ಮುರುಘಾ ಮಠ ಎಲ್ಲಾ ಸಮುದಾಯವನ್ನೂ ಒಗ್ಗೂಡಿಸುವ ಮಠ

| Published : Oct 16 2024, 12:37 AM IST

ಸಾರಾಂಶ

ಚಿತ್ರದುರ್ಗದ ಮುರುಘಾ ಮಠ ಎಲ್ಲಾ ಸಮುದಾಯದ ಜನರನ್ನು ಒಟ್ಟಿಗೆ ಕರೆದುಕೊಂಡು ಹೋಗುವಂತಹ ಮಠವಾಗಿದೆ ಎಂದು ಬಹುಜನ ಸಮಾಜವಾದ ಪಕ್ಷದ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ ಹೇಳಿದರು.

ಕನ್ನಡಪ್ರಭವಾರ್ತೆ ಚಿತ್ರದುರ್ಗ

ಚಿತ್ರದುರ್ಗದ ಮುರುಘಾ ಮಠ ಎಲ್ಲಾ ಸಮುದಾಯದ ಜನರನ್ನು ಒಟ್ಟಿಗೆ ಕರೆದುಕೊಂಡು ಹೋಗುವಂತಹ ಮಠವಾಗಿದೆ ಎಂದು ಬಹುಜನ ಸಮಾಜವಾದ ಪಕ್ಷದ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ ಹೇಳಿದರು.

ಜಯದೇವ ಜಗದ್ಗುರುಗಳ 150ನೇ ಜಯಂತ್ಯುತ್ಸವ ಹಾಗೂ ಶರಣ ಸಂಸ್ಕೃತಿ ಉತ್ಸವ -2024 ನಿಮಿತ್ತ ಭಾನುವಾರ ಸಂಜೆ ಆಯೋಜಿಸಲಾಗಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಮುರುಘಾ ಮಠ ಎಂದರೆ ಬಸವ ಪರಂಪರೆಯ ಮಠ. ಈ ದೇಶದಲ್ಲಿ ಶತಮಾನಗಳಿಂದಲೂ ಕೆಳಸ್ತರದ ಜನರು ಶೋಷಣೆಗೆ ಒಳಗಾಗುತ್ತಾ ಬಂದಿದ್ದಾರೆ. ಇದರ ವಿರುದ್ಧವಾಗಿ ಮೊದಲು ಧ್ವನಿ ಎತ್ತಿದವರು ಬುದ್ಧನಾದರೆ, ಹನ್ನೆರಡನೇ ಶತಮಾನದಲ್ಲಿ ಶೋಷಿತರ ಪರ ಧ್ವನಿ ಎತ್ತಿದವರು ಬಸವಣ್ಣ ಹಾಗೂ ಶಿವಶರಣರಾಗಿದ್ದಾರೆ ಎಂದು ತಿಳಿಸಿದರು.ಡಿಟಿ. ಅರುಣ್ ಕುಮಾರ್ ಮಾತನಾಡಿ, ಶ್ರೀ ಮಠವು ರಾಜ್ಯ, ರಾಷ್ಟ್ರಮಟ್ಟದಲ್ಲಿ ತನ್ನದೇ ಆದ ಇತಿಹಾಸ ಪರಂಪರೆ ಹೊಂದಿದೆ. ಬಸವಾದಿ ಶರಣರ ವಿಚಾರಗಳನ್ನು ನಾಡಿನಾದ್ಯಂತ ಪಸರಿಸುತ್ತಾ, ಸಾಮಾನ್ಯರನ್ನು ಶರಣರನ್ನಾಗಿ ಮಾಡುವ ಶಕ್ತಿ ಶ್ರೀ ಮಠಕ್ಕಿದೆ. ಸಂಘಟನೆ ಬಗ್ಗೆ ಗೊತ್ತಿಲ್ಲದವರಿಗೆ ಶರಣ ಸಂಗಮ, ಬಸವತತ್ವದ ಮೂಲಕ ಜನರನ್ನು ಸಂಘಟಿಸುವಂತಹ ಕೆಲಸವನ್ನು ಶ್ರೀಮಠ ಮಾಡುತ್ತಾ ಬರುತ್ತಿದೆ ಎಂದರು.

ಕಲಬುರಗಿ ಸುಲಫಲ ಮಠದ ಜಗದ್ಗುರು ಡಾ. ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ, ಚಿತ್ರದುರ್ಗ ಶ್ರೀ ಕಬೀರಾನಂದಾಶ್ರಮದ ಸದ್ಗುರು ಶ್ರೀ ಶಿವಲಿಂಗಾನಂದ ಸ್ವಾಮೀಜಿ, ಸೊನ್ನ ದಾಸೋಹ ವಿರಕ್ತಮಠದ ಡಾ. ಶ್ರೀ ಶಿವಾನಂದ ಸ್ವಾಮೀಜಿ, ಎಸ್.ಜೆ.ಎಂ. ವಿದ್ಯಾಪೀಠದಆಡಳಿತಮಂಡಳಿ ಸದಸ್ಯ ಡಾ. ಬಸವಕುಮಾರ ಸ್ವಾಮೀಜಿ, ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ. ಪರಮಶಿವಮೂರ್ತಿ, ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ್ ಬಬಲೇಶ್ವರ, ಕರ್ನಾಟಕ ರಾಜ್ಯ ಮುದ್ರಣಕಾರರ ಸಂಘದ ಅಧ್ಯಕ್ಷ ಬಿ.ಆರ್. ಆಶೋಕ್ ಕುಮಾರ್, ಜಿ.ಎಸ್.ಟಿ. ಸಹಾಯಕ ಆಯುಕ್ತ ಮಹಮ್ಮದ್ ರಫಿ ಪಾಷ, ವರ್ತಕ ಪಾಂಡುರಂಗ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಯೋಗಿಗೌಡ ಮಿಮಿಕ್ರಿ, ರಾಘವೇಂದ್ರ ಆಚಾರ್ ಹಾಸ್ಯ ಕಾರ್ಯಕ್ರಮ, ಕಲರ್ಸ್ ಕನ್ನಡದ ಕಾಶಿಂ ಅಲಿ ಮತ್ತು ತಂಡದವರು ಸಂಗೀತ, ಹಿಂದಿ ಸೋನಿ ಟಿ.ವಿ. ಇಂಡಿಯಾ ಗೊ. ಟ್ಯಾಲೆಂಟ್ ಖ್ಯಾತಿಯ ಮಂಗಳೂರಿನ ಸಿಟಿಗೈಸ್ ನೃತ್ಯ ತಂಡ ಹಾಗೂ ಕುಡ್ಲ ಕ್ವೀನ್ಸ್ ತಂಡದವರು ಸಮೂಹ ನೃತ್ಯ ಪ್ರದರ್ಶನ ನೀಡಿದರು.

ಕಾರ್ಯಕ್ರಮದಲ್ಲಿ ಜಮುರಾ ಕಲಾವಿದರು ಪ್ರಾರ್ಥಿಸಿ, ಉಮಾ ರಮೇಶ್ ಸ್ವಾಗತಿಸಿ, ಜಗದೀಶ್ವರಿ ಹಿರೇಮಠ್ ನಿರೂಪಿಸಿ ವಂದಿಸಿದರು.