ಸಾರಾಂಶ
ದಾಂಡೇಲಿ: ಸಂಗೀತ-ಇದು ಕೇವಲ ಗಾಯನವಷ್ಟೇ ಅಲ್ಲ. ಮನರಂಜನೆಯಷ್ಟೇ ಅಲ್ಲ. ಸಂಗೀತ ಇದು ಜಾತಿ, ಧರ್ಮ, ಭಾಷೆಗಳ ಎಲ್ಲೆಯನ್ನು ಮೀರಿದಂತಹ ಒಂದು ಮಾಧ್ಯಮ. ಸಂಗೀತಕ್ಕೆ ಇರುವ ಶಕ್ತಿ ಅಪಾರವಾದದ್ದು ಎಂದು ದಾಂಡೇಲಿ ನಗರಸಭಾ ಅಧ್ಯಕ್ಷ ಅಷ್ಪಾಕ್ ಶೇಖ್ ಹೇಳಿದರು.
ದಾಂಡೇಲಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಉತ್ತರ ಕನ್ನಡ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರು ಪರಿಶಿಷ್ಟ ಜಾತಿ ಉಪ ಯೋಜನೆಯಡಿಯಲ್ಲಿ ಹಮ್ಮಿಕೊಂಡಿದ್ದ ''''''''ಹಾಡಿರೆ ರಾಗಗಳ ತೂಗಿರೆ ದೀಪಗಳ'''''''' ಸಂಗೀತ ಗಾಯನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪ್ರತಿಯೊಬ್ಬ ಮನುಷ್ಯನಲ್ಲಿ ಕಲೆಯನ್ನು ಆರಾಧಿಸುವ ಮನಸ್ಥಿತಿ ಇರಬೇಕು. ಕಲೆ ಸಾಹಿತ್ಯ ಸಂಗೀತ ಸಂಸ್ಕೃತಿ ಇವು ಮನುಷ್ಯನ ಸೃಜನಶೀಲತೆಯನ್ನು ಹೆಚ್ಚಿಸುತ್ತವೆ. ಆ ನಿಟ್ಟಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರು ದಾಂಡೇಲಿಯಲ್ಲಿ ಹಮ್ಮಿಕೊಂಡ ಈ ಕಾರ್ಯಕ್ರಮ ಅತ್ಯಂತ ಅರ್ಥಪೂರ್ಣವಾದದ್ದು ಎಂದರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎನ್. ವಾಸರೆ ಮಾತನಾಡಿ, ದೇವರನ್ನು ತಲುಪುವ ಭಾಷೆಯೊಂದು ಇದೆ ಎಂದರೆ ಅದು ಸಂಗೀತ ಮಾತ್ರ. ಸಂಗೀತ ಗಾಯನ ಯಾವುದೇ ಭಾಷೆಯಲ್ಲಿದ್ದರೂ ನಮ್ಮಿಂದ ಅದನ್ನು ಆಸ್ವಾದಿಸಲು ಸಾಧ್ಯವಾಗುತ್ತದೆ. ಸಂಗೀತಕ್ಕೆ ಯಾವುದೇ ಕುಲ ಹಾಗೂ ಭಾಷೆಯ ಹಂಗಿಲ್ಲ. ಉತ್ತರ ಕನ್ನಡ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಿಲ್ಲೆಯಾದ್ಯಂತ ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಅನೇಕ ಕಲಾವಿದರಿಗೆ ಆವಕಾಶ ನೀಡುತ್ತಿರುವುದು ಸ್ತುತ್ಯಾರ್ಹವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ. ಎಂ.ಡಿ. ಒಕ್ಕುಂದ ಮಾತನಾಡಿ, ಮನುಷ್ಯನ ಇಡೀಯಾದ ಬದುಕು ಒಂದು ಲಯದಿಂದ ಕೂಡಿರುತ್ತದೆ. ಆ ಲಯದ ಒಂದು ಭಾಗವೇ ಸಂಗೀತ. ಸಂಗೀತಕ್ಕೆ ಎಲ್ಲರನ್ನು ಒಲಿಸಿಕೊಳ್ಳುವ, ಎಲ್ಲರನ್ನು ಒಳಗೊಳ್ಳುವ ಶಕ್ತಿ ಇರುತ್ತದೆ ಎಂದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಮಂಗಲಾ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮ ಒಳಗಡೆ ಇರುವ ಮೂಲ ಸಂಸ್ಕೃತಿ ಹಾಗೂ ಸಂಗೀತವನ್ನು ನಾವು ಮರೆಯುತ್ತಿದ್ದೇವೆ. ಜನಪದ ಗಾಯನಗಳು, ಗೀಗಿ ಪದಗಳು, ಸೋಬಾನೆ ಹಾಡುಗಳು ಇವೆಲ್ಲವೂ ದೂರವಾಗುತ್ತಿರುವ ಸಂದರ್ಭದಲ್ಲಿ ಅಂತಹ ಹಾಡುಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಇಂಥ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ಹೇಳಿದರು.
ಮನೋಹರ ಬುಡುಚಂಡಿ ಅವರು ಶಾಸಕ ಆರ್.ವಿ. ದೇಶಪಾಂಡೆ ಅವರ ಶುಭ ಸಂದೇಶ ವಾಚಿಸಿದರು. ಡಾ ಚಂದ್ರಶೇಖರ್ ಲಮಾಣಿ ವಂದಿಸಿದರು. ಬಸವರಾಜ ಹುಲಿಕಟ್ಟಿ ಕಾರ್ಯಕ್ರಮ ನಿರೂಪಿಸಿದರು.