ಭಾರತೀಯ ಕಲೆಗಳನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಕಾರ್ಯ ಅತ್ಯಗತ್ಯ. ಪಠ್ಯ ಶಿಕ್ಷಣದ ಜತೆಗೆ ಕಲೆಗಳನ್ನು ಅಳವಡಿಸಿಕೊಂಡಾಗ ಮಾತ್ರ ಲಲಿತ ಕಲೆಗಳ ಬೆಳವಣಿಗೆಯಿಂದ ನಮ್ಮ ಸಂಸ್ಕೃತಿ ಶ್ರೀಮಂತವಾಗಬಲ್ಲದು.
ಧಾರವಾಡ:
ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ನೃತ್ಯ ಹಾಗೂ ಇತರ ಲಲಿತ ಕಲೆಗಳ ಉಳಿವು, ಬೆಳವಣಿಗೆಗಾಗಿ ಸಂಗೀತಾಸಕ್ತರ ಸಹಕಾರ ಅಗತ್ಯ. ಇಂತಹ ಕಾರ್ಯವನ್ನು ಇನ್ಫೋಸಿಸ್ ಫೌಂಡೇಶನ್, ಕುಮಾರೇಶ್ವರ ಕಲ್ಚರಲ್ ಸೊಸೈಟಿ ಮೂಲಕ ಮಾಡುತ್ತಿದೆ ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಪಂ. ಎಂ. ವೆಂಕಟೇಶಕುಮಾರ್ ಹೇಳಿದರು.ಹುಬ್ಬಳ್ಳಿಯ ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಇಲ್ಲಿಯ ಕುಮಾರೇಶ್ವರ ಕಲ್ಚರಲ್ ಸೊಸೈಟಿ ಏರ್ಪಡಿಸಿದ್ದ ಸಂಗೀತೋತ್ಸವ ಉದ್ಘಾಟಿಸಿದ ಅವರು, ಭಾರತೀಯ ಕಲೆಗಳನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಕಾರ್ಯ ಅತ್ಯಗತ್ಯ. ಪಠ್ಯ ಶಿಕ್ಷಣದ ಜತೆಗೆ ಕಲೆಗಳನ್ನು ಅಳವಡಿಸಿಕೊಂಡಾಗ ಮಾತ್ರ ಲಲಿತ ಕಲೆಗಳ ಬೆಳವಣಿಗೆಯಿಂದ ನಮ್ಮ ಸಂಸ್ಕೃತಿ ಶ್ರೀಮಂತವಾಗಬಲ್ಲದು ಎಂದರು.
ಖ್ಯಾತ ಹಿಂದೂಸ್ತಾನಿ ಗಾಯಕ ಪಂ. ಬಾಲಚಂದ್ರ ನಾಕೋಡ ಮಾತನಾಡಿ, ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಶಾಸ್ತ್ರೀಯ ಸಂಗೀತ ಆಯೋಜಿಸಿರುವುದು ಮತ್ತು ದೊಡ್ಡ ಪ್ರಮಾಣದ ಶಾಸ್ತ್ರೀಯ ಸಂಗೀತ ಕೇಳುಗರಿರುವುದು ಹೆಮ್ಮೆಯ ಸಂಗತಿ. ಶಾಸ್ತ್ರೀಯ ಸಂಗೀತವು ಮನಸ್ಸಿಗೆ ನೆಮ್ಮದಿ ನೀಡುತ್ತದೆ. ಇಂತಹ ಸಂಗೀತ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಲು ಇನ್ಫೋಸಿಸ್ ಅಂತಹ ಸಂಸ್ಥೆಯ ಸಹಕಾರ ಅಗತ್ಯ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಕುಮಾರೇಶ್ವರ ಕಲ್ಚರಲ್ ಸೊಸೈಟಿ ಅಧ್ಯಕ್ಷ ಮಲ್ಲಿಕಾರ್ಜುನ ಚಿಕ್ಕಮಠ, ಸಂಗೀತದಲ್ಲಿ ಸಾಹಿತ್ಯ, ಮನರಂಜನೆ ಹಾಗೂ ಸಂಸ್ಕೃತಿ ಇದೆ. ಸಾಮಾಜಿಕ ವ್ಯತ್ಯಾಸ ಬೆಸೆಯುವ ಕೊಂಡಿ ಇದೆ. ಒತ್ತಡ ಕಡಿಮೆ ಮಾಡುವ ಶಕ್ತಿಯೂ ಸಂಗೀತಕ್ಕಿದೆ. ಯುವ ಪ್ರತಿಭಾನ್ವಿತ ಕಲಾವಿದರಿಗೆ ವೇದಿಕೆ ಕಲ್ಪಿಸುವುದು ನಮ್ಮ ಉದ್ದೇಶ. ಈ ಕಾರ್ಯಕ್ಕೆ ಇನ್ಫೋಸಿಸ್ ಸಂಸ್ಥೆಯ ಜೊತೆಗೂಡಿದೆ ಎಂದರು. ಇನ್ಫೋಸಿಸ್ ಹುಬ್ಬಳ್ಳಿ ಕ್ಯಾಂಪಸ್ ಮುಖ್ಯಸ್ಥ ಅಲ್ಲಾಭಕ್ಷ ಅಸಾದುಲ್ಲಾ, ಗಣಪತಿ ಸಿ.ಪಿ., ಎಚ್.ಆರ್. ಅಮರನಾಥ ಬಿಸ್ವಾಸ್, ರಾಘವೇಂದ್ರ ನಾಕೋಡ ಹಾಗೂ ಸಂಯೋಜಕ ಪ್ರಕಾಶ ಬಾಳಿಕಾಯಿ ಇದ್ದರು. ವಿಶೇಷಚೇತನ ಕಲಾವಿದ ಪ್ರೇರಣಾ ಮತ್ತು ರೇಣುಶ್ರೀ ಕೊಡ್ಲಿ ಭಾವಗೀತೆ ಪ್ರಸ್ತುತ ಪಡಿಸಿದರು. ಪದ್ಮಶ್ರೀ ಪಂ. ಎಂ. ವೆಂಕಟೇಶಕುಮಾರ ಗಾಯನದಲ್ಲಿ ಪ್ರಸ್ತುತಪಡಿಸಿದ ರಾಗ ಭೂಪ್ ಮತ್ತು ದಾಸವಾಣಿ ಹಾಗೂ ವಚನ ಗಾಯನವು ಪ್ರೇಕ್ಷಕರ ಮನ ತಣಿಸಿದವು. ತಬಲಾದಲ್ಲಿ ಶ್ರೀಧರ ಮಾಂಡ್ರೆ, ಡಾ. ನಾಗಲಿಂಗ ಮುರಗಿ, ರಾಘವೇಂದ್ರ ನಾಕೋಡ ಹಾಗೂ ಹಾರ್ಮೊನಿಯಂದಲ್ಲಿ ಬಸವರಾಜ ಹಿರೇಮಠ ಸಾಥ್ ಸಂಗತ ನೀಡಿದರು.