ಸಾರಾಂಶ
ಚಿಕ್ಕಮಗಳೂರು, ಸಂಗೀತ ಎನ್ನುವುದು ಮಗು ಹುಟ್ಟಿ, ತಾಯಿ ಲಾಲಿ ಹಾಡುವಾಗಿನಿಂದ ಇಡೀ ಜೀವನ ಕಳೆದು ಬದುಕಿನ ಅಂತಿಮ ಕ್ಷಣದ ವರೆಗೂ ಹಾಸುಹೊಕ್ಕಾಗಿರುವ ಮಾಧ್ಯಮ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ.ಆರ್.ದೇವರಾಜ ಶೆಟ್ಟಿ ಹೇಳಿದರು.
ಸಂಭಾಷಣೆಕಾರ ಆರ್.ಎನ್.ಜಯಗೋಪಾಲ್ ಸಾಹಿತ್ಯ ನೀಡಿರುವ ಗೀತೆಗಳ ಗಾಯನ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಸಂಗೀತ ಎನ್ನುವುದು ಮಗು ಹುಟ್ಟಿ, ತಾಯಿ ಲಾಲಿ ಹಾಡುವಾಗಿನಿಂದ ಇಡೀ ಜೀವನ ಕಳೆದು ಬದುಕಿನ ಅಂತಿಮ ಕ್ಷಣದ ವರೆಗೂ ಹಾಸುಹೊಕ್ಕಾಗಿರುವ ಮಾಧ್ಯಮ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ.ಆರ್.ದೇವರಾಜ ಶೆಟ್ಟಿ ಹೇಳಿದರು.
ನಗರದ ಎಂಇಎಸ್ ಕಾಲೇಜಿನಲ್ಲಿ ಪೂರ್ವಿ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್ ಹಾಗೂ ಯುರೇಕಾ ಅಕಾಡೆಮಿ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಖ್ಯಾತ ಸಾಹಿತಿ, ಸಂಭಾಷಣೆಕಾರ ಆರ್.ಎನ್. ಜಯಗೋಪಾಲ್ ಸಾಹಿತ್ಯ ನೀಡಿರುವ ಚಿತ್ರಗೀತೆಗಳ ‘ಕಂಗಳು ವಂದನೆ ಹೇಳಿದೆ’ 105 ನೇ ಸರಣಿ ಪೂರ್ವಿ ಗಾನ ಯಾನ ಉದ್ಘಾಟಿಸಿ ಮಾತನಾಡಿದರು. ಮನಸ್ಸಿಗೆ ನೋವಾದ ಸಂದರ್ಭವೇ ಇರಲಿ, ಖುಷಿಯಾದ ಸಂದರ್ಭವೇ ಇರಲಿ ಸಂಗೀತ ಆಲಿಸಿದರೆ ಆಹ್ಲಾದ ನೀಡುತ್ತದೆ. ಹಲವಾರು ನೋವುಗಳನ್ನು ಮರೆಸುತ್ತದೆ. ಸಂಗೀತಕ್ಕಿರುವ ಶಕ್ತಿ ಅಷ್ಟು ದೊಡ್ಡದು. ಅದರಲ್ಲೂ ವಿಶೇಷವಾಗಿ ಸಂಗೀತ ಲೋಕದ ಮಾಂತ್ರಿಕ ಆರ್.ಎನ್.ಜಯಗೋಪಾಲ್ ಅವರ ಗೀತೆಗಳು ಮನಸ್ಸನ್ನು ಮುದಗೊಳಿಸುತ್ತವೆ. ಅವರ ಹಾಡುಗಳನ್ನು ಕೇಳುತ್ತಿದ್ದರೆ ನಮ್ಮನ್ನು ಅಂದಿನ ಲೋಕಕ್ಕೆ ಒಯ್ಯುತ್ತದೆ. ಆಗಿನ್ನೂ ಟಿ.ವಿ. ಬಂದಿರಲಿಲ್ಲ. ಆಕಾಶವಾಣಿಯಲ್ಲಿ ಚಿತ್ರಗೀತೆಗಳ ಕಾರ್ಯಕ್ರಮ ಆಲಿಸಲು ನಾವೆಲ್ಲಾ ಕಾಯುತ್ತಿದ್ದೆವು ಎಂದು ನೆನಪಿಸಿಕೊಂಡರು. ಮಲೆನಾಡು ವಿದ್ಯಾಸಂಸ್ಥೆ ಅಧ್ಯಕ್ಷ ಎನ್.ಕೇಶವಮೂರ್ತಿ ಮಾತನಾಡಿ, ಕಳೆದ 10 ವರ್ಷಗಳಿಂದ ನಿರಂತರವಾಗಿ ಭಾರತೀಯ ಚಿತ್ರರಂಗದ ಗೀತೆಗಳ ಸುಧೆಯುಣಿಸುವ ಮೂಲಕ ಹಾಗೂ ಕನ್ನಡ ನಾಡು ನುಡಿಗೆ ಶ್ರಮಿಸಿದ ಶ್ರೇಷ್ಠ ಕವಿಗಳು ರಚಿಸಿದ ಸುಗಮ ಸಂಗೀತ ಕ್ಷೇತ್ರದ ಗೀತೆಗಳನ್ನು ಉಣ ಬಡಿಸುವ ಮೂಲಕ ಪೂರ್ವಿ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್ ಸೇವೆ ಸಲ್ಲಿಸುತ್ತಾ ಬಂದಿದೆ. ಅನೇಕ ಯುವ ಕಲಾವಿದರಿಗೆ ವೇದಿಕೆ ಕಲ್ಪಿಸುತ್ತಿದೆ. ಮಲೆನಾಡು ವಿದ್ಯಾಸಂಸ್ಥೆ ವಿದ್ಯೆ ಒಂದಕ್ಕೆ ಮಾತ್ರ ಆದ್ಯತೆ ನೀಡುತ್ತಿಲ್ಲ. ಕಲೆ, ಸಂಸ್ಕೃತಿಗೆ ಒತ್ತು ನೀಡುತ್ತಾ ಪ್ರತಿಭೆಗಳನ್ನು ಗುರುತಿಸುತ್ತಾ ಬಂದಿದೆ. ಪ್ರತೀ ವರ್ಷ ತ್ಯಾಗರಾಜರು ಹಾಗೂ ಪುರಂದರದಾಸರ ಆರಾಧನಾ ಮಹೋತ್ಸವನ್ನು ನಡೆಸುತ್ತಿದ್ದು, ಕಲಾವಿದರನ್ನು ಗುರುತಿಸಿ ಸನ್ಮಾನಿ ಸುತ್ತಿದ್ದೇವೆ ಎಂದು ತಿಳಿಸಿದರು.ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕ ಡಾ.ಡಿ.ಎನ್.ತೇಜಸ್ವಿನಿ ಮಾತನಾಡಿ, ಮನುಷ್ಯ ಕಾಯಿಲೆ ಇಲ್ಲವೆಂದರೂ ಅವರನ್ನು ಆರೋಗ್ಯವಂತರೆನ್ನಲಾಗದು. ದೈಹಿಕ, ಮಾನಸಿಕ, ಸಾಮಾಜಿಕವಾಗಿ ಸಕ್ರಿಯರಅಗಿದ್ದರೆ ಅವರನ್ನು ಆರೋಗ್ಯ ವಂತರೆಂದು ಗುರುತಿಸಬಹುದು. ಸಂಗೀತದಿಂದ ಮಾನಸಿಕವಾಗಿ ಸಕಾರಾತ್ಮಕ ಪ್ರಭಾವ ಬೀರುತ್ತದೆ. ಮಾನಸಿಕ ಆರೋಗ್ಯ ತಜ್ಞರು ಹೇಳುವ ಪ್ರಕಾರ ಸಂಗೀತವನ್ನು ಚಿಕಿತ್ಸೆಗೂ ಬಳಸುತ್ತಿದ್ದಾರೆ. ಹಾಗಾಗಿ ನಮಗೆ ಕಲಾವಿದರ ಬಗ್ಗೆ ತುಂಬಾ ಗೌರವವಿದೆ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಯುರೇಕಾ ಅಕಾಡೆಮಿ ಸಂಸ್ಥಾಪಕ ದೀಪಕ್ ದೊಡ್ಡಯ್ಯ ಮಾತನಾಡಿ, ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಇದೇ ಸಂದರ್ಭದಲ್ಲಿ ನೆನಪಿಸಿಕೊಂಡು, ಮಹಿಳೆಯರು ಈ ಸಮಾಜದ ಅಂಗ. ಮಹಿಳೆಯರು ಸಮಾಜದಲ್ಲಿ ಇಲ್ಲವೆಂದು ಒಂದು ಕ್ಷಣ ಆಲೋಚಿಸಿದರೆ ಶೂನ್ಯ ಆವರಿಸುತ್ತದೆ ಎಂದು ಹೇಳಿದರು.ಆರ್.ಎನ್.ಜಯಗೋಪಾಲ್ ಸಾಹಿತ್ಯವನ್ನು ಆಧರಿಸಿದ ಸಂಗೀತ ಕಾರ್ಯಕ್ರಮ. ಸಾಹಿತ್ಯಕ್ಕೆ ಸಾವಿಲ್ಲ. ರನ್ನ, ಪಂಪ, ಬೇಂದ್ರೆ, ಕುವೆಂಪು ಅವರ ಸಾಹಿತ್ಯ ಇಂದಿಗೂ ಹಚ್ಚಹಸಿರಾಗಿವೆ. ಸುಧೀರ್ ನೇತೃತ್ವದಲ್ಲಿ 105 ನೇ ಸರಣಿ ಗಾನಯಾನ ನಡೆಯುತ್ತಿದ್ದು, ಇದು ಸಾವಿರಕ್ಕೆ ತಲುಪಲಿ ಎಂದು ಹಾರೈಸಿದರು.ಗಾಯಕರಾದ ಎಂ.ಎಸ್.ಸುಧೀರ್, ಚೇತನ್‌ರಾಮ್, ಪೂಜ್ಯ, ಅನುಷ, ಲಾಲಿತ್ಯ ಅಣ್ವೇಕರ್, ಪ್ರಣಮ್ಯ, ಅರ್ಚನಾ ಸಂದೀಪ್ ಹಾಗೂ ಸಾತ್ವಿಕ್ ಅವರು ಆರ್.ಎನ್.ಜಯಗೋಪಾಲ್ ಗೀತೆಗಳಿಗೆ ಧ್ವನಿಯಾದರು.
ಕಾರ್ಯಕ್ರಮದಲ್ಲಿ ಮಲೆನಾಡು ವಿದ್ಯಾಸಂಸ್ಥೆ ನಿರ್ದೇಶಕ ನಂಜೇಗೌಡ ಉಪಸ್ಥಿತರಿದ್ದರು. ಪೂರ್ವಿ ಸುಗಮ ಸಂಗೀತ ಅಕಾಡೆಮಿ ಅಧ್ಯಕ್ಷ ಎಂ.ಎಸ್.ಸುಧೀರ್, ರೂಪಾ ನಾಯ್ಕ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಪೋಟೋ ಫೈಲ್ ನೇಮ್ 10 ಕೆಸಿಕೆಎಂ 1ಆರ್.ಎನ್.ಜಯಗೋಪಾಲ್ ಸಾಹಿತ್ಯ ನೀಡಿರುವ ಚಿತ್ರಗೀತೆಗಳ ‘ಕಂಗಳು ವಂದನೆ ಹೇಳಿದೆ’ ಪೂರ್ವಿ ಗಾನ ಯಾನದ ಗಾಯನ ಕಾರ್ಯಕ್ರಮವನ್ನು ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ.ಆರ್.ದೇವರಾಜ ಶೆಟ್ಟಿ ಉದ್ಘಾಟಿಸಿದರು.-------------------------