ಸಾರಾಂಶ
ಎರಡು ದಿನಗಳ ಸುಗಮ ಸಂಗೀತ ತರಬೇತಿ ಶಿಬಿರ
ಕನ್ನಡಪ್ರಭ ವಾರ್ತೆ ಸೊರಬಬದುಕಿಗೆ ಔಷಧ ನೀಡುವ ಗುಣ ಸಂಗೀತಕ್ಕೆ ಇದೆ. ಸ್ನೇಹ, ಪ್ರೀತಿಯ ಅನ್ವರ್ಥನಾಮ ಕೂಡ ಸುಗಮ ಸಂಗೀತ. ಹಾಗಾಗಿ ಸುಗಮ ಸಂಗೀತವನ್ನು ಆಲಿಸದ, ಆಸ್ವಾದಿಸದ ಮನಸ್ಸು ಇದ್ದರೆ ಅದು ಕಲ್ಲು ಹೃದಯವೇ ಸರಿ ಎಂದು ಸಮಾಜ ಸೇವಕ, ರೋಟರಿ ಸಂಸ್ಥಾಪಕ ಅಧ್ಯಕ್ಷ ಡಾ.ಎಚ್.ಇ. ಜ್ಞಾನೇಶ್ ಅಭಿಪ್ರಾಯಪಟ್ಟರು.
ಪಟ್ಟಣದ ನಿಜಗುಣ ರೆಸಿಡೆನ್ಸಿಯಲ್ ಹಾಲ್‌ನಲ್ಲಿ ಶನಿವಾರ ಸುಗಮ ಸಂಗೀತ ಪರಿಷತ್ ಬೆಂಗಳೂರು, ಜಿಲ್ಲಾ ಘಟಕ ಶಿವಮೊಗ್ಗ ಹಾಗೂ ತಾಲೂಕು ಘಟಕ ಸೊರಬ ಮತ್ತು ಗುರುಕುಲ ಸೊರಬ ಜಂಟಿಯಾಗಿ ಹಮ್ಮಿಕೊಂಡಿದ್ದ ಎರಡು ದಿನಗಳ ಸುಗಮ ಸಂಗೀತ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.ವಿಶ್ವದ ಬೇರೆ ಯಾವ ಭಾಗದಲ್ಲಿಯೂ ಇರದ ಕಲಾ ಪ್ರಕಾರ ಸುಗಮ ಸಂಗೀತ. ಕನ್ನಡದ ಅಸ್ಮಿತೆಯಂತೆ ಇರುವ ಸುಗಮ ಸಂಗೀತದ ಬಗ್ಗೆ ಕನ್ನಡಿಗರು ಹೆಮ್ಮೆಪಡಬೇಕು. ಸೃಷ್ಟಿಯ ಪ್ರತಿಯೊಂದು ಅಣುವು ತರಂಗವೇ ಆಗಿದ್ದು ಇದೇ ಸಂಗೀತದ ಮೂಲತತ್ವವಾಗಿದೆ ಎಂದ ಅವರು, ಮರಾಠಿ ರಂಗಗೀತೆ ಅನುಸರಿಸಿ ಹುಟ್ಟಿದ ಸುಗಮ ಸಂಗೀತ ಪ್ರತ್ಯೇಕ ಅಸ್ಮಿತೆ ಉಳಿಸಿಕೊಂಡಿದೆ. ಹಿಂದಿ, ತಮಿಳು, ಮರಾಠಿ ಸೇರಿ ಬೇರೆ ಯಾವುದೇ ಭಾಷೆಯಲ್ಲಿ ಈ ಕಲಾ ಪ್ರಕಾರ ಇಲ್ಲ ಎಂದರು.
ಸಂಗೀತ ಜೀವ ಕುಲದಲ್ಲಿ ಸಾರ್ವತ್ರಿಕವಾಗಿದ್ದರೂ ಸಹ ಮನುಷ್ಯ ಬುದ್ಧಿವಂತಿಕೆ ಹಾಗೂ ಚಾಣಾಕ್ಷತನದಿಂದ ಹೊಸ ಹೊಸ ವಾದ್ಯಗಳನ್ನು ಕಂಡು ಹಿಡಿಯುತ್ತ ಆವಿಷ್ಕರಿಸುತ್ತಿದ್ದಾನೆ. ವೇದಗಳ ಕಾಲದಿಂದಲೂ ಭಾರತೀಯರ ಸಂಗೀತ ಪರಂಪರೆ ಉತ್ಕೃಷ್ಟವಾಗಿದೆ ಎಂದು ತಿಳಿಸಿದರು.ಸಮಾಜ ಸೇವಕ ನಾಗರಾಜ್ ಗುತ್ತಿ ಮಾತನಾಡಿ, ಸುಗಮ ಸಂಗೀತದಿಂದ ಮನಸ್ಸು ಅರಳುವ ಜತೆಗೆ ಮನಸ್ಸಿಗೆ ಆಹ್ಲಾದವನ್ನು ನೀಡುತ್ತದೆ. ಮಕ್ಕಳಲ್ಲಿ ಸುಗಮ ಸಂಗೀತ ಬಗ್ಗೆ ಆಸಕ್ತಿ ಮೂಡಿಸಲು ಇಂತಹ ಶಿಬಿರಗಳು ಅವಶ್ಯಕ. ಸಂಗೀತ ಮನುಷ್ಯ ಸಮಾಜಕ್ಕೆ ಆಧ್ಯಾತ್ಮ ಶಿರಗಳಂತೆ ಶಾಂತಿ ಮತ್ತು ನೆಮ್ಮದಿಯನ್ನ ಕೊಡುವ ಕೆಲಸ ಮಾಡುತ್ತವೆ ಎಂದರು.
ಶಿಬಿರದ ಸಂಪನ್ಮೂಲ ವ್ಯಕ್ತಿ ನಾಡಿನ ಸುಗಮ ಸಂಗೀತ ಗಾಯಕ, ಸಂಗೀತ ಸಂಯೋಜಕ ಉಪಾಸನ ಮೋಹನ್ ಮಾತನಾಡಿ, ಮಕ್ಕಳ ಎದೆಯೊಳಗೆ ಭಾವಗೀತೆಯ ಹಣತೆ ಹಚ್ಚುವ ಕೆಲಸವನ್ನು ಇಂತಹ ಶಿಬಿರಗಳಿಂದ ಮಾಡಲು ಸಾದ್ಯ. ಭಾವಗೀತೆಗಳ ಬಗ್ಗೆ ಮಕ್ಕಳಲ್ಲಿ ಅಭಿರುಚಿ ಮೂಡಿಸುವ ಕೆಲಸ ಮಾಡುವ ಹೊಣೆಗಾರಿಕೆ ಹಿರಿಯರದ್ದು ಎಂದು ಹೇಳಿದರು.ಸುಗಮ ಸಂಗೀತ ಪರಿಷತ್ ಶಿವಮೊಗ್ಗ ಜಿಲ್ಲಾ ಘಟಕದ ಅಧ್ಯಕ್ಷೆ ಶಾಂತಾ ಶೆಟ್ಟಿ ಮಾತನಾಡಿ, ಸೊರಬ ತಾಲೂಕು ಕಲಾವಿದರದರನ್ನು ಗೌರವಿಸುವ ನೆಲೆಯಾಗಿದ್ದು ಸಂಗೀತ ಪ್ರೇಮಿಯಾಗಿದ್ದ ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರು ಕಲಾವಿದರನ್ನು ಗೌರವಿಸಿ ಪುರಸ್ಕರಿಸುತ್ತಿದ್ದರು ಎಂದರು.
ಸುಗಮ ಸಂಗೀತ ಪರಿಷತ್ ತಾಲೂಕು ಘಟಕದ ಅಧ್ಯಕ್ಷ ಎಚ್. ಗುರುಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಕಸಾಪ ಅಧ್ಯಕ್ಷ ಎನ್.ಷಣ್ಮುಖಚಾರ್, ಗುರುಕುಲದ ಸತೀಶ್ ಬೈಂದೂರ್, ಜಿ.ಪ. ಮಾಜಿ ಉಪಾಧ್ಯಕ್ಷ ಪಾಣಿ ರಾಜಪ್ಪ, ಉಮಾದೇವಿ, ಪೂರ್ಣಿಮಾ ಭಾವೆ, ಲಕ್ಷ್ಮಿ ಮುರಳಿಧರ, ವಸಂತ ಬಾಂಬೋರೆ, ಶರತ್ ಹರ್ಡಿಕರ್, ರಾಜಶೇಖರ ಗೌಡ, ರೇವಣಪ್ಪ ಬಿದರಗೇರೆ, ಮೋಹನ್ ಸುರಭಿ ಮೊದಲಾದವರು ಹಾಜರಿದ್ದರು.