ಕನ್ನಡಪ್ರಭ ವಾರ್ತೆ ರಾಮನಗರ

ಸಂಗೀತ ಎಂಬುದು ಮನಸ್ಸಿನ ಕ್ಲೇಶಗಳ ನಿವಾರಣೆಗೆ ಮದ್ದು. ವೈವಿಧ್ಯಮಯ ಗೀತೆಗಳ ಗಾಯನವು ಮಾನಸಿಕ ನೆಮ್ಮದಿ ನೀಡಿ ಮನುಷ್ಯನನ್ನು ವೈಚಾರಿಕತೆಯ ಕಡೆಗೆ ಕರೆದೊಯ್ಯುವ ಸಾಧನ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೆ. ಸತೀಶ್ ಹೇಳಿದರು.

ಕೃಷ್ಣಾಪುರದೊಡ್ಡಿಯ ಕೆ.ಎಸ್. ಮುದ್ದಪ್ಪ ಸ್ಮಾರಕ ಟ್ರಸ್ಟ್ ಕೆರೆಮೇಗಳದೊಡ್ಡಿಯ ಬಳಿ ಮುದ್ದುಶ್ರೀ ದಿಬ್ಬದ ಸಮುಚ್ಛಯದಲ್ಲಿ ನೂತನವಾಗಿ ಕೆ.ಎಸ್. ಮುದ್ದಪ್ಪ ಚಿಕ್ಕಮ್ಮ ರಂಗಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಪ್ರತಿ ತಿಂಗಳ ‘ತಿಂಗಳ ತಳಿರು’ ಶೀರ್ಷಿಕೆಯಲ್ಲಿ ಆರಂಭವಾಗಿರುವ ಸರಣಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಾಮನಗರದಂಥ ನಗರ, ಬೆಂಗಳೂರಿನಂಥ ಮಹಾನಗರಗಳಲ್ಲಿ ಸದಾ ಒಂದಿಲ್ಲೊಂದು ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತವೆ. ಸಾಮಾಜಿಕ ಜಾಲತಾಣಗಳಲ್ಲಿ ಗ್ರಾಮೀಣ ಜನತೆ ಕಳೆದುಹೋಗುತ್ತಿರುವ ಈ ದಿನಮಾನಗಳಲ್ಲಿ ಪ್ರತೀ ಊರಿನಲ್ಲೂ ಈ ಬಗೆಯ ಕಲಾ ಚಟುವಟಿಕೆಗಳು ನಡೆಯುತ್ತಿರಬೇಕು. ಜನರ ಆಸಕ್ತಿಯನ್ನು ಪುನರುಜ್ಜೀವನಗೊಳಿಸಲು ಅದು ಸಹಕಾರಿಯಾಗಬಲ್ಲದು ಎಂದರು.

ಟ್ರಸ್ಟ್ ಕಾರ್ಯದರ್ಶಿ ಡಾ. ಎಂ. ಬೈರೇಗೌಡ ಮಾತನಾಡಿ, ಮಾನವ ಜಗತ್ತಿನ ಇತಿಹಾಸದಲ್ಲಿ ಸಂಗೀತಕ್ಕೆ ಮನಸೋಲದವರು ಯಾರೂ ಇಲ್ಲ. ಅದರ ಮಾಧುರ್ಯದಿಂದ ರೋಗಗಳು ದೂರಾಗಬಲ್ಲವು. ಸಂಗೀತ ಕಾರ್ಯಕ್ರಮ ನಡೆಸಿಕೊಡುತ್ತಿರುವ ಎಲ್ಲ ಕಲಾವಿದರೂ ಸಮಾಜಕ್ಕೆ ಬಹುಮುಖ್ಯ ಎಂದು ತಿಳಿಸಿದರು.


ಗಂಧರ್ವ ಕಂಠದ ಕಲಾವಿದರಿಗೆ ಪೂರಕ ವೇದಿಕೆ ಕಲ್ಪಿಸಿಕೊಡುವ ಮತ್ತು ಗ್ರಾಮೀಣ ಪರಿಸರದಲ್ಲಿ ಸಾಂಸ್ಕೃತಿಕ ಜಾಗೃತಿ ಮೂಡಿಸುವ ಈ ಕೆಲಸದಲ್ಲಿ ನಾವು ತೊಡಗಿಸಿಕೊಂಡಿದ್ದೇವೆ. ಇಂತಹ ಕಾರ್ಯಕ್ರಮಗಳ ಮೂಲಕವೇ ನಾಡು- ನುಡಿ, ನೆಲ- ಜಲಗಳ ಬಗ್ಗೆ ಜಾಗೃತಿ ಮೂಡಲು ಸಾಧ್ಯ ಎಂದು ಹೇಳಿದರು.

ಕಾರ್ಯಕ್ರಮ ನಡೆಸಿಕೊಡಲು ಆಗಮಿಸಿದ ತಂಡದ ನಾಯಕಿ ವಿಧೂಷಿ ವಿನುತಾ ಬೂದಿಹಾಲ್, ಜನಪದ ಗೀತೆಗಳು, ಭಾವಗೀತೆಗಳು, ಅನುಭಾವ ಗೀತೆಗಳು ಜೀವನದ ಕುಲುಮೆಯಲ್ಲಿ ಬೆಂದು ಹದಗೊಂಡ ರಸಪಾಕ. ಅದನ್ನು ಒಂದು ಸಮತೋಲನ ನೆಲೆಯಲ್ಲಿ ಸಹೃದಯರಿಗೆ ಹಂಚುವ ವಾಹಕಿಯರಾಗಿ ನಮ್ಮ ಕಂಠದ ಮೂಲಕ ಉಣಬಡಿಸುವ ಕೆಲಸವನ್ನಷ್ಟೇ ಮಾಡುತ್ತೇವೆ. ಅಂತಹ ಕಾರ್ಯಕ್ಕೆ ಸಾಕ್ಷಿಯಾಗಿರುವ ಈ ತಿಂಗಳ ತಳಿರು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ನಡೆಯಲಿ ಎಂದು ಆಶಿಸಿದರು.

ತಿಂಗಳ ತಳಿರು ಸರಣಿಯ ಮೊದಲ ಕಾರ್ಯಕ್ರಮದ ಪಕ್ಕ ವಾದ್ಯದಲ್ಲಿ ಕೀಬೋರ್ಡ್ ವಾದಕ ಪುಣ್ಯೇಶ್, ತಬಲ ವಾದನದಲ್ಲಿ ದೇವರಾಜ್ ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ವಿನುತಾ ಬೂದಿಹಾಲ್ ಅವರನ್ನು ಸನ್ಮಾನಿಸಲಾಯಿತು. ದಿವ್ಯಾ ಎಂ. ಬಸವರಾಜು, ಸಂಧ್ಯಾ, ಲತಾ ಮತ್ತು ಶಶಿಕಲಾ ಭಾವಗೀತೆ ಮತ್ತು ಜನಪದ ಗೀತೆಗಳನ್ನು ಹಾಡಿ ರಂಜಿಸಿದರು.