ಸಂಗೀತದಿಂದ ದುಃಖ, ನಿರಾಸೆ ದೂರ: ಮಹಾಲಿಂಗ ಸ್ವಾಮೀಜಿ

| Published : Feb 27 2024, 01:33 AM IST

ಸಾರಾಂಶ

ಕಲೆಗಳು ನಮ್ಮ ಜೀವನದಲ್ಲಿ ನೆಮ್ಮದಿ, ಶಾಂತಿ ಉಂಟು ಮಾಡುತ್ತವೆ. ಕಲೆಯ ಸಾಧನೆ ಮಾಡಿದರೆ ಅದನ್ನು ವ್ಯಕ್ತಿ ಮತ್ತು ಸಮಾಜಕ್ಕೆ ಬೆಳೆಸುತ್ತದೆ

ಭಾಲ್ಕಿ: ಸಂಗೀತದಲ್ಲಿ ಅದ್ಭುತ ಶಕ್ತಿ ಇದೆ. ಸಂಗೀತದಿಂದ ಮನುಷ್ಯನ ದುಃಖ, ನಿರಾಸೆ ದೂರವಾಗುತ್ತದೆ. ಮನುಷ್ಯನಿಗೆ ಕಲೆಯಲ್ಲಿ ಆಸಕ್ತಿ ಇರಬೇಕು ಎಂದು ಭಾಲ್ಕಿ ಹಿರೇಮಠ ಸಂಸ್ಥಾನದ ಮಹಾಲಿಂಗ ಸ್ವಾಮೀಜಿ ನುಡಿದರು.

ಪಟ್ಟಣದ ಚನ್ನಬಸವಾಶ್ರಮದಲ್ಲಿ 296 ಮಾಸಿಕ ಶರಣ ಸಂಗಮ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಕತ್ವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ಕಲೆಗಳು ನಮ್ಮ ಜೀವನದಲ್ಲಿ ನೆಮ್ಮದಿ, ಶಾಂತಿ ಉಂಟು ಮಾಡುತ್ತವೆ. ಕಲೆಯ ಸಾಧನೆ ಮಾಡಿದರೆ ಅದನ್ನು ವ್ಯಕ್ತಿ ಮತ್ತು ಸಮಾಜಕ್ಕೆ ಬೆಳೆಸುತ್ತದೆ. ಅದಕ್ಕಾಗಿಯೇ ನಮ್ಮ ನಾಡಿನಲ್ಲಿ ಸಂಗೀತ ಕಲೆಯ ಭವ್ಯ ಪರಂಪರೆ ಇದೆ.

ಅದಕ್ಕಾಗಿ ನೂರಾರು ಸಾಧಕರು ತಮ್ಮ ಬದುಕನ್ನೇ ಮುಡುಪಾಗಿಟ್ಟಿದ್ದಾರೆ. ಅಂತಹವರ ಪ್ರೇರಣೆಯಿಂದ ನಾವು ಕಲೆ ಕರಗತ ಮಾಡಿಕೊಳ್ಳಬೇಕು ಮತ್ತು ಸಮಾಧಾನದ ಜೀವನ ನಡೆಸಬೇಕು ಎಂದು ಪೂಜ್ಯರು ಆಶೀರ್ವಚನ ನೀಡಿದರು.

ರೇಖಾಬಾಯಿ ರಾಜಶೇಖರ ಅಷ್ಟೂರೆ ಅಧ್ಯಕ್ಷತೆ ವಹಿಸಿದ್ದರು. ಚಂದ್ರಕಲಾ ಬಿರಾದಾರ, ಪ್ರೇಮಲಾ ತೊಂಡಾರೆ ಇವರಿಂದ ವಚನ ಸಂಗೀತ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ವಿಶ್ವನಾಥಪ್ಪ ಬಿರಾದಾರರಿಂದ ಅನುಭಾವ ಜರುಗಿತು. ವೀರಣ್ಣ ಕುಂಬಾರ ಪ್ರಾಸ್ತಾವಿಕ ಮಾತನಾಡಿದರು. ವೀರಣ್ಣ ಜೋಳದಾಬಕೆ, ಮಂಗಲಾ ಬಡಿಗೇರ, ಆಶಾ ರಾಠೋಡ, ನಿರ್ಮಲಾ ಗಣಪತರಾವ ಜ್ಯಾಂತೆ ದೀಪಕ ಥಮಕೆ ಉಪಸ್ಥಿತರಿದ್ದರು.