ಸಾರಾಂಶ
ಹೊಸಪೇಟೆ: ಭಾರತದಲ್ಲಿರುವ ಮುಸ್ಲಿಮರು, ಕ್ರಿಶ್ಚಿಯನ್ನರು ಮೂಲತಃ ಹಿಂದೂಗಳೇ. ಸಾಮಾಜಿಕ ಅಸಮಾನತೆ, ಆಮಿಷ, ಬಲವಂತದ ಕಾರಣಕ್ಕೆ ಮತಾಂತರಗೊಂಡಿದ್ದಾರೆ. ಸಹಬಾಳ್ವೆ, ಸಂಘಟನೆಯಲ್ಲಿ ನಂಬಿಕೆಯಿಟ್ಟಿರುವ ಆರ್‌ಎಸ್‌ಎಸ್ ಯಾರನ್ನೂ ದ್ವೇಷಿಸುವುದಿಲ್ಲ ಎಂದು ಆರ್‌ಎಸ್‌ಎಸ್ ಉತ್ತರ ಕರ್ನಾಟಕ ಪ್ರಾಂತ ಕಾರ್ಯಕಾರಿಣಿ ಸದಸ್ಯ ಡಾ.ರವೀಂದ್ರ ಹೇಳಿದರು.
ಆರೆಸ್ಸೆಸ್‌ನಿಂದ ಹೊಸಪೇಟೆಯ ಖಾಸಗಿ ಹೋಟೆಲ್ ನಲ್ಲಿ ಏರ್ಪಡಿಸಿದ್ದ `ವಿಜಯದಶಮಿ ಉತ್ಸವ''''''''''''''''ದಲ್ಲಿ ಮಾತನಾಡಿದ ಅವರು, ಜಾತಿ ಸಮೀಕ್ಷೆಯಲ್ಲಿ ಮಾದಿಗ ಕ್ರಿಶ್ಚಿಯನ್, ಬಣಜಿಗ ಕ್ರಿಶ್ಚಿಯನ್ ಎಂಬ ಕಲಂಗಳನ್ನು ಉಲ್ಲೇಖಿಸಿತ್ತು. ಅವರೆಲ್ಲ ಮತಾಂತರಗೊಂಡವರೆಲ್ಲ ಹಿಂದೂಗಳೇ. ಹಿಂದೂ ಸಮಾಜದಲ್ಲಿ ಅಸಮಾನತೆಯಿಂದ ಅವರು ಮತಾಂತರಗೊಂಡಿದ್ದಾರೆ ಎಂಬುದನ್ನು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಬಹಿರಂಗಪಡಿಸಿದ್ದಾರೆ ಎಂದರು.ಸ್ವಾಮಿ ವಿವೇಕಾನಂದರು ಪೂಜಾ ವಿಧಾನಕ್ಕಿಂತಲೂ ರಾಷ್ಟ್ರೀಯ ವಾದವನ್ನೇ ಮಂಡಿಸಿದ್ದಾರೆ. ಅವರ ವಿಚಾರಧಾರೆಗಳಡಿ ಡಾ.ಹೆಗಡೆವಾರ್ ಆರೆಸ್ಸೆಸ್ ಕಟ್ಟಿದರು. ಅಂದು 17 ಜನರಿಂದ ಆರಂಭಗೊಂಡಿದ್ದ ಸಂಘ ಇಂದು ನೂರು ವಸಂತಗಳನ್ನು ಪೂರೈಸಿದೆ ಎಂದರು.
ರಾಷ್ಟ್ರಕವಿ ಕುವೆಂಪು ಅವರ ಸಂದೇಶಗಳಿಗೂ ವಿವೇಕಾನಂದ ವಿಚಾರೆಧಾರೆಗಳಲ್ಲಿ ಸಾಮ್ಯತೆಯಿದೆ. ಆದರೆ, ಕೆಲ ನಗರ ನಕ್ಸಲಿಯರು ತಮಗೆ ಬೇಕಾದಂತೆ ಅರ್ಥೈಸಿ, ಜನರಲ್ಲಿ ಭೇದ ಭಾವ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಕೆಲವರು ಭಾಷೆ, ನೆಲದ ನೆಪದಲ್ಲಿ ಜನರನ್ನು ಪ್ರತ್ಯೇಕಿಸುವ ಹುನ್ನಾರ ನಡೆಸಿದ್ದಾರೆ. ಭಾಷೆ, ನೀರು ಮತ್ತಿತರೆ ಸಣ್ಣ ಪುಟ್ಟ ವಿಚಾರಗಳಿಗೆ ಅಕ್ಕಪಕ್ಕದ ರಾಜ್ಯಗಳ ಜನರೊಂದಿಗೆ ಸಣ್ಣಪುಟ್ಟ ಕಾರಣಕ್ಕೆ ಜಗಳ ಮಾಡುವವರೂ ಇದ್ದಾರೆ. ನಮ್ಮಲ್ಲಿ ರಾಷ್ಟ್ರೀಯ ಮನೋಭಾವ ಮರೆತಾಗ ಮಾತ್ರ ಅಂತಹ ಗೊಂದಲಗಳಿಗೆ ದಾರಿಯಾಗುತ್ತದೆ. ಇಂಗ್ಲಿಷ್ ಹೊಟ್ಟೆಪಾಡಿನ ಭಾಷೆಯಾಗಬೇಕೇ ಹೊರತು, ಮಾತೃ ಭಾಷೆಯ ಸ್ಥಾನದಲ್ಲಿಡಬಾರದು ಎಂದು ಸಲಹೆ ನೀಡಿದರು.ರಾಜಕೀಯ ಶಕ್ತಿ ಬದಲಾಗಿದೆ:
ಕೆಲ ದೇಶಗಳಲ್ಲಿ ಒಂದೇ ಧರ್ಮದ ಜನರಿದ್ದರೂ ಸದಾ ಸಂಘರ್ಷ, ದ್ವೇಷಭಾವನೆ ಹೊಗೆಯಾಡುತ್ತಿವೆ. ಆದರೆ, ಭಾರತದಲ್ಲಿ ಅನೇಕ ಧರ್ಮ, ಜಾತಿ ಜನರಿದ್ದರೂ ವಿವಿಧತೆಯಲ್ಲಿ ಏಕತೆ ಅಡಗಿದೆ. ಅದೇ ಭಾರತದ ಸೌಂದರ್ಯ. ಕೆಲ ವರ್ಷಗಳ ಹಿಂದೆ ದೇಶ ಅಂತಹದ್ದೇ ಪರಿಸ್ಥಿತಿಗೆ ಹೊರಳುತಿತ್ತು. ಸೇನೆ ಮೇಲೆ ನಮ್ಮದೇ ಜನರು ಕಲ್ಲು ತೂರಾಟ ನಡೆಸುತ್ತಿದ್ದರು. ದೇಶದಲ್ಲಿ ಭಯೋತ್ಪಾದಕರು ರಣಕೇಕೆ ಹಾಕುತ್ತಿದ್ದರು. ಆದರೆ, ಈಗ ರಾಜಕೀಯ ಶಕ್ತಿ ಬದಲಾಗಿದೆ. ದುಷ್ಟ ಶಕ್ತಿಗಳಿಗೆ ಭಾರತ ತಕ್ಕ ಉತ್ತರ ಕೊಡುತ್ತಿದೆ. ಸರ್ಜಿಕಲ್ ಸ್ಟ್ರೈಕ್ ಹಾಗೂ ಆಪರೇಷನ್ ಸಿಂದೂರ ಸಾಕ್ಷಿ ಎಂದು ಪರೋಕ್ಷವಾಗಿ ಮೋದಿ ಆಡಳಿತವನ್ನು ಬಣ್ಣಿಸಿದರು.ಸಂಡೂರು ಸುಶೀಲಾನಗರದ ತಿಪ್ಪೇಸ್ವಾಮಿ ಮಹಾರಾಜ್ ಮಾತನಾಡಿದರು. ನಗರದ ಆರ್‌ಎಸ್ಎಸ್ ಪ್ರಮುಖ ರಾಜಾ ಕೃಷ್ಣದೇವರಾಯ ಇದ್ದರು. ಕುಸ್ತಿಪಟುಗಳಾದ ತಳವಾರ ಹಿರೇಭೀಮಪ್ಪ, ರಾಮಾಂಜನಪ್ಪ, ಗೋಸಲ ಸಣ್ಣಕಣಿವೆಪ್ಪ ಮತ್ತು ಕಲ್ಗುಡಿ ಭರಮಪ್ಪ ಅವರನ್ನು ಸನ್ಮಾನಿಸಲಾಯಿತು.
ಆಕರ್ಷಕ ಪಥಸಂಚಲನ:ನಗರದ ದೀಪಾಯನ ಶಾಲಾ ಮೈದಾನದಿಂದ ಆರಂಭವಾದ ಗಣವೇಷಧಾರಿಗಳ ಆಕರ್ಷಕ ಪಥಸಂಚಲನ ಸಣ್ಣಕ್ಕಿ ವೀರಭದ್ರೇಶ್ವರ ದೇವಸ್ಥಾನ, ಟಿಬಿಡ್ಯಾಂ ರಸ್ತೆ- ವಾಲ್ಮೀಕಿ ವೃತ್ತ, ಓಂಕಾರೇಶ್ವರ ದೇವಸ್ಥಾನ, ಚಿತ್ರಕೇರಿ, ರಾಮಲಿಂಗೇಶ್ವರ ದೇವಸ್ಥಾನ, ಊರಮ್ಮ ದೇವಿ ದೇವಸ್ಥಾನದ ರಸ್ತೆ, ವಡಕರಾಯ ತೇರು, ಮೇನ್ ಬಜಾರ್, ಪಾದಗಟ್ಟಿ ಆಂಜನೇಯ, ಹೂವಿನ ಬಜಾರ್, ಗಾಂಧಿ ವೃತ್ತ, ಮೂರಂಗಡಿ ವೃತ್ತ, ಪುಣ್ಯ ಮೂರ್ತಿ ಸರ್ಕಲ್, ಕಾಮಧೇನು ಸ್ವೀಟ್ಸ್, ಭಗತ್ ಸಿಂಗ್ ಸರ್ಕಲ್, ಡಾ.ಬಿ.ಆರ್. ಅಂಬೇಡ್ಕರ್ ಸರ್ಕಲ್, ಪುನೀತ್ ರಾಜಕುಮಾರ್ ಸರ್ಕಲ್, ಅಶೋಕ ಬುಕ್ ಸ್ಟಾಲ್ ಸರ್ಕಲ್, ಬಸ್ ನಿಲ್ದಾಣ, ಹಂಪಿ ರಸ್ತೆ, ಬಸ್ ಡಿಪೋ ರಸ್ತೆ ಮೂಲಕ ಮಲ್ಲಿಗೆ ಹೋಟೆಲ್‌ನಲ್ಲಿ ಕೊನೆಗೊಂಡಿತು. ಹಲವೆಡೆ ಪುಷ್ಪವೃಷ್ಟಿ ಮಾಡಲಾಯಿತು.