ಸಾರಾಂಶ
ಕನ್ನಡಪ್ರಭ ವಾರ್ತೆ ಶಿರಾ
ತಾಲೂಕಿನ ಹಿರಿಯ ಸಹಕಾರಿಗಳು, ರಾಜಕೀಯ ಮುತ್ಸದಿಗಳು ಆದ ಮುರುಗಪ್ಪ ಗೌಡ ಅವರಿಗೆ ಕರ್ನಾಟಕ ರಾಜ್ಯ ಸರ್ಕಾರ ಸಹಕಾರಿ ರತ್ನ ಪ್ರಶಸ್ತಿ ನೀಡಿ ಗೌರವಿಸಿರುವುದು ಹೆಮ್ಮೆಯ ವಿಚಾರ. ಇಡೀ ತಾಲೂಕಿನ ಎಲ್ಲಾ ಸಹಕಾರಿಗಳಿಗೆ ಶಕ್ತಿ ಬಂದಿದೆ ಎಂದು ರಾಜ್ಯ ರೇಷ್ಮೆ ನಿಗಮದ ಮಾಜಿ ಅಧ್ಯಕ್ಷ ಹಾಗೂ ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಎಸ್.ಆರ್. ಗೌಡ ಹೇಳಿದರು.ಮಂಗಳವಾರ ನಗರದ ಮುರುಗಪ್ಪ ಗೌಡ ಅವರ ನಿವಾಸದಲ್ಲಿ ಸಹಕಾರಿ ರತ್ನ ಪ್ರಶಸ್ತಿ ವಿಜೇತರಾದ ಮುರುಗಪ್ಪ ಗೌಡ ಅವರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದರು. ಸಹಕಾರಿ ಕ್ಷೇತ್ರದಲ್ಲಿ ಸುಮಾರು ೫೫ ವರ್ಷಗಳಿಗೂ ಹೆಚ್ಚು ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಹಿರಿಯ ಸಹಕಾರಿ ಮುರುಗಪ್ಪ ಗೌಡ ಅವರು ತಾಲೂಕು ಮಟ್ಟದಿಂದ ಜಿಲ್ಲಾಮಟ್ಟ, ರಾಜ್ಯಮಟ್ಟದಲ್ಲಿ ಸಹಕಾರಿ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆಗಳನ್ನು ನೀಡಿದ್ದಾರೆ. ಅವರ ಸೇವೆಯನ್ನು ಗುರುತಿಸಿ ಸಹಕಾರ ಸಚಿವರಾದ ಕೆ.ಎನ್. ರಾಜಣ್ಣ ಅವರು ಸಹಕಾರಿ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಶ್ಲಾಘನೀಯ ಕಾರ್ಯ. ಈಗಾಗಲೇ ತಾಲೂಕಿನ ಮತ್ತೋರ್ವ ಹಿರಿಯ ಸಹಕಾರಿಗಳಾದ ಎಸ್.ಎನ್. ಕೃಷ್ಣಯ್ಯ ಅವರಿಗೂ ಕೂಡ ಕಳೆದ ಐದು ವರ್ಷಗಳ ಹಿಂದೆ ಸಹಕಾರ ರತ್ನ ಪ್ರಶಸ್ತಿಯನ್ನು ಕರ್ನಾಟಕ ಸರ್ಕಾರ ನೀಡಿತ್ತು. ಅದೇ ರೀತಿ ಮತ್ತೋರ್ವ ರಾಜಕೀಯ ಮುತ್ಸದ್ದಿಗಳಾದ ಮುರುಗಪ್ಪ ಗೌಡ ಅವರಿಗೆ ಸಹಕಾರ ರತ್ನ ಪ್ರಶಸ್ತಿ ನೀಡಿರುವುದು. ನಮ್ಮೆಲ್ಲರಿಗೂ ಹರ್ಷ ತಂದಿದೆ ಎಂದರು.
ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತರಾದ ಮುರುಗಪ್ಪ ಗೌಡ ಮಾತನಾಡಿ, ಶಿರಾ ತಾಲೂಕಿನಲ್ಲಿ ೧೯೬೮ರಲ್ಲಿ ನಾನು ಸಹಕಾರಿ ಕ್ಷೇತ್ರಕ್ಕೆ ಪ್ರವೇಶ ಮಾಡಿದೆ. ನಂತರ ೧೯೬೯ರಲ್ಲಿ ಟಿ.ಎ.ಪಿ.ಸಿ.ಎಂ.ಎಸ್. ಅಧ್ಯಕ್ಷರಾಗಿ ಆಯ್ಕೆಯಾದೆ. ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದೇನೆ. ನಾನು ಯಾವುದೇ ಪ್ರಶಸ್ತಿಗಾಗಿ ಆಸೆ ಪಟ್ಟವನಲ್ಲ. ಸಹಕಾರಿ ಕ್ಷೇತ್ರ ಜನಸೇವೆಗೆ ಉತ್ತಮವಾದ ಕ್ಷೇತ್ರ ಎಂಬ ಉದ್ದೇಶದಿಂದ ಸಹಕಾರಿ ಕ್ಷೇತ್ರಕ್ಕೆ ಪ್ರವೇಶ ಮಾಡಿ ಸುಮಾರು ೫೫ಕ್ಕೂ ಹೆಚ್ಚು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದೇನೆ. ನನ್ನ ಸೇವೆಯನ್ನು ಮೆಚ್ಚಿ ಸರಕಾರ ಸಹಕಾರಿ ರತ್ನ ಪ್ರಶಸ್ತಿ ನೀಡಿದ್ದು ಸರಕಾರಕ್ಕೆ ಧನ್ಯವಾದ ತಿಳಿಸುತ್ತೇನೆ ಎಂದರು.ಶಿರಾ ತಾಲೂಕಿನಲ್ಲಿ ತುಮಕೂರು ಹಾಲು ಒಕ್ಕೂಟದ ನಿರ್ದೇಶಕರಾಗಿ ಆಯ್ಕೆಯಾದ ಎಸ್.ಆರ್.ಗೌಡ ಅವರು ಕಳೆದ ಎರಡು ಅವಧಿಯಲ್ಲಿಯೂ ಉತ್ತಮ ಸೇವೆ ಮಾಡುತ್ತಿದ್ದಾರೆ. ತಾಲೂಕಿನಲ್ಲಿ ಹೈನುಗಾರಿಕೆ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದಾರೆ. ಆದ್ದರಿಂದ ಅವರಿಗೆ ಇನ್ನೂ ಹೆಚ್ಚು ಅಧಿಕಾರ ದೊರಕಲಿ ಎಂದು ಆಶಿಸುತ್ತೇನೆ ಎಂದರು.
ಪಿ.ಎಲ್.ಡಿ. ಬ್ಯಾಂಕ್ ಮಾಜಿ ಅಧ್ಯಕ್ಷ ಟಿ.ಡಿ. ಮಲ್ಲೇಶ್, ಮದ್ದೇವಳ್ಳಿ ರಾಮಕೃಷ್ಣ, ಶಿರಾ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಈರಣ್ಣ, ಸದಸ್ಯ ನರಸಿಂಹರಾಜು, ಮುಖಂಡರಾದ ರಾಜಣ್ಣ ಗೌಡ, ಮುದ್ದುಗಣೇಶ್, ಪಡಿ ರಮೇಶ್, ಕೊಟ್ಟ ಶ್ರೀನಿವಾಸ ಗೌಡ, ಅಜ್ಜಣ್ಣ, ಇನಾಂಗೊಲ್ಲಹಳ್ಳಿ ಶಿವಣ್ಣ ಸೇರಿದಂತೆ ಹಲವರು ಹಾಜರಿದ್ದರು.