ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಕರ್ನಾಟಕ ಸುಗಮ ಸಂಗೀತ ಪರಿಷತ್ತು ಜಿಲ್ಲಾ ಘಟಕ ಹಾಗೂ ಬ್ಲೂಮೈಂಡ್ ಸಲ್ಯೂಷನ್ಸ್ ಸಂಯುಕ್ತ ಆಶ್ರಯದಲ್ಲಿ ಗುರುವಾರ ನಗರದ ಜೆಎಲ್‌ಬಿ ರಸ್ತೆಯ ನಾದಬ್ರಹ್ಮ ಸಭಾಂಗಣದಲ್ಲಿ ರಾಗ ತರಂಗಿಣಿ- ಸುಗಮ ಸಂಗೀತ, ಸಿತಾರ್ ವಾದನ, ದಾಸವಾಣಿ ಕಾರ್ಯಕ್ರಮ ಜರುಗಿತು. ಮಳೆಯ ನಡುವೆಯೂ ಸಂಗೀತಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಸಂಗೀತ ರಸದೌತಣ ಸವಿದರು.ಸಿತಾರ್ ವಾದಕಿ, ಗಾಯಕಿ ಸಿ.ಎಸ್. ವೇದಶ್ರೀ, ಹಿನ್ನೆಲೆ ಗಾಯಕರಾದ ಉಪ್ಪುಂದ ರಾಜೇಶ್ ಪಡಿಯಾರ್, ಹಂಸಿನಿ ಸುಗಮ ಸಂಗೀತ ಹಾಗೂ ದಾಸವಾಣಿ ನಡೆಸಿಕೊಟ್ಟರು. ಆ ಮೂಲಕ ಸಭಿಕರಿಗೆ ಮೂರು ಕಾರ್ಯಕ್ರಮಗಳ ರಸದೌತಣ ಉಣಬಡಿಸಿದರು. ರಶ್ಮಿ ಚಿಕ್ಕಮಗಳೂರು ಕೂಡ ಕೆಲ ಗೀತೆಗಳನ್ನು ಹಾಡಿದರು.
ಪಕ್ಕವಾದ್ಯದಲ್ಲಿ ಪುರುಷೋತ್ತಮ- ಕೀ ಬೋರ್ಡ್, ವಿಶ್ವನಾಥ್- ಮ್ಯಾಂಡೋಲಿನ್, ರಮೇಶ್ ಧನ್ನೂರು, ಸುಚೇಂದ್ರ- ತಬಲ, ವಿನಯ್ ರಂಗದೋಳ್- ರಿದಂ ಪ್ಜಾಡ್ ನುಡಿಸಿದರು.ಸಂಗೀತಕ್ಕೆ ಸೆಳೆಯುವ ಶಕ್ತಿ ಇದೆ:
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ ಉದ್ಘಾಟಿಸಿ ಮಾತನಾಡಿ, ಸಂಗೀತಕ್ಕೆ ಎಲ್ಲರನ್ನು ಸೆಳೆಯುವ ಶಕ್ತಿ ಇದೆ. ಹೀಗಾಗಿಯೇ ರಾಜಮಹಾರಾಜರು ಕೂಡ ಆಸ್ಥಾನದಲ್ಲಿ ಸಂಗೀತ ವಿದ್ವಾಂಸರು, ನೃತ್ಯಗಾರ್ತಿಯರಿಗೆ ಆಶ್ರಯ ನೀಡುತ್ತಿದ್ದರು. ಸಂಗೀತ, ನೃತ್ಯ, ಕಲೆಯಿಂದ ಮನಸ್ಸಿಗೆ ನೆಮ್ಮದಿ ಸಿಗುವುದು ಇದಕ್ಕೆ ಕಾರಣ ಎಂದರು.ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಸುಗಮ ಸಂಗೀತ ಪರಿಷತ್ ಜಿಲ್ಲಾಧ್ಯಕ್ಷ ನಾಗರಾಜ ವಿ. ಬೈರಿ ಮಾತನಾಡಿ, ಕಳೆದ 14 ತಿಂಗಳಲ್ಲಿ ಪರಿಷತ್ ವತಿಯಿಂದ ನಡೆಯುತ್ತಿರುವ 28ನೇ ಕಾರ್ಯಕ್ರಮ ಇದಾಗಿದೆ. ಮೇ 17- 18 ರಂದು ಸುಗಮ ಸಂಗೀತ ಕಾರ್ಯಾಗಾರ ಏರ್ಪಡಿಸಲಾಗಿದೆ. ಜೂನ್‌ನಲ್ಲಿ ಹವ್ಯಾಸಿ ಗಾಯಕರಿಗೆ ಸ್ಪರ್ಧೆ ಏರ್ಪಡಿಸಲಾಗುವುದು. ಮೇ 27 ರಂದು ಕೆ.ಎಸ್. ಅಶ್ವತ್ಥ್ ನೆನಪಿನ ಕಾರ್ಯಕ್ರಮವನ್ನು ಶಂಕರ್ ಅಶ್ವತ್ಥ್ ಅವರ ನಿರೂಪಣೆಯಲ್ಲಿ ನಡೆಸಲಾಗುವುದು ಎಂದರು.
ಕವಿಗಳು ಬರೆದಿರುವ ಭಾವಗೀತೆಗಳು ಚಲನಚಿತ್ರ ಗೀತೆಗಳಂತೆ ಜನರ ಮನೆ- ಮನಗಳಿಗೆ ತಲುಪಿಸಬೇಕು. ಆ ಮೂಲಕ ಸುಗಮ ಸಂಗೀತ ಮತ್ತಷ್ಟು ಪ್ರವರ್ಧಮಾನಕ್ಕೆ ತರಬೇಕು ಎಂಬುದು ನಮ್ಮ ಉದ್ದೇಶ ಎಂದರು.ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಸಮಾಜ ಸೇವಕ ಕೆ. ರಘುರಾಂ ವಾಜಪೇಯಿ ಮುಖ್ಯ ಅತಿಥಿಯಾಗಿದ್ದರು. ಇದೇ ಸಂದರ್ಭದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕಿ ಎಂ.ಎಲ್. ಭಾರತಿ, ಸುಗಮ ಸಂಗೀತ ಗಾಯಕಿ ರಶ್ಮಿ ಚಿಕ್ಕಮಗಳೂರು, ಹೋಟೆಲ್ ಪೈವಿಸ್ತಾ ವ್ಯವಸ್ಥಾಪಕ ಮಹೇಶ್ ಕಾಮತ್ ಅವರನ್ನು ಸನ್ಮಾನಿಸಲಾಯಿತು. ಇದಲ್ಲದೇ ತಬಲ ವಾದಕ ರಮೇಶ್ ಧನ್ನೂರು, ಇತ್ತೀಚೆಗೆ ಪ.ಬಂಗಾಳ ಛಾಯಾಚಿತ್ರ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದಿರುವ ಪತ್ರಿಕಾ ಛಾಯಾಗ್ರಾಹಕ ಅನುರಾಗ್ ಬಸವರಾಜ್ ಅವರನ್ನು ಸನ್ಮಾನಿಸಲಾಯಿತು. ಪ್ರಿಯಾಂಕ ನಾಗರಾಜ್ ಕಾರ್ಯಕ್ರಮ ನಿರೂಪಿಸಿದರು.