ದಲಿತರ ಅಭಿವೃದ್ಧಿಗೆ ಶ್ರಮಿಸಿದ ಭೀಮಜ್ಜ-ಜ್ಞಾನಮೋಟೆ

| Published : Jul 15 2025, 01:00 AM IST

ದಲಿತರ ಅಭಿವೃದ್ಧಿಗೆ ಶ್ರಮಿಸಿದ ಭೀಮಜ್ಜ-ಜ್ಞಾನಮೋಟೆ
Share this Article
  • FB
  • TW
  • Linkdin
  • Email

ಸಾರಾಂಶ

ಮುರುಡಿ ಭೀಮಜ್ಜನವರು ಸ್ವಾತಂತ್ರ್ಯ ಹೋರಾಟಗಾರರಾಗಿ ನೂರಾರು ಹೋರಾಟಗಾರರನ್ನು ಸಂಘಟಿಸಿದರೆ, ಪುಂಡಲೀಕಪ್ಪ ಜ್ಞಾನಮೋಟೆ ಕುಷ್ಟಗಿ ಕ್ಷೇತ್ರದ ಶಾಸಕರಾಗಿ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ್ದಾರೆ.

ಕುಷ್ಟಗಿ:

ಸ್ವಾತಂತ್ರ್ಯ ಹೋರಾಟಗಾರರಾದ ಮುರುಡಿ ಭೀಮಜ್ಜನವರು, ಮಾಜಿ ಶಾಸಕ ಪುಂಡಲೀಕಪ್ಪ ಜ್ಞಾನಮೋಟೆ ಅವರ ಪುಣ್ಯಸ್ಮರಣೆಯ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.

ಪಟ್ಟಣದ ಬಸವ ಭವನದಲ್ಲಿ ನಡೆದ ಮುರುಡಿ ಭೀಮಜ್ಜನವರ 69ನೇ ಹಾಗೂ ಪುಂಡಲೀಕಪ್ಪ ಜ್ಞಾನಮೋಟೆ 12ನೇ ಪುಣ್ಯಸ್ಮರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮುರುಡಿ ಭೀಮಜ್ಜನವರು ಸ್ವಾತಂತ್ರ್ಯ ಹೋರಾಟಗಾರರಾಗಿ ನೂರಾರು ಹೋರಾಟಗಾರರನ್ನು ಸಂಘಟಿಸುವ ಮೂಲಕ ಹೋರಾಟ ಮಾಡಿದ್ದಾರೆ. ಅವರು ದೀನ-ದಲಿತರ, ಬಡವರ ಏಳಿಗೆಗೆ ಶ್ರಮಿಸಿದ್ದಾರೆ. ಅವರ ಇತಿಹಾಸ ತಿಳಿಸುವ ಕೆಲಸವಾಗಬೇಕು ಎಂದರು.

ಪುಂಡಲೀಕಪ್ಪ ಜ್ಞಾನಮೋಟೆ ಅವರು ಕುಷ್ಟಗಿ ಕ್ಷೇತ್ರದ ಶಾಸಕರಾಗಿ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಅವರ ಪ್ರೇರಣೆಯಿಂದ ನನ್ನ ತಂದೆ ರಾಜಕಾರಣಕ್ಕೆ ಬಂದು ಶಾಸಕರಗಿ ಕೆಲಸ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಪುಣ್ಯಸ್ಮರಣೆಯನ್ನು ಹಬ್ಬದಂತೆ ಆಚರಿಸಬೇಕು ಎಂದ ಅವರು, ಇಂದು ಆಹಾರ ಪದ್ಧತಿ ಬದಲಾವಣೆ ಮಾಡಿಕೊಳ್ಳಬೇಕಿದೆ ಬಹುತೇಕ ಜನರು ಹೃದಯಾಘಾತದಿಂದ ಮೃತಪಡುತ್ತಿದ್ದು ನಮ್ಮ ಆರೋಗ್ಯದ ಕಡೆ ಗಮನ ನೀಡಬೇಕು ಎಂದು ಹೇಳಿದರು.

ಮಾಜಿ ಸಚಿವ ಅಮರೇಗೌಡ ಪಾಟೀಲ ಬಯ್ಯಾಪುರ ಮಾತನಾಡಿ, ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕ್ತಿ ಎಂಬ ನಾಣ್ಣುಡಿಗೆ ಮುರುಡಿ ಭೀಮಜ್ಜನವರು ಹಾಗೂ ಪುಂಡಲೀಕಪ್ಪ ಜ್ಞಾನಮೋಟೆ ಅವರು ಸಾಕ್ಷಿಯಾಗಿದ್ದಾರೆ. ಈ ಇಬ್ಬರು ಗುರು-ಶಿಷ್ಯರು ಸ್ವಾತಂತ್ರ್ಯಕ್ಕಾಗಿ ಅನೇಕ ಹೋರಾಟ ಮಾಡಿದ್ದಾರೆ. ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಮೂಲಕ ಮಾದರಿಯಾಗಿದ್ದಾರೆ ಎಂದರು.

ಇಂದು ಯುವಕರಲ್ಲಿ ಸಂಸ್ಕಾರ ಕೊರತೆ ಇದ್ದು ಹಿರಿಯರು ಕಲಿಸಬೇಕು. ದಾರಿ ತಪ್ಪುತ್ತಿದ್ದು ತಿಳಿವಳಿಕೆ ಮೂಡಿಸುವ ಮೂಲಕ ಸರಿದಾರಿಗೆ ತರಲು ಪ್ರಯತ್ನಿಸಬೇಕೆಂದು ಹೇಳಿದರು.

ಪ್ರಾಸ್ತಾವಿಕ ಮಾತನಾಡಿದ ಅಮೃತರಾಜ ಜ್ಞಾನಮೋಟೆ, ಇಬ್ಬರು ಹಿರಿಯರ ಪುಣ್ಯಸ್ಮರಣೆ ಅಂಗವಾಗಿ ಆರೋಗ್ಯ ಶಿಬಿರ, ಸ್ವಾತಂತ್ರ್ಯ ಹೋರಾಟಗಾರರ ಕುರಿತು ಪ್ರಬಂಧ ಸ್ಪರ್ಧೆ ಏರ್ಪಡಿಸಿ ಅರ್ಥಪೂರ್ಣ ಆಚರಣೆಗೆ ಮುಂದಾಗಿದ್ದೇವೆ. ಮುಂದಿನ ದಿನಗಳಲ್ಲಿ ಅದ್ಧೂರಿಯಾಗಿ ಆಚರಿಸಲು ಜನರ ಸಹಕಾರ ಅಗತ್ಯವಾಗಿದೆ ಎಂದರು.

ಮೇಲ್ಸೆತುವೆಗೆ ಹೆಸರಿಡಿ:

ಕುಷ್ಟಗಿ ಪಟ್ಟಣದ ಮೂಲಕ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯ ಮೇಲ್ಸೆತುವೆಗೆ ಮಾಜಿ ಶಾಸಕ ಪುಂಡಲೀಕಪ್ಪ ಜ್ಞಾನಮೋಟೆ ಹೆಸರಿಡಲು ಸರ್ಕಾರ 2020ರಲ್ಲಿಯೇ ನಿರ್ಧರಿಸಿದ್ದರೂ ಈ ವರೆಗೆ ಕಾರ್ಯರೂಪಕ್ಕೆ ಬಂದಿಲ್ಲ. ಶಾಸಕ ದೊಡ್ಡನಗೌಡರು ಕೂಡಲೇ ಈ ಕ್ರಮಕ್ಕೆ ಮುಂದಾಗಬೇಕು ಎಂದು ಮನವಿ ಸಲ್ಲಿಸಲಾಯಿತು.

ಈ ವೇಳೆ ಕಾಡಾ ನಿಗಮ ಅಧ್ಯಕ್ಷ ಹಸನಸಾಬ್‌ ದೋಟಿಹಾಳ, ಪ್ರಭಾಕರದಾದಾ ಭಜರಂಗ ಬೂದಾ ಬೋದಲೆ ಮಹರಾಜ, ರಮೇಶ ಬೋಂದಾಡೆ, ಯಶವಂತ ಮಹಾರಾಜ ಬೋದಲೆ, ದೇವೇಂದ್ರಪ್ಪ ಬಳೂಟಗಿ, ಶಿವಪ್ಪ ನೀರಾವರಿ, ಅಲ್ಲಮಪ್ರಭು ಬೆಟದೂರು, ಎ.ವೈ. ಲೋಕರೆ, ವೀರೇಶ ಬಂಗಾರಶೆಟ್ಟರ ಸೇರಿದಂತೆ ಅನೇಕರು ಇದ್ದರು. ವಿಕಲಚೇತನ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲಾಯಿತು.