ಸಾರಾಂಶ
ಸಂಗೀತಕ್ಕೆ ಸೋಲದ ಮನಸ್ಸುಗಳೇ ಇಲ್ಲ. ಹಾಗೇನಾದರೂ ಸೋಲದೇ ಇದ್ದರೆ ಅದು ಮನಸ್ಸೇ ಅಲ್ಲ ಎಂಬ ಮಾತನ್ನು ಉದಾಹರಿಸಿದ ಶ್ರೀಗಳು ನಾಲವಾರ ಶ್ರೀಮಠ ಭಕ್ತರಲ್ಲಿ ಕೇವಲ ಧಾರ್ಮಿಕ ಸಂಸ್ಕಾರ ಮಾತ್ರ ಬಿತ್ತದೇ ಕಳೆದ ನಾಲ್ಕು ದಶಕದಿಂದ ಸಾಹಿತ್ಯ ಹಾಗೂ ಸಂಗೀತದ ಅಭಿರುಚಿಯನ್ನು ಜನಮಾನಸದಲ್ಲಿ ಮೂಡಿಸುವ ಕಾರ್ಯ ಮಾಡಿಕೊಂಡು ಬರುತ್ತಿದೆ.
ಕನ್ನಡಪ್ರಭ ವಾರ್ತೆ ಕಲಬುರಗಿ
ಸಂಗೀತಕ್ಕೆ ನೋವು, ದುಃಖ, ಆತಂಕ, ಖಿನ್ನತೆಯನ್ನು ಮರೆಸುವ ಶಕ್ತಿ ಇದ್ದು ಮಾನಸಿಕ ಆರೋಗ್ಯ ವೃದ್ಧಿಗೆ ಸಂಗೀತವು ಒಂದು ಸಾಧನವಾಗಿ ಕೆಲಸ ಮಾಡುತ್ತದೆ ಎಂದು ನಾಲವಾರದ ಸದ್ಗುರು ಶ್ರೀ ಕೋರಿಸಿದ್ಧೇಶ್ವರ ಮಹಾಸಂಸ್ಥಾನ ಮಠದ ಪೀಠಾಧಿಪತಿ ಡಾ. ಸಿದ್ಧತೋಟೇಂದ್ರ ಸ್ವಾಮೀಜಿ ಹೇಳಿದರು.ಯುಗಾದಿ ಪ್ರಯುಕ್ತ ಶ್ರೀಮಠದ ಶಿವಾನುಭವ ಮಂಟಪದಲ್ಲಿ ಹಮ್ಮಿಕೊಂಡಿದ್ದ ಮಾಸಿಕ ಶಿವಾನುಭವ ಚಿಂತನ ಹಾಗೂ ಸಂಗೀತೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಸಂಗೀತಕ್ಕೆ ಸೋಲದ ಮನಸ್ಸುಗಳೇ ಇಲ್ಲ. ಹಾಗೇನಾದರೂ ಸೋಲದೇ ಇದ್ದರೆ ಅದು ಮನಸ್ಸೇ ಅಲ್ಲ ಎಂಬ ಮಾತನ್ನು ಉದಾಹರಿಸಿದ ಶ್ರೀಗಳು ನಾಲವಾರ ಶ್ರೀಮಠ ಭಕ್ತರಲ್ಲಿ ಕೇವಲ ಧಾರ್ಮಿಕ ಸಂಸ್ಕಾರ ಮಾತ್ರ ಬಿತ್ತದೇ ಕಳೆದ ನಾಲ್ಕು ದಶಕದಿಂದ ಸಾಹಿತ್ಯ ಹಾಗೂ ಸಂಗೀತದ ಅಭಿರುಚಿಯನ್ನು ಜನಮಾನಸದಲ್ಲಿ ಮೂಡಿಸುವ ಕಾರ್ಯ ಮಾಡಿಕೊಂಡು ಬರುತ್ತಿದೆ ಎಂದರು.ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಅಪ್ಪಾರಾವ ಸೌದಿ, ಆನಂದ ಸೌದಿ, ಡಾ.ಸಿದ್ಧರಾಜರೆಡ್ಡಿ ಯಾದಗಿರಿ, ತೋಟೇಂದ್ರ ಮಾಕಲ್ ಯಾದಗಿರಿ, ಮಹಾದೇವ ಗಂವ್ಹಾರ ಉಪಸ್ಥಿತರಿದ್ದರು.
ಭಕ್ತರನ್ನು ಸಮ್ಮೋಹನಗೊಳಿಸಿದ ಸಂಗೀತೋತ್ಸವ: ಇದೇ ಸಂದರ್ಭದಲ್ಲಿ ನಡೆದ ಸಂಗೀತೋತ್ಸವ ಕಾರ್ಯಕ್ರಮ ನೆರೆದ ಭಕ್ತರನ್ನು ಸಮ್ಮೋಹನಗೊಳ್ಳುವಂತೆ ಮಾಡಿತು. ಖ್ಯಾತ ಗಾಯಕಿ ರೇಖಾ ಸೌದಿ ಯವರ ಅಂದಾವರೆ-ಚಂದಾವರೆ ಎನ್ನುವ ಭಕ್ತಿಗೀತೆ, ದಾಸನಾಗು-ವಿಶೇಷನಾಗು ಎನ್ನುವ ದಾಸರ ಪದ,ಯಾಕೆ ಬಡಿದಾಡ್ತಿ ತಮ್ಮ ಎಂಬ ತತ್ವಪದಗಳು ಸೇರಿದಂತೆ ಹಲವು ಗೀತೆಗಳು ರಾಜ್ಯಪ್ರಶಸ್ತಿ ಪುರಸ್ಕೃತ ಹಿರಿಯ ಗಾಯಕ ಡಾ.ಸಿದ್ರಾಮಪ್ಪ ಪೋಲಿಸ್ ಪಾಟೀಲ ಕುಕನೂರ ಅವರ ಕೋರಿಸಿದ್ಧೇಶ್ವರ ರ ಹಳೆಯ ಭಕ್ತಿಗೀತೆಗಳ ಹಾಗೂ ವಚನಗಳ ಗಾಯನ,ಸಿದ್ದು ಅವರಾದಿ ಹಾಡಿದ ಡಾ. ಸಿದ್ಧತೋಟೇಂದ್ರ ಸ್ವಾಮೀಜಿ ಬರೆದ ವಚನೋಲ್ಲಾಸ ಕೃತಿಯ ವಚನಗಳ ಸುಮಧುರ ಗಾಯನ ನೆರೆದಿದ್ದ ಸಹಸ್ರಾರು ಭಕ್ತರ ಮನಸೂರೆಗೊಳ್ಳುವಲ್ಲಿ ಯಶಸ್ವಿಯಾದವು.ರಾಜು ಸಾತಖೇಡ ಅವರ ಭರತನಾಟ್ಯ,ಸಾಯಿಬಣ್ಣ ಗೋಗಿ ಅವರ ಕ್ಲಾರಿಯೋನೇಟ್ ವಾದನ ಸೇರಿದಂತೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.