ಸಾರಾಂಶ
ಕನ್ನಡಪ್ರಭ ವಾರ್ತೆ, ತುಮಕೂರುಪವಿತ್ರ ರಂಜಾನ್ ಪ್ರಯುಕ್ತ ವಿವಿಧ ಮುಸ್ಲಿಂ ಮುಖಂಡರು ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಸಿದ್ಧಲಿಂಗ ಸ್ವಾಮೀಜಿಗಳ ಆಶೀರ್ವಾದ ಪಡೆದರು. ಸಿದ್ಧಗಂಗಾ ಮಠದ ಅನ್ನದಾಸೋಹ ಕೇಂದ್ರದಲ್ಲಿ ಮುಖಂಡರು ರಂಜಾನ್ ಪ್ರಯುಕ್ತ ಕೈಗೊಂಡಿದ್ದ ಉಪವಾಸವನ್ನು ಅಂತ್ಯಗೊಳಿಸಿದರು. ಅಲ್ಲದೆ ಶ್ರೀಮಠದಲ್ಲಿ ನಡೆದ ಭಾವೈಕ್ಯತಾ ಸತ್ಕಾರ ಕೂಟದಲ್ಲಿ ಭಾಗವಹಿಸಿ ಫಲಾಹಾರ ಸೇವಿಸಿದರು. ಗ್ಯಾರಂಟಿ ಅನುಷ್ಟಾನ ಪ್ರಾಧಿಕಾರದ ಉಪಾಧ್ಯಕ್ಷ ಮೆಹ್ರೂಜ್‌ಖಾನ್, ಕೆಪಿಸಿಸಿ ಮಾಜಿ ಕಾರ್ಯದರ್ಶಿ ಇಕ್ಬಾಲ್ ಅಹ್ಮದ್, ಕೆಪಿಸಿಸಿ ಉಪಾಧ್ಯಕ್ಷ ಮುರಳಿಧರ ಹಾಲಪ್ಪ ಹಾಗೂ ಇತರೆ ಮುಖಂಡರು ಸಿದ್ಧಲಿಂಗ ಸ್ವಾಮೀಜಿಗಳ ಆಶೀರ್ವಾದ ಪಡೆದು ಸಂಜೆ ಮಠದಲ್ಲಿ ನಡೆದ ವಿದ್ಯಾರ್ಥಿಗಳ ಸಾಮೂಹಿಕ ಪ್ರಾರ್ಥನಾ ಸಭೆಯಲ್ಲಿ ಭಾಗವಹಿಸಿದ್ದರು.ಈ ವೇಳೆ ಮಾತನಾಡಿದ ಸಿದ್ಧಲಿಂಗ ಸ್ವಾಮೀಜಿ, ಭಾರತ ಎಲ್ಲಾ ಧರ್ಮಗಳಿಗೂ ಆಶ್ರಯ ನೀಡಿದೆ.ಇನ್ಯಾವ ದೇಶಗಳಲ್ಲೂ ಭಾರತದಷ್ಟು ಧರ್ಮಗಳು ಇಲ್ಲ. ಎಲ್ಲಾ ಧರ್ಮಗಳ ಸಾರ ಒಂದೇ, ಅದು ಶಾಂತಿ ಮತ್ತು ಪ್ರೀತಿ. ಎಲ್ಲಾ ಧರ್ಮದವರು ಶಾಂತಿ, ಸಹಬಾಳ್ವೆಯಿಂದ ಬಾಳಬೇಕು ಎಂಬುದು ಎಲ್ಲಾ ಧರ್ಮಗಳ ಆಶಯ. ಭಾರತ ಭಾವೈಕ್ಯತೆಯ ದೇಶ ಎಂದು ಹೇಳಿದರು.ಮುಖಂಡ ಮೆಹ್ರೂಜ್‌ಖಾನ್ ಮಾತನಾಡಿ, ರಂಜಾನ್ ಸಂದರ್ಭದಲ್ಲಿ ಮುಸಲ್ಮಾನರು ಆಚರಿಸುವ ಉಪವಾಸವು ಅನ್ನದ ಮಹತ್ವವನ್ನು ಸಾರುತ್ತದೆ. ಅನ್ನದಾನ ಕೇಂದ್ರವಾಗಿ ವಿಖ್ಯಾತವಾಗಿರುವ ಸಿದ್ಧಗಂಗಾ ಮಠದಲ್ಲಿ ರಂಜಾನ್‌ನ ಉಪವಾಸವನ್ನು ಅಂತ್ಯಗೊಳಿಸುವುದು ಕೂಡಾ ಪವಿತ್ರ ಎಂದು ನಾವು ಇಲ್ಲಿಗೆ ಬಂದಿದ್ದೇವೆ. ಹಿಂದಿನ ವರ್ಷವೂ ಸಿದ್ಧಗಂಗಾ ಮಠದಲ್ಲಿ ರಂಜಾನ್ ಉಪವಾಸ ಬಿಟ್ಟಿದ್ದಾಗಿ ಹೇಳಿದರು.ಕೆಪಿಸಿಸಿ ಮುಖಂಡ ಇಕ್ಬಾಲ್ ಅಹ್ಮದ್ ಮಾತನಾಡಿ, ದಯವಿಲ್ಲದ ಧರ್ಮ ಯಾವುದಯ್ಯಎಂದು ಬಸವಣ್ಣನವರು ಹೇಳಿದಂತೆ ಇಸ್ಲಾಂ ಧರ್ಮವೂ ದಾನ, ದಯೆ, ಕರುಣೆಯನ್ನು ಪ್ರತಿಪಾದಿಸುತ್ತದೆ. ಅನ್ನದ ಮಹತ್ವ, ಹಸಿವಿನ ಕಷ್ಟದ ಅರಿವಾಗಬೇಕು, ಹಸಿದವರ ಸಂಕಟ ತಿಳಿಯಬೇಕು ಎನ್ನುವ ಕಾರಣಕ್ಕೆ ರಂಜಾನ್‌ನಲ್ಲಿ ಉಪವಾಸ ಆಚರಿಸಲಾಗುತ್ತದೆ. ಇಂದು ಅನ್ನದಾಸೋಹ ಕೇಂದ್ರವಾದ ಸಿದ್ಧಗಂಗಾ ಮಠದಲ್ಲಿ ನಾವು ಉಪವಾಸ ಬಿಟ್ಟಿದ್ದು ವಿಶೇಷವಾಗಿದೆ ಎಂದು ಹೇಳಿದರು.ಬಡವರು, ಅನಾಥರಿಗೆ ಸಹಾಯ ಮಾಡಬೇಕು, ಹಸಿದವರಿಗೆ ಅನ್ನದಾನ ಮಾಡಬೇಕು.ಎಲ್ಲರಲ್ಲೂ ಸಮಾನತೆಯಿಂದ ಕಾಣಬೇಕು ಎಂಬುದು ಇಸ್ಲಾಂ ಧರ್ಮದ ಆಶಯ.ಅಶಕ್ತರಿಗೆ ಸಹಾಯ ಮಾಡುವ ಮಾನವೀಯ ಧರ್ಮ ದೊಡ್ಡದು ಎಂದರು.ಕೆಪಿಸಿಸಿ ಉಪಾಧ್ಯಕ್ಷ ಮುರಳಿಧರ ಹಾಲಪ್ಪ ಮಾತನಾಡಿ, ಅಕ್ಷರ, ಅನ್ನ, ಆಶ್ರಯದ ತ್ರಿವಿಧ ದಾಸೋಹದ ಸಿದ್ಧಗಂಗಾ ಮಠದಲ್ಲಿ ಎಲ್ಲಾ ಜನಾಂಗದ ಬಡ ಮಕ್ಕಳಿಗೆ ಆಶ್ರಯ ನೀಡಿ ಅವರಿಗೆ ಅನ್ನ ನೀಡಿ ಅಕ್ಷರ ಕಲಿಸುವ ಪವಿತ್ರ ಕೆಲಸ ನಡೆಯುತ್ತಿದೆ. ಎಲ್ಲರೂ ಸಮಾನವರು ಭೇದಭಾವ ಮರೆತು ಸಹಬಾಳ್ವೆಯಿಂದ ಬಾಳಬೇಕು ಎಂದು ಡಾ.ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನ ಹೇಳಿದೆ.ಅದರ ತತ್ವಗಳನ್ನು ಅನುಸರಿಸಿಕೊಂಡು ಎಲ್ಲರೂ ಶಾಂತಿ ಸಮಾಧಾನದಿಂದ ಬಾಳೋಣ ಎಂದು ಹೇಳಿದರು.ರಾಜೀವ್‌ಗಾಂಧಿ ವೈದ್ಯಕೀಯ ವಿಶ್ವಿದ್ಯಾಲಯದ ಸೆನೆಟ್ ಸದಸ್ಯ ಡಾ.ಶ್ರೀನಿವಾಸನ್, ಕೆಪಿಸಿಸಿ ಕಾನೂನು ಘಟಕ ಕಾರ್ಯದರ್ಶಿ ಆಲಿ, ಮುಖಂಡರಾದ ಅನಿಲ್ ತಡಕಲ್, ಸೈಯದ್ ನಯಾಜ್‌ಅಹ್ಮದ್, ಡಾ.ರಿಯಾನ್ ಷರೀಫ್ ಮೊದಲಾದವರು ಭಾಗವಹಿಸಿದ್ದರು.