ಸಂಗೀತ ಸುಲಭವಾಗಿ ದಕ್ಕುವ ವಿದ್ಯೆಯಲ್ಲ

| Published : Dec 02 2024, 01:17 AM IST

ಸಾರಾಂಶ

ನಿರಂತರ ಅಭ್ಯಾಸ ಮಾಡುವವರಿಗೆ ಮಾತ್ರ ಸರಸ್ವತಿ ಒಲಿಯುತ್ತಾಳೆ. ಸಂಗೀತ ಕಲಾವಿದರು ಯಾರ ಹಂಗಿನಲ್ಲೂ ಇರುವುದಿಲ್ಲ

ಲಕ್ಷ್ಮೇಶ್ವರ: ಸಂಗೀತ ಎಂಬ ವಿದ್ಯೆ ಸುಲಭವಾಗಿ ಸಿಕ್ಕುವುದಿಲ್ಲ, ಸಂಗೀತವು ಒಂದು ತಪಸ್ಸಿನಂತೆ ಅದರಲ್ಲಿ ತಲ್ಲೀನರಾಗದ ಹೊರತು ಸಿಕ್ಕುವುದಿಲ್ಲ ಎಂದು ಕುಂದಗೋಳದ ದಿ. ಗುರುವರ್ಯ ಸವಾಯಿ ಗಂಧರ್ವ ಸ್ಮಾರಕ ವಿಶ್ವಸ್ಥ ಸಂಸ್ಥೆ ಅಧ್ಯಕ್ಷ ಅರವಿಂದ ಕಟಗಿ ಹೇಳಿದರು.

ಪಟ್ಟಣದ ಗುರು ಗಂಧರ್ವ ಸಂಗೀತ ಸಭಾ ವತಿಯಿಂದ ಶನಿವಾರ ಪಟ್ಟಣದ ಎಪಿಎಂಸಿ ವರ್ತಕರ ಸಭಾಭವನದಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಂಗೀತಕ್ಕೆ ದೊಡ್ಡ ಪರಂಪರೆಯಿದೆ. ಗುರು ಶಿಷ್ಯರ ಬಾಂಧವ್ಯ ಇಲ್ಲಿ ಕಾಣುತ್ತೇವೆ. ನಿರಂತರ ಅಭ್ಯಾಸ ಮಾಡುವವರಿಗೆ ಮಾತ್ರ ಸರಸ್ವತಿ ಒಲಿಯುತ್ತಾಳೆ. ಸಂಗೀತ ಕಲಾವಿದರು ಯಾರ ಹಂಗಿನಲ್ಲೂ ಇರುವುದಿಲ್ಲ ಎಂದರು.

ಸಾಹಿತಿ ಕೆ.ಎಸ್. ಕೊಡ್ಲಿವಾಡ ಮಾತನಾಡಿ, ಹಿಂದೂಸ್ತಾನಿ ಸಂಗೀತಕ್ಕೆ ಮಹತ್ತರವಾದ ಇತಿಹಾಸ ಮತ್ತು ಪರಂಪರೆ ಇದೆ. ತಾನಸೇನ್ ಮತ್ತು ಏಕನಾಥ ಮಹಾರಾಜರು ಭಾರತದ ಪ್ರಸಿದ್ಧ ಸಂಗೀತ ಕಲಾವಿದರು. ಅದರಂತೆ ದಾಸರು, ಶರಣರು ಸಂಗೀತ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಮೊಬೈಲ್ ಹಾವಳಿಯಿಂದ ಮಕ್ಕಳಲ್ಲಿ ಸಂಗೀತದ ಬಗ್ಗೆ ಒಲವು ಕಡಿಮೆ ಆಗುತ್ತಿದ್ದು, ಮತ್ತೆ ಅವರನ್ನು ಸಂಗೀತದತ್ತ ಕರೆ ತರಲು ಪ್ರಯತ್ನಗಳು ಹೆಚ್ಚಾಗಿ ನಡೆಯಬೇಕಾಗಿವೆ ಎಂದು ಹೇಳಿದರು.

ತಾಲೂಕು ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಗರಾಜ ಹಣಗಿ ಮಾತನಾಡಿ, ಲಕ್ಷ್ಮೇಶ್ವರ ಸಂಗೀತ ಕ್ಷೇತ್ರಕ್ಕೆ ತನ್ನದೇ ಆದ ಕಾಣಿಕೆ ನೀಡಿದೆ. ಖ್ಯಾತ ಹರ‍್ಮೋನಿಯಂ ವಾದಕರಾಗಿದ್ದ ವಸಂತ ಕನಕಾಪುರ ಇಲ್ಲಿನವರು. ಅದರಂತೆ ನೂರಾರು ಶಿಷ್ಯರಿಗೆ ಸಂಗೀತ ಕಲಿಸಿದ ಕೀರ್ತಿ ಲಕ್ಷ್ಮೇಶ್ವರದ ಗುರುರಾಜ ಪಾಟೀಲರಿಗೆ ಸಲ್ಲುತ್ತದೆ. ಸಂಗೀತ ಕ್ಷೇತ್ರ ಉಳಿಯಬೇಕಾದರೆ ಕಲಾವಿದರಿಗೆ ಹೆಚ್ಚಿನ ಪ್ರೋತ್ಸಾಹ ಅಗತ್ಯ. ಈ ನಿಟ್ಟಿನಲ್ಲಿ ಗುರು ಗಂಧರ್ವ ಸಂಗೀತ ಸಭಾ ಪ್ರತಿವರ್ಷ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಕಲಾವಿದರಿಗೆ ಪ್ರೋತ್ಸಾಹ ನೀಡುತ್ತಿದೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಗುರು ಗಂಧರ್ವ ಸಂಗೀತಸಭಾದ ಅಧ್ಯಕ್ಷ ಪರಶುರಾಮ ಭಜಂತ್ರಿ ಮಾತನಾಡಿ, ನನ್ನ ಸಂಗೀತ ಗುರುಗಳಾದ ಅಶೋಕ ನಾಡಿಗೇರ ಮಾರ್ಗದರ್ಶನದಲ್ಲಿ ಪ್ರತಿವರ್ಷ ಸಂಗೀತ ಕಾರ್ಯಕ್ರಮ ಏರ್ಪಡಿಸುತ್ತಿದ್ದೇವೆ. ನಾಡಿನಲ್ಲಿನ ಸಂಗೀತ ಕಲಾವಿದರನ್ನು ಕರೆಸಿ ಅವರಿಗೆ ವೇದಿಕೆ ಒದಗಿಸಿ ಕೊಡುವ ಕೆಲಸ ನಿರಾಂಕತವಾಗಿ ಸಾಗಿದೆ. ಇದಕ್ಕೆ ಎಲ್ಲರ ಪ್ರೋತ್ಸಾಹ, ಸಹಕಾರ ಇದೆ ಎಂದರು.

ಈ ಸಂದರ್ಭದಲ್ಲಿ ಖ್ಯಾತ ಹಿಂದೂಸ್ತಾನಿ ಗಾಯಕ ಅಶೋಕ ನಾಡಿಗೇರ, ರವಿ ಕಾತೂರ, ನಾಗನಗೌಡ ಚಿಕ್ಕನಗೌಡ್ರ, ಸಂಗೀತಗಾರ ಚೌಧರಿ, ಶಿಕ್ಷಕ ಹಾಲಗುಂಡಿ ಸೇರಿದಂತೆ ಮತ್ತಿತರರು ಇದ್ದರು. ನಂತರ ಶಿರಸಿಯ ರೇಖಾ ದಿನೇಶ, ಪರಶುರಾಮ ಭಜಂತ್ರಿ, ಡಾ. ಅರ್ಜುನ ವಠಾರದ ಗಾಯನ ಪ್ರಸ್ತುತ ಪಡಿಸಿದರು.

ಕೃಷ್ಣಕುಮಾರ ಕುಲಕರ್ಣಿ, ಅನಂತ ಪಾವಣಸ್ಕರ್, ಡಾ. ಶ್ರೀಹರಿ ದಿಗ್ಗಾವಿ, ಅಕ್ಷಯಕುಮಾರ ಭಜಂತ್ರಿ ತಬಲಾ ಮತ್ತು ಸಾರಂಗ ಕುಲಕರ್ಣಿ, ಶಿವಸ್ವಾಮಿ ಹಿರೇಮಠ ಹರ‍್ಮೋನಿಯಂ ಸಾಥ್ ನೀಡಿದರು.