ನಿನ್ನೆಯದ್ದು ಒತ್ತಾಯ ಪೂರ್ವಕ ಹೇಳಿಕೆ ಎಂದ ಮುರುಘಾಮಠ ಸ್ವಾಮೀಜಿ

| Published : Mar 30 2024, 12:47 AM IST / Updated: Mar 30 2024, 12:48 AM IST

ಸಾರಾಂಶ

ಶಿರಹಟ್ಟಿ ಫಕೀರ ದಿಂಗಾಲೇಶ್ವರ ಸ್ವಾಮೀಜಿಗಳು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವಿರುದ್ಧ ನೀಡಿದ ಹೇಳಿಕೆಗೂ ತಮ್ಮ ಮಠಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಗುರುವಾರವಷ್ಟೇ ಅಚ್ಚರಿಯ ಹೇಳಿಕೆ ನೀಡಿದ್ದ ಇಲ್ಲಿಯ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಇದೀಗ ಮತ್ತೆ ಯೂಟರ್ನ್‌ ಹೊಡೆದಿದ್ದಾರೆ.

ಧಾರವಾಡ:

ಶಿರಹಟ್ಟಿ ಫಕೀರ ದಿಂಗಾಲೇಶ್ವರ ಸ್ವಾಮೀಜಿಗಳು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವಿರುದ್ಧ ನೀಡಿದ ಹೇಳಿಕೆಗೂ ತಮ್ಮ ಮಠಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಗುರುವಾರವಷ್ಟೇ ಅಚ್ಚರಿಯ ಹೇಳಿಕೆ ನೀಡಿದ್ದ ಇಲ್ಲಿಯ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಇದೀಗ ಮತ್ತೆ ಯೂಟರ್ನ್‌ ಹೊಡೆದಿದ್ದಾರೆ.

ಹುಬ್ಬಳ್ಳಿಯಲ್ಲಿ ಮಠಾಧೀಶರ ಚಿಂತನ-ಮಂಥನ ಗೋಷ್ಠಿಯಲ್ಲಿ ಭಾಗವಹಿಸಿದ್ದು, ಮಠಾಧೀಶರ ತೆಗೆದುಕೊಂಡು ನಿರ್ಣಯಕ್ಕೆ ತಾವು ಸಹ ಅನುಮೋದನೆ ನೀಡಿದ್ದೇವೆ. ಆದರೆ, ಕೆಲವು ಜನ ಬಂದು ನಮ್ಮ ಮೇಲೆ ಒತ್ತಡ ಹಾಕಿದ್ದು, ತಾವೇ ಪತ್ರವೊಂದನ್ನು ಬರೆದುಕೊಂಡು ಬಂದು ನಮ್ಮ ಆರೋಗ್ಯ ಸಮಸ್ಯೆಯ ಕಾರಣ ಸಹಿ ಮಾಡಿಸಿಕೊಂಡು ಹೋಗಿದ್ದಾರೆ. ನಾನು ಗುರುವಾರ ನೀಡಿದ ಒತ್ತಾಯ ಪೂರ್ವಕ ಹೇಳಿಕೆಯನ್ನು ಸಮಾಜದ ಹಿತದೃಷ್ಟಿಯಿಂದ ಹಿಂಪಡೆಯುತ್ತೇವೆ ಎಂದು ಹೇಳುವ ಮೂಲಕ ದಿಂಗಾಲೇಶ್ವರ ಸ್ವಾಮೀಜಿ ಹೇಳಿಕೆಗೆ ಬೆಂಬಲ ಸೂಚಿಸಿದ್ದಾರೆ.

ಒಂದೇ ದಿನದಲ್ಲಿ ಹೇಳಿಕೆ ಬದಲು

ದಿಂಗಾಲೇಶ್ವರ ಸ್ವಾಮಿಗಳು ಮೂರುಸಾವಿರ ಮಠದಲ್ಲಿ ಧಾರವಾಡ ಲೋಕಸಭಾ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಅವರ ಬದಲಾವಣೆ ಕುರಿತು ನೀಡಿದ ಹೇಳಿಕೆ ದಿಂಗಾಲೇಶ್ವರ ಸ್ವಾಮಿಗಳ ವೈಯಕ್ತಿಕ ಹೇಳಿಕೆ. ಈ ಹೇಳಿಕೆಗೂ ನಮಗೂ ಹಾಗೂ ಶ್ರೀ ಕ್ಷೇತ್ರ ಮುರುಘಾಮಠಕ್ಕೆ ಯಾವುದೇ ಸಂಬಂಧವಿಲ್ಲ. ಇಂತಹ ಹೇಳಿಕೆಗಳು ಅವರವರ ವೈಯಕ್ತಿಕ ಹೇಳಿಕೆ ಎಂದಿದ್ದ ಮಲ್ಲಿಕಾರ್ಜುನ ಸ್ವಾಮೀಜಿ, ಇದೀಗ ಕೆಲವರ ಒತ್ತಡದಿಂದ ಹೇಳಿರುವುದಾಗಿ ಭಕ್ತರಿಗೆ ಸ್ಪಷ್ಟನೆ ನೀಡಿದ್ದು, ಸ್ವಾಮೀಜಿ ಈ ನಡೆಯಿಂದ ಕೆಲವರು ಅತೃಪ್ತಿ ವ್ಯಕ್ತಪಡಿಸಿದ್ದಾರೆ. ಜತೆಗೆ ಯಾರು ತಮ್ಮ ಮೇಲೆ ಒತ್ತಡ ಹಾಕಿದ್ದಾರೆ ಎಂಬ ಪ್ರಶ್ನೆಯನ್ನು ಕೇಳಿದ್ದಾರೆ. ಆದರೆ, ಸ್ವಾಮೀಜಿ ಮಾತ್ರ ಒತ್ತಡ ಹಾಕಿದವರು ಯಾರು ಎಂದು ಬಹಿರಂಗ ಪಡಿಸಿಲ್ಲ ಎಂಬುದೇ ಸೋಜಿಗದ ಸಂಗತಿ.