ಕಲೆ ಮತ್ತು ಸಂಗೀತ ನಮ್ಮ ನಾಡಿನ ಸಾಂಸ್ಕೃತಿಕ ಪರಂಪರೆಯ ಪ್ರತೀಕಗಳಾಗಿವೆ. ಇಂತಹ ವೇದಿಕೆಗಳು ಉದಯೋನ್ಮುಖ ಗಾಯಕ-ಗಾಯಕಿಯರ ಪ್ರತಿಭೆಯನ್ನು ಗುರುತಿಸಿ, ಅವರ ಕಲಾ ಪಯಣಕ್ಕೆ ಪ್ರೋತ್ಸಾಹ ನೀಡುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ಮುಜರಾಯಿ, ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ, ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಬಸವಂತಪ್ಪ ಹೇಳಿದ್ದಾರೆ.
- ‘ಐಕಾನ್ ವಾಯ್ಸ್ ಆಫ್ ದಾವಣಗೆರೆ’ ರಾಜ್ಯಮಟ್ಟದ ಗಾಯನ ಸ್ಪರ್ಧೆ ಸಮಾರೋಪ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ಕಲೆ ಮತ್ತು ಸಂಗೀತ ನಮ್ಮ ನಾಡಿನ ಸಾಂಸ್ಕೃತಿಕ ಪರಂಪರೆಯ ಪ್ರತೀಕಗಳಾಗಿವೆ. ಇಂತಹ ವೇದಿಕೆಗಳು ಉದಯೋನ್ಮುಖ ಗಾಯಕ-ಗಾಯಕಿಯರ ಪ್ರತಿಭೆಯನ್ನು ಗುರುತಿಸಿ, ಅವರ ಕಲಾ ಪಯಣಕ್ಕೆ ಪ್ರೋತ್ಸಾಹ ನೀಡುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ಮುಜರಾಯಿ, ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ, ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಬಸವಂತಪ್ಪ ಹೇಳಿದರು.ನಗರದ ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ಎಸ್.ಎಸ್. ಮ್ಯೂಸಿಕ್ ಸ್ಟುಡಿಯೋ ವತಿಯಿಂದ ಆಯೋಜಿಸಿದ್ದ ‘ಐಕಾನ್ ವಾಯ್ಸ್ ಆಫ್ ದಾವಣಗೆರೆ’ ರಾಜ್ಯಮಟ್ಟದ ಗಾಯನ ಸ್ಪರ್ಧೆ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಸಂಗೀತವು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಪೂರಕವಾಗಿರುವ ನೈಸರ್ಗಿಕ ಸಂಜೀವಿನಿಯಾಗಿದೆ. ಇಂದಿನ ಒತ್ತಡದ ಜೀವನಶೈಲಿಯಲ್ಲಿ ಸಂಗೀತ ಕೇವಲ ಮನರಂಜನೆಯ ಸಾಧನವಲ್ಲ; ಮನಸ್ಸಿಗೆ ನೆಮ್ಮದಿ ನೀಡಿ, ಜೀವನದಲ್ಲಿ ಉತ್ಸಾಹ ತುಂಬುವ ಶಕ್ತಿಯಾಗಿದೆ. ಹಾಡುವುದು ಹಾಗೂ ಸಂಗೀತ ಆಲಿಸುವುದರಿಂದ ದೈನಂದಿನ ಒತ್ತಡದಿಂದ ಹೊರಬರಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.ಮನುಷ್ಯನ ಬದುಕಿನಲ್ಲಿ ಒತ್ತಡ, ಆತಂಕ ಸೇರಿದಂತೆ ಹಲವು ಸಮಸ್ಯೆಗಳು ಎದುರಾಗುವುದು ಸಹಜ. ಆದರೆ ಅವುಗಳನ್ನು ನಿಭಾಯಿಸುವ ಮಾರ್ಗಗಳನ್ನು ಕಂಡುಕೊಳ್ಳುವುದು ಮುಖ್ಯ. ಈ ನಿಟ್ಟಿನಲ್ಲಿ ಸಂಗೀತ ಮನಸ್ಸನ್ನು ಹಗುರಗೊಳಿಸಿ, ಸಕಾರಾತ್ಮಕ ಭಾವನೆಗಳನ್ನು ಬೆಳೆಸಲು ಸಹಕಾರಿಯಾಗಿದೆ. ಸಂಗೀತದೊಂದಿಗೆ ಬೆರೆಯುವುದರಿಂದ ಜೀವನದ ಬಗ್ಗೆ ಹೊಸ ಉತ್ಸಾಹ ಮತ್ತು ಆತ್ಮವಿಶ್ವಾಸ ಮೂಡುತ್ತದೆ ಎಂದು ತಿಳಿಸಿದರು.
ಇಂದಿನ ವೇಗದ ಬದುಕಿನಲ್ಲಿ ಮಾನಸಿಕ ಒತ್ತಡ, ಆತಂಕ ಹಾಗೂ ಖಿನ್ನತೆಯಂತಹ ಸಮಸ್ಯೆಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಸಂಗೀತ ಚಿಕಿತ್ಸೆಯ ಮಹತ್ವವೂ ಹೆಚ್ಚಿದೆ. ವೈದ್ಯಕೀಯ ಮತ್ತು ಮಾನಸಿಕ ಆರೋಗ್ಯ ಕ್ಷೇತ್ರಗಳಲ್ಲಿ ಸಂಗೀತ ಚಿಕಿತ್ಸೆಯನ್ನು ಪೂರಕ ವಿಧಾನವಾಗಿ ಬಳಸಲಾಗುತ್ತಿದೆ. ಸೂಕ್ತ ಸಂಗೀತವು ಒತ್ತಡವನ್ನು ತಗ್ಗಿಸಲು, ಮನಸ್ಸನ್ನು ಶಾಂತಗೊಳಿಸಲು ಹಾಗೂ ಜೀವನದ ಗುಣಮಟ್ಟ ಸುಧಾರಿಸಲು ನೆರವಾಗುತ್ತದೆ ಎಂದರು.ಗಾಯನ ಸ್ಪರ್ಧೆಗಳು ಕಲಾವಿದರಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು ಉತ್ತಮ ವೇದಿಕೆಯಾಗಿವೆ. ಸ್ಪರ್ಧೆಯಲ್ಲಿ ಭಾಗವಹಿಸುವುದಷ್ಟೇ ಅಲ್ಲದೆ, ನಿರಂತರ ಅಭ್ಯಾಸ, ಪರಿಶ್ರಮ ಮತ್ತು ಕಲಿಕೆಯ ಮೂಲಕ ತಮ್ಮ ಪ್ರತಿಭೆಯನ್ನು ಮತ್ತಷ್ಟು ಬೆಳೆಸಿಕೊಳ್ಳಬೇಕು. ಇಂತಹ ಕಾರ್ಯಕ್ರಮಗಳು ಸ್ಥಳೀಯ ಕಲಾವಿದರಿಗೆ ರಾಜ್ಯಮಟ್ಟದಲ್ಲಿ ಗುರುತಿಸಿಕೊಳ್ಳಲು ಅವಕಾಶ ಕಲ್ಪಿಸುತ್ತವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ, ವಾಸುದೇವ ರಾಯ್ಕರ್, ಮೆಹಬೂಬ್ ಅಲಿ, ವಿದ್ವಾನ್ ಪಂಡಿತ ತಿಪ್ಪೇಸ್ವಾಮಿ, ತೀರ್ಪುಗಾರರಾದ ಬಸವರಾಜ್ ಭಂಡಾರಿ, ಸವಿತಾ ಕೂಲಂಬಿ, ಮಹೇಶ್ ಸೋನು ಸೇರಿದಂತೆ ಇತರರು ಉಪಸ್ಥಿತರಿದ್ದರು.- - -
-18ಕೆಡಿವಿಜಿ40:‘ಐಕಾನ್ ವಾಯ್ಸ್ ಆಫ್ ದಾವಣಗೆರೆ’ ರಾಜ್ಯಮಟ್ಟದ ಗಾಯನ ಸ್ಪರ್ಧೆ ಸಮಾರೋಪ ಸಮಾರಂಭವನ್ನು ಸಚಿವ ಕೆ.ಎಸ್.ಬಸವಂತಪ್ಪ ಉದ್ಘಾಟಿಸಿ ಮಾತನಾಡಿದರು.