ಯಲಬುರ್ಗಾ: ಸಂಗೀತಕ್ಕೆ ನೋವು ಮರೆಸುವ ಶಕ್ತಿಯಿದೆ. ಎಲ್ಲರೂ ಸಂಗೀತ ಆಲಿಸಲು ಉತ್ಸುಕರಾಗಬೇಕು ಎಂದು ಮುಖಂಡ ಯಮನೂರಪ್ಪ ಮಂತ್ರಿ ಹೇಳಿದರು.

ತಾಲೂಕಿನ ಗುಳೆ ಗ್ರಾಮದಲ್ಲಿ ಕುಷ್ಟಗಿಯ ನಾದಮಯ ಸಂಗೀತ ಕಲಾ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಸಾಮಾನ್ಯ ಯೋಜನೆಯಡಿಯಲ್ಲಿ ಆಯೋಜಿಸಿದ್ದ ಸುಗಮ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮನಸ್ಸಿನೊಳಗಿನ ದುಗುಡ ನಿವಾರಣೆ ಮಾಡಿ ಶಾಂತಿ, ಸಮಾಧಾನ ತರುವಂಥ ಶಕ್ತಿ ಸಂಗೀತಕ್ಕಿದೆ. ಹೀಗಾಗಿ ಸಂಗೀತ ಆಸ್ವಾದಿಸಲು ಪ್ರತಿಯೊಬ್ಬರೂ ರೂಢಿಸಿಕೊಳ್ಳಬೇಕು ಎಂದರು.

ಸಂಗೀತಕ್ಕೆ ಇತಿಹಾಸ ಇದ್ದು, ಅನೇಕ ಮಹನೀಯರ ಬೆಳವಣಿಗೆಗೆ ಕಾರಣವಾಗಿದೆ. ಇತ್ತೀಚೆಗೆ ಸಂಗೀತದಲ್ಲಿ ಅಶ್ಲೀಲ ಸಾಹಿತ್ಯ ಸೇರಿಕೊಂಡು ಕಲುಷಿತಗೊಂಡಿದೆ. ಹೀಗಾಗಿ ಸಾಮಾಜಿಕ ಪ್ರಜ್ಞೆ ಮೂಡಿಸುವ ಜನಪದ, ದಾಸ ಸಾಹಿತ್ಯ, ವಚನ ಸಾಹಿತ್ಯ ಹೊಂದಿರುವ ಸತ್ಯ, ಶುದ್ಧ ಸಂಗೀತ ಉಳಿಸಬೇಕು ಎಂದರು.

ಮುಖಂಡ ಬಸಪ್ಪ ತಿಮ್ಮನಗೌಡರ, ಗಾಯಕ ಹನಮಂತ ಕುಮಾರ ಮೇಟಿ ಮಾತನಾಡಿದರು.


ಕಲಾವಿದರಾದ ನಾಡಿನ ಹೆಸರಾಂತ ಸಂಗೀತ ಗಾಯಕ ಹನುಮಂತ ಕುಮಾರ್ ಮೇಟಿ, ರಂಗಭೂಮಿ ಕಲಾವಿದ ಶಿವಮೂರ್ತಿ ದೊಡ್ಡಮನಿ, ತಬಲಾ ವಾದಕ ಪ್ರತಾಪಕುಮಾರ್ ಹಿರೇಮಠ, ಬಸಪ್ಪ, ಡಿ.ಶರಣಬಸವ ಚನ್ನದಾಸರ್, ನಾದಮಯ ಕಲಾ ಸಂಸ್ಥೆಯ ಅಧ್ಯಕ್ಷ ಹಾಗೂ ಆಕಾಶವಾಣಿ ಕಲಾವಿದ ಹೋಳಿಯಪ್ಪ ಗುರಿಕಾರ, ನಿಂಗಪ್ಪ ಗುರಿಕಾರ ಸೇರಿದಂತೆ ಗುಳೆ ಗ್ರಾಮಸ್ಥರು, ಗಣ್ಯರು ಹಾಗೂ ನಾದಮಯ ಸಂಗೀತ ಕಲಾ ಸಂಸ್ಥೆ ಸದಸ್ಯರು ಇತರರು ಇದ್ದರು.