ಸಾರಾಂಶ
ಕನ್ನಡಪ್ರಭ ವಾರ್ತೆ ರಾಮನಗರ
ಮುಸ್ಲಿಂ ಸಮುದಾಯದ ಪೋಷಕರು ತಮ್ಮ ಮಕ್ಕಳಿಗಾಗಿ ಆಸ್ತಿ ಮಾಡಬೇಡಿ, ಬದಲಿಗೆ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಸಮಾಜದ ಆಸ್ತಿಯನ್ನಾಗಿ ಮಾಡುವಂತೆ ಶಾಸಕ ಇಕ್ಬಾಲ್ ಹುಸೇನ್ ಕಿವಿಮಾತು ಹೇಳಿದರು.ನಗರದ ಎನ್ ಯುಬಿ ಫಂಕ್ಷನ್ ಹಾಲ್ ನಲ್ಲಿ ಜಮಾತೆ ಉಲೇಮಾ ರಾಮನಗರ ಟ್ರಸ್ಟ್ ಆಯೋಜಿಸಿದ್ದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳಿಗೆ ನಡೆದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.
ಸ್ಪರ್ಧಾತ್ಮಕ ಯುಗವಾಗಿರುವುದರಿಂದ ಶಿಕ್ಷಣದ ಮಹತ್ವ ಅರಿಯಬೇಕು. ಮಕ್ಕಳಿಗೆ ಹಣ, ಅಂತಸ್ತನ್ನು ಮಾಡಿಡದೆ ಗುಣಮಟ್ಟದ ಶಿಕ್ಷಣ ನೀಡಬೇಕು. ಮನುಷ್ಯನ ನಡವಳಿಕೆ ಬದಲಾಗುವುದು ಹಾಗೂ ಸಮಾಜದಲ್ಲಿ ಆತನಿಗೆ ಸೂಕ್ತ ಸ್ಥಾನಮಾನ ಸಿಗುವುದು ಶಿಕ್ಷಣದಿಂದ ಮಾತ್ರ ಸಾಧ್ಯ. ಆದ್ದರಿಂದ ಪೋಷಕರು ತಮ್ಮ ಮಕ್ಕಳ ಶಿಕ್ಷಣದತ್ತ ಗಮನ ಹರಿಸಬೇಕು ಎಂದರು.ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿ ಜೀವನದ ತಿರುವಿನ ಹಂತವಾಗಿದೆ. ವಿದ್ಯಾರ್ಥಿಗಳು ಉದ್ಯೋಗಕ್ಕಾಗಿ ವ್ಯಾಸಂಗ ಮಾಡಬೇಡಿ. ಸಮಾಜದಲ್ಲಿ ಯಾವುದಾದರೂ ಉನ್ನತ ಸ್ಥಾನ ಅಲಂಕರಿಸಬೇಕಾದರೆ ಶಿಕ್ಷಣ ಮುಖ್ಯವಾಗಿದೆ. ಶಿಕ್ಷಣವಿದ್ದರೆ ಯಾವ ಹುದ್ದೆ ಬೇಕಾದರೆ ಅಲಂಕರಿಸಬಹುದು ಎಂದು ಹೇಳಿದರು.
ಕಷ್ಟವಿದ್ದರೂ ಬಿಡದೆ ಮಕ್ಕಳಿಗೆ ಶಿಕ್ಷಣ ಕೊಡಿಸಲು ಶ್ರಮಿಸುತ್ತಿರುವ ಪೋಷಕರ ಜೊತೆ ನಾನಿದ್ದು, ಅಗತ್ಯ ಸಹಕಾರ ನೀಡಲು ಸಿದ್ಧನಿದ್ದೇನೆ. ಈಗ ಕಡು ಬಡವರು ಹಾಗೂ ಪೋಷಕರಿಲ್ಲದ ಮಕ್ಕಳ ಶಾಲಾ ಕಾಲೇಜುಗಳ ಪ್ರವೇಶ ಶುಲ್ಕಕ್ಕಾಗಿ 45 ಲಕ್ಷ ನೀಡಿದ್ದೇನೆ. ಇನ್ನು ಮುಂದೆ ಶಿಕ್ಷಣ ಸಂಸ್ಥೆಗಳು ಅಂತಹ ಮಕ್ಕಳ ವಿವರ ಸಲ್ಲಿಸಿದರೆ ನಾನೇ ಅವರ ಪ್ರವೇಶ ಶುಲ್ಕ ಭರಿಸುವುದಾಗಿ ಇಕ್ಬಾಲ್ ಹುಸೇನ್ ಭರವಸೆ ನೀಡಿದರು.ಜಾಮಿಯಾ ಮಸೀದಿ ಇಮಾಮ್ ಡಾ. ಮಹಮ್ಮದ್ ಮಕ್ಸೂದ್ ಇಮ್ರಾನ್ ಮಾತನಾಡಿ, ಮುಸ್ಲಿಂ ಸಮುದಾಯ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿರುವುದು ಸಮಾಜ ಅಭಿವೃದ್ದಿಯತ್ತ ಸಾಗುತ್ತಿರುವುದರ ಸಂಕೇತ ಎಂದು ಹೇಳಿದರು.
ಮುಸ್ಲಿಂ ಸಮಾಜದ ಮಕ್ಕಳು ಶಿಕ್ಷಣದತ್ತ ವಾಲುತ್ತಿರುವುದು ಬದಲಾವಣೆ ಪರ್ವ, ಅದರಲ್ಲೂ ಹೆಣ್ಣು ಮಕ್ಕಳು ಸೇರಿದಂತೆ ಮೆಡಿಕಲ್ ಮತ್ತು ಇಂಜಿನಿಯರಿಂಗ್ ಓದುತ್ತಿರುವುದು ಸಂತೋಷದ ಸಂಗತಿ. ಪೀಳಿಗೆಯನ್ನು ಬೆಳೆಸಬೇಕು ಎಂದರೆ ಮಕ್ಕಳಿಗೆ ಶಿಕ್ಷಣ ನೀಡಬೇಕು. ಸಮಾಜದಲ್ಲಿ ಪ್ರಮುಖ ಸ್ಥಾನದಲ್ಲಿರುವವರು ಕೆಳ ಹಂತದಲ್ಲಿರುವವರನ್ನು ಮೇಲೆತ್ತಲು ಸಹಕಾರ ಮಾಡಬೇಕು. ಮುಖ್ಯವಾಗಿ ಶಿಕ್ಷಣವನ್ನು ಕೊಡಿಸಬೇಕು ಎಂದು ತಿಳಿಸಿದರು.ಮುಸ್ಲಿಂ ಸಮುದಾಯದ ಯುವಕ- ಯುವತಿಯರು ಐಎಎಸ್, ಐಪಿಎಸ್ ಆಗಿ ದೇಶ ಸೇವೆಯ ಜೊತೆಗೆ ಧರ್ಮದ ಸೇವೆಯನ್ನೂ ಮಾಡುವಂತಾಗಬೇಕು. ಇದಕ್ಕಾಗಿ ವಿದ್ಯಾರ್ಥಿಗಳು ಉನ್ನತ ಹುದ್ದೆಯನ್ನು ಗುರಿಯಾಗಿಟ್ಟುಕೊಂಡು ವ್ಯಾಸಂಗ ಮಾಡಬೇಕು. ಸತ್ಯದ ಮಾರ್ಗದಲ್ಲಿ ನಡೆದರೆ ಯಶಸ್ಸು ನಿಮ್ಮದಾಗುತ್ತದೆ ಎಂದು ಡಾ.
ಮಹಮ್ಮದ್ ಮಕ್ಸೂದ್ ಇಮ್ರಾನ್ ಹೇಳಿದರು.ಈ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳು ಹಾಗೂ ಕಂಪ್ಯೂಟರ್ ಕೋರ್ಸ್ ನಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಸೇರಿದಂತೆ 84 ಮಂದಿ ಮಕ್ಕಳಿಗೆ ನಗದು ಬಹುಮಾನ ನೀಡಿ ಸನ್ಮಾನಿಸಲಾಯಿತು. ಗೌಸಿಯಾ ಎಂಜಿನಿಯರಿಂಗ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಜೈದ್ ಅನ್ಸಾರಿ, ಡಾ.ಅಬ್ದುಲ್ ಖುದ್ದೂಸ್ , ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ ಸದಸ್ಯ ಪರ್ವೇಜ್ ಪಾಷ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಫೈರೋಜ್ ಪಾಷ, ಸದಸ್ಯರಾದ ನಿಜಾಮುದ್ದೀನ್ ಷರೀಫ್, ಮೋಯಿನ್, ದೌಲತ್ ಷರೀಫ್, ಮಾಜಿ ಸದಸ್ಯ ತಲ್ಹಾ ಪಾಷ, ಹೋಲಿ ಕ್ರೆಸೆಂಟ್ ಶಾಲೆ ಕಾರ್ಯದರ್ಶಿ ಅಲ್ತಾಫ್ ಅಹಮದ್, ಮುಖಂಡರಾದ ಷಫಿ ಮತ್ತಿತರರು ಉಪಸ್ಥಿತರಿದ್ದರು.
-----ರಾಮನಗರದಲ್ಲಿರುವ ಉರ್ದು ಶಾಲೆಗಳನ್ನು ಮುಚ್ಚಿ 15 ಕೋಟಿ ರುಪಾಯಿ ವೆಚ್ಚದಲ್ಲಿ ಕೆಪಿಎಸ್ಸಿ ಶಾಲೆ ತೆರೆಯುವ ಉದ್ದೇಶ ಹೊಂದಲಾಗಿದೆ. ಸುಮಾರು 100 ಕೋಟಿ ರುಪಾಯಿ ವೆಚ್ಚದಲ್ಲಿ ನಗರದ ರಸ್ತೆಗಳ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳಲಾಗಿದ್ದು, ಪ್ರತಿ ಮನೆಗೆ ಕುಡಿಯುವ ನೀರು ಪೂರೈಸಲಾಗುತ್ತಿದೆ. 156 ಕೋಟಿ ವೆಚ್ಚದಲ್ಲಿ ಅರ್ಕಾವತಿ ನದಿ ದಡದಲ್ಲಿ ವಾಕಿಂಗ್ ಪಾಥ್ ನಿರ್ಮಿಸಲಾಗುತ್ತಿದೆ. ಸುಮಾರು 200 ಎಕರೆ ಜಾಗ ಗುರುತಿಸಿ ವಸತಿ ರಹಿತರಿಗೆ
ನಿವೇಶನ ನೀಡಲು ಶ್ರಮಿಸಲಾಗುತ್ತಿದೆ.- ಇಕ್ಬಾಲ್ ಹುಸೇನ್ , ಶಾಸಕರು, ರಾಮನಗರ ಕ್ಷೇತ್ರ.