ಸಾರಾಂಶ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಅಖಿಲ ಭಾರತ 13ನೇ ಶರಣಸಾಹಿತ್ಯ ಸಮ್ಮೇಳನಕ್ಕೆ ಚಿತ್ರದುರ್ಗದ ಮುರುುಘಾಮಠ ಅಲಂಕಾರಗೊಂಡಿದೆ.18, 19ರಂದು ಎರಡು ದಿನ ಅನುಭವ ಮಂಟಪದಲ್ಲಿ ಸಮ್ಮೇಳನ ಆಯೋಜಿಸಲಾಗಿದ್ದು, ರಾಜ್ಯದ ವಿವಿಧ ಜಿಲ್ಲೆಗಳಿಂದ ಹತ್ತು ಸಾವಿರಕ್ಕೂ ಅಧಿಕ ಪ್ರತಿನಿಧಿಗಳು ಆಗಮಿಸುವ ನಿರೀಕ್ಷೆ ಇದೆ. ಸಮ್ಮೇಳನ ಅಚ್ಚುಕಟ್ಟಾಗಿ ನಿರ್ವಹಿಸಲು ಸಿದ್ಧತೆಗಳು ಪೂರ್ಣಗೊಂಡಿವೆ. ಹೊರಗಡೆಯಿಂದ ಆಗಮಿಸುವವರಿಗೆ ಮುರುಘಾಮಠದಲ್ಲಿ ವಾಸ್ತವ್ಯಕ್ಕೆ ವ್ಯವಸ್ತೆ ಮಾಡಲಾಗಿದೆ.
ಸಮ್ಮೇಳನಾ ಅಧ್ಯಕ್ಷರಾಗಿ ಬಸವಶ್ರೀ ಪ್ರಶಸ್ತಿ ಪುರಸ್ಕೃತ ಸಿದ್ದರಾಮ ಶರಣ ಬೆಲ್ದಾಣ ಅವರನ್ನು ನಿಯೋಜಿಸಲಾಗಿದ್ದು ಶನಿವಾರ ಬೆಳಗ್ಗೆ ಧ್ವಜಾರೋಹಣ ನಂತರ ಮುರುಘಾಮಠದ ಆವರಣದಲ್ಲಿಯೇ ಅಧ್ಯಕ್ಷರ ಮೆರವಣಿಗೆ ನಡೆಯಲಿದೆ. ಎರಡು ದಿನಗಳ ಕಾಲ ನಡೆಯುವ ಸಮ್ಮೇಳನದಲ್ಲಿ ಧ್ವಜಾರೋಹಣ, ಸಮ್ಮೇಳನಾಧ್ಯಕ್ಷರ ಮೆರವಣಿಗೆ, ನಾನಾ ವಿಷಯಗಳ ಕುರಿತು ಚಿಂತನಗೋಷ್ಠಿಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ವಚನ ಗಮಕ ಸೌರಭ, ಸಮ್ಮೇಳಾಧ್ಯಕ್ಷರೊಂದಿಗೆ ಸಂವಾದ, ಬಹಿರಂಗ ಅವೇಶನ, ಸನ್ಮಾನ ಕಾರ್ಯಕ್ರಮಗಳು ಜರುಗಲಿವೆ ಎಂದರು.ಶನಿವಾರ ಬೆಳಗ್ಗೆ 8-30ಕ್ಕೆ ಮುರುಘರಾಜೇಂದ್ರ ಬೃಹನ್ಮಠದ ಆಡಳಿತ ಮಂಡಳಿ ಅಧ್ಯಕ್ಷ ಶಿವಯೋಗಿ ಕಳಸದ ರಾಷ್ಟ್ರಧ್ವಜಾರೋಹಣ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಸಿ.ಸೋಮಶೇಖರ ಪರಿಷತ್ತಿನ ಧ್ವಜಾರೋಹಣ ನೆರವೇರಿಸುವರು. ಸುತ್ತೂರು ಕ್ಷೇತ್ರದ ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠದ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ಗದಗ ಡಂಬಳದ ಶ್ರೀ ತೋಂಟದಾರ್ಯ ಸಂಸ್ಥಾನ ಮಠದ ಶ್ರೀ ತೋಂಟದ ಸಿದ್ಧರಾಮ ಸ್ವಾಮೀಜಿಯವರು ಗೌರವ ಸಾನ್ನಿಧ್ಯವಹಿಸುವರು.
ಬೆಳಗ್ಗೆ 9ಗಂಟೆಗೆ ನಡೆಯಲಿರುವ ಸಮ್ಮೇಳನಾಧ್ಯಕ್ಷರ ಮೆರವಣಿಗೆಯ ದಿವ್ಯಸಾನ್ನಿಧ್ಯವನ್ನು ರಾಜನಹಳ್ಳಿ ಶ್ರೀ ವಾಲ್ಮೀಕಿ ಗುರುಪೀಠದ ಜಗದ್ಗುರು ಪ್ರಸನ್ನಾನಂದ ವಾಲ್ಮೀಕಿ ಸ್ವಾಮಿಗಳು ವಹಿಸಲಿದ್ದು, ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಉದ್ಘಾಟಿಸುವರು. ಜಿಲ್ಲಾ ರಕ್ಷಣಾಧಿಕಾರಿ ರಂಜಿತ್‌ಕುಮಾರ್ ಬಂಡಾರು, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೋಮಶೇಖರ್, ನಗರಸಭೆ ಮಾಜಿ ಅಧ್ಯಕ್ಷ ಬಿ.ಕಾಂತರಾಜ್, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬಿ.ಟಿ.ಜಗದೀಶ್, ನಗರಸಭೆ ಅಧ್ಯಕ್ಷೆ ಸುಮಿತ್ರಾ ರಘು, ಎಸ್ಆರ್‌ಎಸ್ ಸಮೂಹ ಸಂಸ್ಥೆಯ ಬಿ.ಎ ಲಿಂಗಾರೆಡ್ಡಿ, ಬಾಪೂಜಿ ಸಮೂಹ ಸಂಸ್ಥೆಗಳ ಕೆ.ಎಂ.ಚೇತನ್, ಎಸ್ಎಲ್‌ವಿ ವಿದ್ಯಾಸಂಸ್ಥೆಯ ಎಂ.ಸಿ.ರಘುಚಂದನ್, ನಗರಸಭೆ ಉಪಾಧ್ಯಕ್ಷೆ ಶ್ರೀದೇವಿ ಚಕ್ರವರ್ತಿ, ವಿದ್ಯಾವಿಕಾಸ ವಿದ್ಯಾಸಂಸ್ಥೆಯ ಬಿ ವಿಜಯಕುಮಾರ್, ಸ್ಕೌಟ್ಸ್ ಅಂಡ್ ಗೈಡ್ಸ್‌ನ ಎಂ.ಕೆ.ಅನಂತರೆಡ್ಡಿ, ಮದಕರಿನಾಯಕ ವಿದ್ಯಾಸಂಸ್ಥೆಯ ಎಸ್ ಸಂದೀಪ್ ಪಾಲ್ಗೊಳ್ಳುವರು.ಮಧ್ಯಾಹ್ನ 2 ಕ್ಕೆ ಸಾಂಸ್ಕೃತಿಕ ನಾಯಕ ಬಸವಣ್ಣ ವಿಷಯ ಕುರಿತು, ಸಂಜೆ 4 ಕ್ಕೆ ಶರಣ ಸಾಹಿತ್ಯದಲ್ಲಿ ಮಹಿಳಾ ಸಂವೇದನೆ,ಸಂಜೆ 5.30 ಕ್ಕೆ ಶರಣ ಸಾಹಿತ್ಯದತ್ತ ಯುವಜನತೆ ವಿಷಯ ಕುರಿತು ಚಿಂತನ ಗೋಷ್ಠಿ ನಡೆಯಲಿದೆ. ಸಂಜೆ 7ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು ಕನ್ನಡ ಅಭಿವೃದ್ಧಿ ಪ್ರಾಧಿಕಾರಕದ ಮಾಜಿ ಅಧ್ಯಕ್ಷ ಡಾ.ಮುಖ್ಯಮಂತ್ರಿ ಚಂದ್ರು ಉದ್ಘಾಟಿಸುವರು.
ಮುಖ್ಯಮಂತ್ರಿಗಳು ಸೇರಿ ಹಲವರು ಭಾಗಿ
ಬೆಳಗ್ಗೆ 11ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಸಿಎಂ ಸಿದ್ದರಾಮಯ್ಯ, ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್, ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಗಣಿ ಭೂ ವಿಜ್ಞಾನ ಮತ್ತು ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಸಂಸದ ಗೋವಿಂದ ಕಾರಜೋಳ, ಬಿ.ವೈ.ವಿಜಯೇಂದ್ರ ಸೇರಿದಂತೆ ಜಿಲ್ಲೆಯ ಶಾಸಕರು, ಗಣ್ಯರು ಭಾಗವಹಿಸುವರು.