ಮಂಡ್ಯ, ಮೈಸೂರು, ಹಾಸನ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಸಂಗೀತ ಶಾಲೆ ಇಲ್ಲ. ಸಂಗೀತ ಮತ್ತು ಲಲಿತಕಲೆಗಳ ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಅವಕಾಶಗಳು ಲಭ್ಯವಾಗಬೇಕೆಂಬ ಉದ್ದೇಶದಿಂದ ಸಂಸ್ಥೆ ಆರಂಭಿಸಲು ಆಶಯ ಹೊಂದಿದ್ದೆ. ಈಗ ಅದು ಸಾಕಾರಗೊಂಡಿರುವುದು ಸಂತಸ ತಂದಿದೆ.
ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ವಿದ್ಯಾರ್ಥಿಗಳ ಸರ್ವತೋಮುಖ ವ್ಯಕ್ತಿತ್ವ ವಿಕಸನಕ್ಕೆ ಕೇವಲ ಪಠ್ಯ ಶಿಕ್ಷಣ ಮಾತ್ರ ಸಾಲದು. ಸಂಗೀತ, ನೃತ್ಯ ಸೇರಿದಂತೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಸಕ್ರಿಯವಾಗಿ ಭಾಗವಹಿಸುವ ಮೂಲಕ ತಮ್ಮಲ್ಲಿನ ಪ್ರತಿಭೆ ಮತ್ತು ಕೌಶಲ್ಯಗಳನ್ನು ಅಭಿವೃದ್ಧಿ ಪಡಿಸಿಕೊಳ್ಳಬೇಕು ಎಂದು ಭಾರತೀ ಶಿಕ್ಷಣ ಸಂಸ್ಥೆ ಅಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಹೇಳಿದರು.ಇಲ್ಲಿನ ಕುವೆಂಪು ಸಭಾಂಣದಲ್ಲಿ ಭಾರತೀ ಶಿಕ್ಷಣ ಸಂಸ್ಥೆಯಿಂದ ಮೈಸೂರಿನ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ವತಿಯಿಂದ ಭಾರತೀ ಸಂಗೀತ ಮತ್ತು ಲಲಿತಕಲೆಗಳ ಮಹಾವಿದ್ಯಾಲಯ ಉದ್ಘಾಟನೆ ಸಮಾರಂಭದ ಹಿನ್ನಲೆಯಲ್ಲಿ ಶೈಕ್ಷಣಿಕ ವರ್ಷಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಂಡ್ಯ, ಮೈಸೂರು, ಹಾಸನ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಸಂಗೀತ ಶಾಲೆ ಇಲ್ಲ. ಸಂಗೀತ ಮತ್ತು ಲಲಿತಕಲೆಗಳ ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಅವಕಾಶಗಳು ಲಭ್ಯವಾಗಬೇಕೆಂಬ ಉದ್ದೇಶದಿಂದ ಸಂಸ್ಥೆ ಆರಂಭಿಸಲು ಆಶಯ ಹೊಂದಿದ್ದೆ. ಈಗ ಅದು ಸಾಕಾರಗೊಂಡಿರುವುದು ಸಂತಸ ತಂದಿದೆ ಎಂದರು.ವಿದ್ಯಾರ್ಥಿಗಳು ಕೇವಲ ಪುಸ್ತಕದ ಓದಿಗೆ ಸೀಮಿತರಾಗದೆ ಸಂಗೀತ, ನೃತ್ಯ, ಲಲಿತಕಲೆ ಹಾಗೂ ಇತರ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಕಲಿಕೆಗೆ ವಯಸ್ಸಿನ ಮಿತಿಯಿಲ್ಲ. ಕಲಿಯುವ ಆಸಕ್ತಿ ಮತ್ತು ಛಲ ಇದ್ದರೆ ಜೀವನದ ಯಾವುದೇ ಹಂತದಲ್ಲಿಯೂ ಹೊಸ ಜ್ಞಾನ ಮತ್ತು ಕೌಶಲ್ಯಗಳನ್ನು ಸಂಪಾದಿಸಬಹುದು ಎಂದರು.
ಸಂಗೀತ ಮತ್ತು ಲಲಿತಕಲೆ ಕ್ಷೇತ್ರದಲ್ಲಿ ಸರ್ಟಿಫಿಕೇಟ್ ಹಾಗೂ ಡಿಪ್ಲೊಮಾ ಕೋರ್ಸ್‌ಗಳಿಗೆ ಇಂದಿನ ದಿನಗಳಲ್ಲಿ ಹೆಚ್ಚಿನ ಮಹತ್ವವಿದೆ. ವಿದ್ಯಾರ್ಥಿಗಳು ತಮ್ಮಲ್ಲಿರುವ ವೈಯಕ್ತಿಕ ಪ್ರತಿಭೆ ಮತ್ತು ಕಲಾ ಕೌಶಲ್ಯವನ್ನು ಬೆಳೆಸಿಕೊಂಡು ಸಮಾಜಕ್ಕೆ ಪರಿಚಯಿಸಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯ ಪ್ರತಿಭೆಯೇ ಸಂಸ್ಥೆ ಪ್ರತಿಬಿಂಬವಾದೆ. ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದಾಗ ಸಂಸ್ಥೆಗೂ ಉತ್ತಮ ಹೆಸರು ದೊರೆಯುತ್ತದೆ ಎಂದರು.ಭಾರತೀ ಶಿಕ್ಷಣ ಸಂಸ್ಥೆಯಿಂದ ವಿವಿಧ ಶಿಕ್ಷಣ ಕ್ಷೇತ್ರಗಳಲ್ಲಿ ಅನೇಕ ಕಾಲೇಜುಗಳನ್ನು ಸ್ಥಾಪಿಸಿ ವಿದ್ಯಾರ್ಥಿಗಳಿಗೆ ಶಿಕ್ಷಣದ ಅವಕಾಶಗಳನ್ನು ಕಲ್ಪಿಸಲಾಗಿದೆ. ತಮ್ಮ ಅವಧಿಯಲ್ಲಿ 20ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳು ಆರಂಭಗೊಂಡಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವುದು ನಮ್ಮ ಪ್ರಮುಖ ಉದ್ದೇಶವಾಗಿದೆ ಎಂದರು.
ಸಂಸ್ಥೆ ಕಾರ್ಯದರ್ಶಿ ಬಿ.ಎಂ.ನಂಜೇಗೌಡ ಮಾತನಾಡಿ, ಸಂಗೀತ ಉತ್ತಮ ಅಭ್ಯಾಸವಾಗಿದೆ. ಆರೋಗ್ಯವನ್ನು ವೃದ್ಧಿಸುವ ಜೊತೆಗೆ ಮಾನಸಿಕ ನೆಮ್ಮದಿ, ಏಕಾಗ್ರತೆ ಮತ್ತು ಮನಶಾಂತಿಯನ್ನು ನೀಡುತ್ತದೆ ಎಂದರು.ಭಾರತೀ ಸಂಗೀತ ಮತ್ತು ಲಲಿತಕಲೆಗಳ ಮಹಾವಿದ್ಯಾಲಯದ ಪ್ರಾಂಶುಪಾಲೆ ವಿದೂಷಿ ಎಂ.ಎನ್.ಸುಶ್ಮಿತಾ ಮಾತನಾಡಿ, ಕಲೆಗೆ ದೊರೆತಿರುವ ಅವಕಾಶವನ್ನು ಸದುಪಯೋಗಪಡಿಸಿಕೊಂಡು ತಮ್ಮಲ್ಲಿರುವ ವಿಭಿನ್ನ ರೀತಿಯ ಪ್ರತಿಭೆಯನ್ನು ಹೊರತರಬೇಕು ಎಂದು ಸಲಹೆ ನೀಡಿದರು.
ಭಾರತೀ ಆರೋಗ್ಯ ವಿಜ್ಞಾನ ವಿಭಾಗದ ನಿರ್ದೇಶಕ ಡಾ.ತಮಿಜ್ ಮಣಿ ಮಾತನಾಡಿ, ಪೋಷಕರು ತಮ್ಮ ಮಕ್ಕಳಿಗೆ ಶಿಕ್ಷಣದ ಜೊತೆಗೆ ನೃತ್ಯ, ಸಂಗೀತ ಹಾಗೂ ಇತರ ಕಲಾ ಚಟುವಟಿಕೆಗಳಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಬೇಕು ಎಂದರು.ಈ ವೇಳೆ ಸಂಸ್ಥೆ ಅಧ್ಯಕ್ಷ ಮಧು ಜಿ.ಮಾದೇಗೌಡರು ವಿದ್ಯಾರ್ಥಿಗಳಿಗೆ ಗೆಜ್ಜೆ ನೀಡಿದರು. ಸಂಸ್ಥೆ ವಿವಿಧ ವಿಭಾಗದ ಮುಖ್ಯಸ್ಥರಾದ ಡಾ.ಎಸ್.ಎಲ್.ಸುರೇಶ್, ಡಾ.ಎಂ.ಎಸ್ ಮಹದೇವಸ್ವಾಮಿ, ಜಿ.ಬಿ.ಪಲ್ಲವಿ, ಸಿ.ರಮ್ಯ, ಎಚ್.ಬಿ.ಪ್ರತಿಮಾ, ನಂದಾ ಯಲಮಾಲ ಸೇರಿದಂತೆ ಹಲವರಿದ್ದರು.