ಮೂರುಸಾವಿರ ಮಠದ ರಥೋತ್ಸವ ಶ್ರಾವಣ ಮಾಸದ ಕೊನೆಯ ಸೋಮವಾರದ ಸಂಜೆ ವಿವಿಧ ವಾದ್ಯಮೇಳಗಳ ಸದ್ದು, ಭಕ್ತರ ಜೈಕಾರ ಹಾಗೂ ಸಹಸ್ರಾರು ಭಕ್ತರ ಸಮೂಹದೊಂದಿಗೆ ವಿಜೃಂಭಣೆಯಿಂದ ನೆರವೇರಿತು.

ಹುಬ್ಬಳ್ಳಿ:

ಇಲ್ಲಿನ ಮೂರುಸಾವಿರ ಮಠದ ರಥೋತ್ಸವ ಶ್ರಾವಣ ಮಾಸದ ಕೊನೆಯ ಸೋಮವಾರದ ಸಂಜೆ ವಿವಿಧ ವಾದ್ಯಮೇಳಗಳ ಸದ್ದು, ಭಕ್ತರ ಜೈಕಾರ ಹಾಗೂ ಸಹಸ್ರಾರು ಭಕ್ತರ ಸಮೂಹದೊಂದಿಗೆ ವಿಜೃಂಭಣೆಯಿಂದ ನೆರವೇರಿತು.

ಶ್ರೀಮಠದ ಆವರಣದಲ್ಲಿ ಸಂಜೆ ಆರಂಭಗೊಂಡ ರಥೋತ್ಸವ ಸೊರಬದಮಠ ಗಲ್ಲಿಯ ವರೆಗೆ ತೆರಳಿ, ಮರಳಿ ಶ್ರೀಮಠಕ್ಕೆ ಆಗಮಿಸಿತು. ಇದಕ್ಕೂ ಮೊದಲು ಶ್ರೀಮಠದ ಆವರಣದಿಂದ ಹೊರಟ ಪಲ್ಲಕ್ಕಿ ನಗರದ ವಿವಿಧ ರಸ್ತೆಗಳಲ್ಲಿ ಸಂಚರಿಸಿ, ಬಮ್ಮಾಪುರ ಓಣಿಯ ಗುರುಸಿದ್ದೇಶ್ವರ ಕಲ್ಯಾಣಮಂಟಪ (ಓಲೆಮಠ)ಕ್ಕೆ ತೆರಳಿ ಮರಳಿದ ಬಳಿಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.

ಡೋಲು, ಕರಡಿ ಮಜಲು, ಜಾಂಜ್ ಸೇರಿದಂತೆ ವಿವಿಧ ವಾದ್ಯಮೇಳಗಳೊಂದಿಗೆ ಸಾಗಿದ ರಥೋತ್ಸವದಲ್ಲಿ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು. ಮೆರವಣಿಗೆಯುದ್ದಕ್ಕೂ "ಗುರುಸಿದ್ದೇಶ್ವರ ಮಹಾರಾಜ್ ಕೀ ಜೈ ", "ಹರ ಹರ ಮಹಾದೇವ " ಎಂಬ ಜೈಕಾರಗಳು ಮೊಳಗಿದವು. ರಥೋತ್ಸವದ ಬಳಿಕ ಮೂರುಸಾವಿರ ಮಠದ ಜ. ಗುರುಸಿದ್ದ ರಾಜಯೋಗೀಂದ್ರ ಶ್ರೀಗಳು ರಜತ ಸಿಂಹಾಸನಾಧೀಶರಾದರು.

ವಿಶೇಷ ಪೂಜೆ, ಅಲಂಕಾರ:

ಶ್ರಾವಣ ಮಾಸದ ಕೊನೆಯ ಸೋಮವಾರದ ನಿಮಿತ್ತ ಶ್ರೀಗುರುಸಿದ್ದೇಶ್ವರ ಗದ್ದುಗೆಗೆ ವಿಶೇಷ ಪೂಜೆ ಹಾಗೂ ಅಲಂಕಾರ ಮಾಡಲಾಗಿತ್ತು. ಬೆಳಗ್ಗೆಯಿಂದಲೇ ಸಾವಿರಾರು ಭಕ್ತರು ತಂಡೋಪ ತಂಡವಾಗಿ ಶ್ರೀಮಠಕ್ಕೆ ಆಗಮಿಸಿ ಗದ್ದುಗೆ ದರ್ಶನ ಪಡೆದರು. ಮಧ್ಯಾಹ್ನ ಸಾವಿರಾರು ಭಕ್ತರು ಪ್ರಸಾದ ಸ್ವೀಕರಿಸಿದರು.

ಮುಖಂಡರಾದ ವಿಜಯಕುಮಾರ ಶೆಟ್ಟರ, ಅರವಿಂದ ಕುಬಸದ, ಅಮರೇಶ ಹಿಪ್ಪರಗಿ, ಗುರು ಹಿರೇಮಠ, ಸದಾನಂದ ಡಂಗನವರ, ಗುರು ಹಿರೇಮಠ, ಶಿವು ಮೆಣಸಿನಕಾಯಿ, ಮೋಹನ ಅಸುಂಡಿ, ರಾಜಣ್ಣ ಕೊರವಿ, ಶರಣಪ್ಪ ಕೊಟಗಿ, ಅಜ್ಜಪ್ಪ ಬೆಂಡಿಗೇರಿ, ಪ್ರಸಾದ ಹೊಂಬಳ, ಶಶಿಧರ ಕರವೀರಶೆಟ್ಟರ, ಗುರುಸಿದ್ದಯ್ಯ, ರಾಜು ಕೋರ್ಯಾನಮಠ ಸೇರಿದಂತೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು.