ಸಂಗೀತವು ಸುಲಭವಾಗಿ ಎಲ್ಲರಿಗೂ ಸಿಗುವಂತದ್ದಲ್ಲ, ಅದಕ್ಕೆ ಸಾಕಷ್ಟು ಶ್ರಮ ಮತ್ತು ತಪಸ್ಸು ಬೇಕು ಎಂದು ಶಿಗ್ಗಾಂವಿಯ ವಿರಕ್ತಮಠದ ಸಂಗನಬಸವ ಮಹಾಸ್ವಾಮೀಜಿಗಳು ಹೇಳಿದರು.
ಶಿಗ್ಗಾಂವಿ: ಸಂಗೀತವು ಸುಲಭವಾಗಿ ಎಲ್ಲರಿಗೂ ಸಿಗುವಂತದ್ದಲ್ಲ, ಅದಕ್ಕೆ ಸಾಕಷ್ಟು ಶ್ರಮ ಮತ್ತು ತಪಸ್ಸು ಬೇಕು ಎಂದು ಶಿಗ್ಗಾಂವಿಯ ವಿರಕ್ತಮಠದ ಸಂಗನಬಸವ ಮಹಾಸ್ವಾಮೀಜಿಗಳು ಹೇಳಿದರು.
ನಗರದ ವಿರಕ್ತಮಠದಲ್ಲಿ ಶಿಗ್ಗಾಂವಿಯ ಗಾನಯೋಗಿ ಪಂಡಿತ ಪುಟ್ಟರಾಜ ಗವಾಯಿಗಳ ಕಲಾ ಸಂಸ್ಥೆ ವತಿಯಿಂದ ನಡೆದ ನಿವೃತ್ತ ಶಿಕ್ಷಕರು ಹಾಗೂ ಸಾಧಕರಿಗೆ ಏರ್ಪಡಿಸಿದ ಸನ್ಮಾನ ಸಮಾರಂಭದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.ಯಾವುದೇ ಫಲಾಪೇಕ್ಷೆ ಇಲ್ಲದೆ ಸೇವೆ ಮಾಡುವ ಸಂಸ್ಥೆ ರಾಜ್ಯದಲ್ಲಿ ಯಾವುದಾದರೂ ಇದ್ದರೆ ಅದು ಶಿಗ್ಗಾಂವಿಯ ಪುಟ್ಟರಾಜ ಗವಾಯಿಗಳ ಕಲಾ ಸಂಸ್ಥೆ, ಇಲ್ಲಿ ಯಾರಿಗೂ ಅಹಂ ಎಂಬುದಿಲ್ಲ, ಎಲ್ಲರೂ ನಿಸ್ವಾರ್ಥ ಸೇವೆ ಸಲ್ಲಿಸುವವರು. ಈ ಸಂಸ್ಥೆಯವರು ಸಾಧಕರನ್ನು ನಿರಂತರವಾಗಿ ಸನ್ಮಾನಿಸುತ್ತ ಗೌರವಿಸುವ ಕಾರ್ಯ ಮಾಡುತ್ತಾ ಬಂದಿದ್ದಾರೆ. ಈ ಕಲಾ ಸಂಸ್ಥೆಗೆ ನಿರಂತರವಾಗಿ ಮಠದ ಸಹಾಯ ಸಹಕಾರ ಇರುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಶಶಿಕಾಂತ ರಾಠೋಡ್ ಅವರು ಮಾತನಾಡಿ, ಸಂಗೀತ ಕ್ಷೇತ್ರದಲ್ಲಿ ತಮ್ಮದೇ ಛಾಪನ್ನು ಮೂಡಿಸಿ ವೃತ್ತಿಯ ಜೊತೆಗೆ ಸಂಗೀತ ಸೇವೆಯನ್ನು ಸಲ್ಲಿಸಿದ ಮಲ್ಲಿಕಾರ್ಜುನ್ ಆರಾಧ್ಯಮಠ ಹಾಗೂ ಪ್ರಭಾಕರ್ ಬಡಿಗೇರ ಹಾಗೂ ಶರೀಫ ಮಾಕಪ್ಪನವರ ಅವರ ಸೇವೆ ಸ್ಮರಣೀಯ. ಮೂರು ಜನ ಮಹನೀಯರನ್ನು ಗುರುತಿಸಿ ಸನ್ಮಾನ ಮಾಡಿರುವುದು ನಿಜಕ್ಕೂ ಸಂತೋಷ ತಂದಿದೆ ಎಂದರು.ಅವರು ಸೇವೆಯ ಸಂದರ್ಭದಲ್ಲಿ ಯಾವುದೇ ಫಲಾಪೇಕ್ಷೆ ಬಯಸದೆ ಸಂಗೀತ ಸೇವೆಯನ್ನು ಪಂಡಿತ ಪುಟ್ಟರಾಜ ಗವಾಯಿಗಳ ಕಲಾ ಸಂಸ್ಥೆ ಮೂಲಕ ಸೇವೆ ಮಾಡಿದ್ದಾರೆ. ಸುಮಾರು ವರ್ಷಗಳಿಂದ ನಮ್ಮ ಪುಟ್ಟರಾಜ ಗವಾಯಿಗಳ ಕಲಾ ಸಂಸ್ಥೆಯಲ್ಲಿ ಸಂಗೀತ ಶಿಕ್ಷಣ ನಿಂತು ಹೋಗಿದ್ದು ಮುಂದುವರೆಸುವುದಕ್ಕೆ ತಾವೆಲ್ಲರೂ ಸಹಕಾರ ನೀಡಬೇಕು ಎಂದರು.
ಸನ್ಮಾನ ಸ್ವೀಕರಿಸಿದ ನಿವೃತ್ತ ಶಿಕ್ಷಕರು ಹಾಗೂ ಕಲಾವಿದರಾದ ಪ್ರಭಾಕರ ಬಡಿಗೇರ ಅವರು ಮಾತನಾಡಿ, ನಾನು ಸಂಗೀತ ಅಭ್ಯಾಸ ಮಾಡಲು ನನಗೆ ನನ್ನ ತಂದೆಯವರು ಪ್ರೇರಣೆ. ನನಗೆ ಕಲಾ ಕ್ಷೇತ್ರದಲ್ಲಿ ಪರಿಚಯವಾದವರು ಕೊಟ್ರೇಶ್ ಮಾಸ್ತರ ಬೆಳಗಲಿ, ಅವರು ಅವರ ಪ್ರೇರಣೆ ಮೂಲಕ ನಾನು ಸರ್ಕಾರಿ ಸೇವೆ ಜೊತೆಗೆ ಕಲಾ ಸೇವೆ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಪುಣ್ಯ ಎಂದರು.ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರು ಹಾಗೂ ಸಂಗೀತ ಕಲಾವಿದರು ಆದ ಮಲ್ಲಿಕಾರ್ಜುನ ಆರಾಧ್ಯಮಠ ಪ್ರಭಾಕರ್ ಬಡಿಗೇರ್ ಹಾಗೂ ಡಾ. ಶರೀಫ ಮಾಕಪ್ಪನವರ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕೊಟ್ರೇಶ ಮಾಸ್ತರ ಬೆಳಗಲಿ, ರಮೇಶ ಸಾತಣ್ಣವರ, ವಿರೂಪಾಕ್ಷಪ್ಪ ಬಗಾಡೆ, ಚಿನ್ನಪ್ಪ ಮುಳಗುಂದ, ಸಿದ್ದಲಿಂಗಪ್ಪ ನೆರೆಗಲ್ಲ, ನಿಂಗಪ್ಪ ಕುರುಬರ, ವೆಂಕವ್ವ ಬಂಡಿವಡ್ಡರ, ಕಲಾವಿದರಾದ ಹನಮಂತಪ್ಪ ಕಾಮನಳ್ಳಿ ಉಪಸ್ಥಿತರಿದ್ದರು.ಸಂಸ್ಥೆಯ ಅಧ್ಯಕ್ಷರಾದ ಫಕ್ಕೀರೇಶ ಕೊಂಡಾಯಿ ಪ್ರಾಸ್ತವಿಕವಾಗಿ ಮಾತನಾಡಿದರು. ಶಿಕ್ಷಕ ಎಸ್.ಕೆ. ಹೂಗಾರ್ ಸ್ವಾಗತಿಸಿದರು. ಬಿ.ಎಚ್. ಚಲವಾದಿ ಕಾರ್ಯಕ್ರಮ ನಿರೂಪಿಸಿದರು.