗಳು ಜೂ. 5ರಂದು ನಡೆಸುವ ಪ್ರತಿಭಟನೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಮುರಿನಕಟ್ಟೆಯಂತಹ ಧ್ವಂಸ ಕೃತ್ಯ ಮುಂದೆ ನಡೆಯಬಾರದು ಎನ್ನುವ ಉದ್ದೇಶದಿಂದ ಹಿಂದೂ ಸಂಘಟನೆಗಳು ಜಾಗೃತಿ ಮೂಡಿಸಿ ಪ್ರತಿಭಟನೆ ನಡೆಸುತ್ತಿದೆ. ಇದಕ್ಕೆ ನಮ್ಮ ಬೆಂಬಲ ಇದೆ ಎಂದರು.

ಮಾಜಿ ಶಾಸಕ ಸುನೀಲ ನಾಯ್ಕ ಮಾತನಾಡಿದರು. ಈ ಸಂದರ್ಭ ಪಶ್ಚಿಮ ಘಟ್ಟಗಳ ಕಾರ್ಯಪಡೆಯ ಮಾಜಿ ಅಧ್ಯಕ್ಷ ಗೋವಿಂದ ನಾಯ್ಕ, ಬಿಜೆಪಿ ಮಂಡಲಾಧ್ಯಕ್ಷ ಲಕ್ಷ್ಮೀನಾರಾಯಣ ನಾಯ್ಕ, ಜಿಲ್ಲಾ ಬಿಜೆಪಿ ಕಾರ್ಯದರ್ಶಿಗಳಾದ ಸುಬ್ರಾಯ ದೇವಡಿಗ, ಶ್ರೀಕಾಂತ ನಾಯ್ಕ, ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಶಿವಾನಿ ಶಾಂತರಾಮ, ಪ್ರಮುಖರಾದ ರಾಜೇಶ ನಾಯ್ಕ, ಖೇದಾರ ಕೊಲ್ಲೆ, ಭಾಸ್ಕರ ದೈಮನೆ, ಶ್ರೀನಿವಾಸ ನಾಯ್ಕ, ಪ್ರಮೋದ ಜೋಷಿ ಮುಂತಾದವರಿದ್ದರು. ಬಿಎಸ್‌ಎನ್‌ಎಲ್ ನೆಟವರ್ಕ್‌ ಸಮಸ್ಯೆ ಸರಿಪಡಿಸುತ್ತೇನೆಭಟ್ಕಳ ತಾಲ್ಲೂಕಿನ ಗ್ರಾಮಾಂತರ ಭಾಗದಲ್ಲಿ ಹೊಸದಾಗಿ ಬಿಎಸ್‌ಎನ್‌ಎಲ್ ಟವರ್ ನಿರ್ಮಿಸಲಾಗಿದೆ. ಆದರೆ ಹಲವು ಕಡೆ ನೆಟವರ್ಕ್‌ ಸಮಸ್ಯೆ ಇದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಗಮನಕ್ಕೆ ತಂದಾಗ, ಅವರು ಸಮಸ್ಯೆ ಬಗ್ಗೆ ಗೊತ್ತಿದೆ. ಸದ್ಯದಲ್ಲೇ ನೆಟವರ್ಕ್‌ ಸಮಸ್ಯೆ ಬಗೆಹರಿಸುತ್ತೇನೆ. ನನ್ನ ಮೇಲೆ ಜನರಿಗೆ ಬಹಳಷ್ಟು ನಿರೀಕ್ಷೆ ಇದೆ. ಎಲ್ಲಾ ಸಮಸ್ಯೆಗಳನ್ನು ಹಂತಹಂತವಾಗಿ ಬಗೆಹರಿಸುವ ಕೆಲಸ ಮಾಡುತ್ತಿದ್ದೇನೆ ಎಂದರು. ಪಟ್ಟಣದಲ್ಲಿ ನಡೆಯುತ್ತಿರುವ ಹೆದ್ದಾರಿ ಕಾಮಗಾರಿಯ ಬಗ್ಗೆಯೂ ಪ್ರಶ್ನಿಸಿದಾಗ, ಸಂಸದರು ಸಮಸ್ಯೆ ಸರಿಪಡಿಸಲಾಗುವುದು ಎಂದರು.

---

2ಬಿಕೆಲ್1: ಸುದ್ದಿಗೋಷ್ಠಿಯಲ್ಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿದರು.