ಸಾರಾಂಶ
ಮುದ್ದೇಬಿಹಾಳ ಪಟ್ಟಣದ ಬನಶಂಕರಿ ದೇವಿ ದೇವಸ್ಥಾನದ ಜಾತ್ರಾ ಮಹೋತ್ಸವದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿಜಯಪುರ ಸಂಯುಕ್ತಾಶ್ರಯದಲ್ಲಿ ಸೋಮವಾರ ಗಾಯಕಿ ಚೈತ್ರಾ ಡಂಬಳವರ ವೀಣಾವಾಣಿ ಸಂಗೀತ ಪಾಠಶಾಲೆಯ ವತಿಯಿಂದ ಹಮ್ಮಿಕೊಂಡಿದ್ದ ಸುಗಮ ಹಾಗೂ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವನ್ನು ತಾಲೂಕು ಬೀಜ ಮತ್ತು ಗೊಬ್ಬರ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಶಿವಶಂಕರಗೌಡ ಹಿರೇಗೌಡರ ಉದ್ಘಾಟಿಸಿ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಸಂಗೀತ ಎಂಬುವುದು ಒಂದು ಯೋಗವಿದ್ದಂತೆ. ಇದರಿಂದ ಮನುಷ್ಯನ ಮಾನಸಿಕ ಒತ್ತಡ ಹಾಗೂ ಹಲವು ರೋಗ ನಿಯಂತ್ರಿಸುವ ಶಕ್ತಿ ಅಡಗಿದೆ ಎಂದು ತಾಲೂಕು ಬೀಜ ಮತ್ತು ಗೊಬ್ಬರ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಶಿವಶಂಕರಗೌಡ ಹಿರೇಗೌಡರ ಹೇಳಿದರು.ಪಟ್ಟಣದ ಬನಶಂಕರಿ ದೇವಿ ದೇವಸ್ಥಾನದ ಜಾತ್ರಾ ಮಹೋತ್ಸವದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿಜಯಪುರ ಸಂಯುಕ್ತಾಶ್ರಯದಲ್ಲಿ ಸೋಮವಾರ ಗಾಯಕಿ ಚೈತ್ರಾ ಡಂಬಳವರ ವೀಣಾವಾಣಿ ಸಂಗೀತ ಪಾಠಶಾಲೆಯ ವತಿಯಿಂದ ಹಮ್ಮಿಕೊಂಡಿದ್ದ ಸುಗಮ ಹಾಗೂ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅದರಲ್ಲೂ ಹಿಂದುಸ್ತಾನಿ ಶಾಸ್ತ್ರೀಯ, ಸುಗಮ, ಜಾನಪದ ಸಂಗೀತ ಆಲಿಸುವುದರಿಂದ ಮನಸ್ಸಿಗೆ ಮುದ ನೀಡುವುದಲ್ಲದೇ ನೆಮ್ಮದಿ ಹಾಗೂ ಆನಂದ ಸಿಗುತ್ತದೆ ಎಂದರು.
ಹಿಂದಿನ ಕಾಲದಲ್ಲಿ ಹಲವಾರು ಶರಣರು ಸಂತರ ಕಾಲದಲ್ಲಿ ಒಂದು ಕಡೆ ಸಂಗೀತ, ಇನ್ನೊಂದು ಕಡೆ ವಚನಗಳ ಅಮೃತಸಾರ ಹೆಚ್ಚು ಪ್ರಚಲಿತಗೊಳ್ಳುತ್ತಿದ್ದವು. ಆದರೆ, ಇಂದಿನ ತಂತ್ರಜ್ಞಾನ ಯುಗದಲ್ಲಿ ಅಂತರ್ಜಾಲದ ಅವಲಂಬನೆಯಿಂದ ವಿದ್ಯಾರ್ಥಿಗಳು, ಯುವಕರು ಹಿಂದೂಸ್ತಾನಿ ಸಂಗೀತ, ಭರತನಾಟ್ಯ, ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ಭಕ್ತಿ ಪ್ರಧಾನ ನಾಟಕ ಸೇರಿದಂತೆ ದೇಶಿಯ ಸಂಸ್ಕೃತಿ ಬಿಂಬಿಸುವ ಕಲೆಯ ಕಡೆ ಗಮನ ಹರಿಸದೇ ಪಾಶ್ಚಾತ್ಯ ಸಂಸ್ಕೃತಿಯ ಮನುಷ್ಯನ ಮದ ಏರುವ ಕರ್ಕಷ ಸಂಗೀತದ ಅನುಕರಣೆಯಿಂದಾಗಿ ನಿಜವಾದ ನಮ್ಮ ದೇಶಿಯ ಸಂಗೀತದ ಪ್ರೇಮಿಗಳ ಸಂಖ್ಯೆ ಕ್ರಮೇಣ ಕುಂಟಿತಗೊಳ್ಳುತ್ತಿರುವುದು ವಿಷಾದದ ಸಂಗತಿ ಎಂದು ಕಳವಳ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಗಾಯಕಿ ಚೈತ್ರಾ ಡಂಬಳವರ ವೀಣಾವಾಣಿ ಸಂಗೀತ ವಿದ್ಯಾಲಯ ಪ್ರಶಾಂತ ಭಜಂತ್ರಿ, ಕುಮಾರ ನಾಯನೇಗಲಿ, ದೀಪಸಿಂಗ್ ಹಜೇರಿ, ಸುಮಾ ಪತ್ತಾರ, ಪವನ ಹೆಬ್ಬಾಳ, ಲಕ್ಷ್ಮೀ ಇಲಕಲ್ಲ ಸೇರಿದಂತೆ ವಿವಿಧ ಸಂಗೀತ ಕಲಾವಿದರಿಗೆ ಬನಶಂಕರಿ ಜಾತ್ರಾ ಕಮಿಟಿಯವರು ಸನ್ಮಾನಿಸಿ, ಗೌರವಿಸಿದರು.
ಈ ವೇಳೆ ಕರ್ನಾಟಕ ಕೋ ಆಪ್ ಬ್ಯಾಂಕ್‌ನ ಅಧ್ಯಕ್ಷ ಸತೀಶ ಓಸ್ವಾಲ್, ಶಂಕರಪ್ಪ ಗುಡ್ಡದ, ಜಾತ್ರಾ ಕಮಿಟಿಯ ಮುಖ್ಯಸ್ಥ ಚನಬಸ್ಸು ಗುಡ್ಡದ, ಮಾಜಿ ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ)ಯವರ ಆಪ್ತ ಮುಖಂಡ ಅಪ್ಪು ಮೈಲೇಶ್ವರ, ಮುಖಂಡರಾದ ರಾಜು ಹೊನ್ನುಟಗಿ, ಅಮರೇಶ ಡಂಬಳ, ಸಿದ್ದಯ್ಯ ಕಲ್ಯಾಣಮಠ, ಬಸವರಾಜ ಬೇನಾಳ, ಶಾಯಿಲ್ ನಾಗಠಾಣ, ಈರಪ್ಪ ಬಡಿಗೇರ, ಗೌರಿಶಂಕರ ಪುರಾಣಿಕಮಠ, ಶಶಿಕಾಂತ ಮುತ್ತಗಿ, ಪುರಸಭೆ ಸದಸ್ಯ ಗುಂಡಪ್ಪ ತಟ್ಟಿ ಸೇರಿದಂತೆ ಹಲವರು ಇದ್ದರು.