ಸಾರಾಂಶ
ಯಲ್ಲಾಪುರ: ಕಾಂಗ್ರೆಸ್ ಪಕ್ಷ ಕಳೆದ ೫೦ ವರ್ಷಗಳಿಂದ ಸುಳ್ಳು ಹೇಳಿಕೊಂಡು ದೀನ-ದಲಿತರ ಉದ್ಧಾರದ ಹೆಸರು ಹೇಳುತ್ತಾ ದೇಶವನ್ನು ಛಿದ್ರ ಮಾಡಿದ್ದಲ್ಲದೇ ಸಂವಿಧಾನದ ಹೆಸರು ಹೇಳುತ್ತಾ ಸಂವಿಧಾನ ವಿರೋಧಿ ಕಾರ್ಯದ ಮೂಲಕ ಅಂದಿನಿಂದ ಇಂದಿನವರೆಗೂ ಮುಸ್ಲೀಂ ತುಷ್ಟೀಕರಣದ ರಾಜಕಾರಣ ಮಾಡುತ್ತಾ ಪರಾಕಾಷ್ಠೆ ತಲುಪಿದೆ. ಅವರ ನೀತಿಯನ್ನು ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ ಎಂದು ವಿಪ ಸದಸ್ಯ ಶಾಂತಾರಾಮ ಸಿದ್ದಿ ಹೇಳಿದರು.
ಅವರು ಮಂಗಳವಾರ ಪಟ್ಟಣದ ಅಂಬೇಡ್ಕರ್ ವೃತ್ತದ ಬಳಿ ಬಿಜೆಪಿ ಹಮ್ಮಿಕೊಂಡ ಪ್ರತಿಭಟನಾ ಕಾರ್ಯಕ್ರಮದಲ್ಲಿ ಡಿ.ಕೆ.ಶಿವಕುಮಾರ ಪ್ರತಿಕೃತಿ ದಹಿಸಿ ಮಾತನಾಡಿದರು.ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಮುಸ್ಲಿಮರಿಗೆ ಶೇ. ೪ರಷ್ಟು ಉದ್ಯೋಗ ಮೀಸಲಾತಿ ನೀಡುವುದನ್ನು ಸಮರ್ಥಿಸುತ್ತಾ ಅವರಿಗಾಗಿ ಸಂವಿಧಾನ ಬದಲಿಸುತ್ತೇವೆ ಎಂದು ಹೇಳಿರುವುದು ದೇಶದ ಬಹುಸಂಖ್ಯಾತ ಹಿಂದುಗಳಿಗೆ ಮಾಡಿದ ಅನ್ಯಾಯವಾಗಿದೆ. ಸದಾ ಅಂಬೇಡ್ಕರ್ ಮತ್ತು ಸಂವಿಧಾನದ ಹೆಸರು ಹೇಳಿಕೊಂಡು ದೇಶವನ್ನಾಳಿದ ಇವರು ಇಂದು ಪುನಃ ತಮ್ಮ ತುಷ್ಟೀಕರಣ ನೀತಿ ರುಜುವಾತು ಪಡಿಸುತ್ತಿದ್ದಾರೆ ಎಂದರು.
ರಾಜ್ಯ ಬಿಜೆಪಿ ವಕ್ತಾರ ಹರಿಪ್ರಕಾಶ ಕೋಣೆಮನೆ ಮಾತನಾಡಿ, ಮಾತೆತ್ತಿದರೆ ಸಂವಿಧಾನದ ಪುಸ್ತಕ ಹಿಡಿದುಕೊಂಡು ದೇಶದ್ರೋಹಿಗಳನ್ನು ಬೆಂಬಲಿಸುತ್ತಾ ಬಂದ ರಾಹುಲ್ ಗಾಂಧಿಯ ಜತೆ ಗೌಪ್ಯ ಸಭೆ ನಡೆಸಿ ರಾಜ್ಯದಲ್ಲಿ ಮುಸ್ಲೀಮರಿಗೆ ನಾವು ಶೇ.೪ ರಷ್ಟು ಮೀಸಲಾತಿ ನೀಡಿದ್ದೇವೆ ಎಂದು ವರದಿ ನೀಡುವ ಡಿ.ಕೆ. ಶಿವಕುಮಾರ, ಹೈಕಮಾಂಡನ್ನು ಮೆಚ್ಚಿಸಲು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ. ಇದನ್ನು ತೀವ್ರವಾಗಿ ನಮ್ಮ ಪಕ್ಷ ಖಂಡಿಸುತ್ತದೆ. ಬಹುಸಂಖ್ಯಾತ ಹಿಂದೂಗಳಿಗೆ ಮೋಸ ಮಾಡಿ, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ವಿಎಫ್ಐ, ಎಸ್ ಡಿಪಿ ಸಂಘಟನೆಗಳನ್ನು ಬೆಂಬಲಿಸುತ್ತಿರುವುದಲ್ಲದೇ ಪಾಕಿಸ್ತಾನದ ಪರ ಘೋಷಣೆ ಮಾಡಿದವರನ್ನು ಬೆಂಬಲಿಸುತ್ತಾ ಬಂದಿದೆ. ನೆಹರು, ಇಂದಿರಾ, ರಾಜೀವ, ರಾಹುಲ್ ಸದಾ ದೇಶವನ್ನು ಛಿದ್ರ ಮಾಡುವ ವ್ಯವಸ್ಥಿತ ಪಿತೂರಿ ನಡೆಸುತ್ತಲೇ ಬಂದಿದ್ದಾರೆ. ಇಂದು ಕೆಲವೇ ಕೆಲವು ರಾಜ್ಯಗಳಲ್ಲಿ ಮಾತ್ರ ಕಾಂಗ್ರೆಸ್ ಅಧಿಕಾರದಲ್ಲಿದೆ. ಮುಂದಿನ ದಿನಗಳಲ್ಲಿ ಈ ತುಷ್ಟೀಕರಣ ನೀತಿಯಿಂದ ಕಾಂಗ್ರೆಸ್ ಪಕ್ಷಕ್ಕೆ ಮರಣ ಶಾಸನ ಒದಗಲಿದೆ ಎಂದರು.ಮಂಡಲಾಧ್ಯಕ್ಷ ಪ್ರಸಾದ ಹೆಗಡೆ ಮಾತನಾಡಿ, ಕಾಂಗ್ರೆಸ್ ರಾಜ್ಯದಲ್ಲಿ ಎಲ್ಲ ನಾಗರಿಕರನ್ನು ಸಮಾನವಾಗಿ ಕಾಣದೇ ಕೇವಲ ಮುಸ್ಲಿಂ ಸಮುದಾಯದ ಶಾಲೆ, ಕಾಲೇಜು, ವಿದ್ಯಾರ್ಥಿನಿಲಯ, ಮದರಸಾ ಸೇರಿದಂತೆ ವಿವಿಧ ಶಿಕ್ಷಣ ವ್ಯವಸ್ಥೆಗೆ ಸಾವಿರಾರು ಕೋಟಿ ಹಣ ನೀಡಿ, ರಾಜ್ಯದ ಅಭಿವೃದ್ಧಿಗೆ ಹಿನ್ನಡೆ ಮಾಡಿದೆ. ಇಂತಹ ತುಷ್ಟೀಕರಣ ನೀತಿಯನ್ನು ನಾವು ಖಂಡಿಸುತ್ತೇವೆ ಎಂದರು.
ಪಪಂ ಸದಸ್ಯೆ ಶ್ಯಾಮಿಲಿ ಪಾಟಣಕರ ಸಾಂದರ್ಭಿಕ ಮಾತನಾಡಿದರು. ಈ ಸಂದರ್ಭದಲ್ಲಿ ಪ್ರಮುಖರಾದ ಗೋಪಾಲಕೃಷ್ಣ ಗಾಂವ್ಕರ, ವೆಂಕಟರಮಣ ಬೆಳ್ಳಿ, ಶಿವಲಿಂಗಯ್ಯ ಅಲ್ಲಯ್ಯನವರಮಠ, ಗಣಪತಿ ಬೋಳಗುಡ್ಡೆ, ನಟರಾಜ ಗೌಡರ್, ಶ್ರೀನಿವಾಸ ಗಾಂವ್ಕರ, ರವಿ ದೇವಡಿಗ, ಸೋಮು ನಾಯ್ಕ ಸೇರಿದಂತೆ ಪ್ರಮುಖರಿದ್ದರು.