ಯತ್ನಾಳ ಬಂಧನಕ್ಕೆ ಮುಸ್ಲಿಮರ ಆಗ್ರಹ

| Published : Sep 21 2024, 01:57 AM IST

ಸಾರಾಂಶ

ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಟಿಪ್ಪು ಸುಲ್ತಾನ್ ಮತ್ತು ಔರಂಗಜೇಬ್ ಅವರ ಬಗ್ಗೆ ಹಗುರವಾಗಿ ಹಾಗೂ ಪ್ರಚೋದನಕಾರಿ ಮಾತುಗಳನ್ನಾಡಿರುವುದನ್ನು ವಿರೋಧಿಸಿ ಮುಸ್ಲಿಂ ಸಮುದಾಯದವರು ನಗರದ ಬಸವೇಶ್ವರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಶುಕ್ರವಾರ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿತು. ಈ ವೇಳೆ ಶಾಸಕ ಯತ್ನಾಳ ಅವರ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿ, ಪಾದರಕ್ಷೆಯಿಂದ ಹೊಡೆದು ಆಕ್ರೋಶ ವ್ಯಕ್ತಪಡಿಸಿ, ಯತ್ನಾಳ ಬಂಧನಕ್ಕೆ ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಮುಧೋಳ

ಮುಧೋಳ ನಗರದ ಜನತಾ ಪ್ಲಾಟಿನಲ್ಲಿ ಸ್ಥಾಪಿಸಲಾದ ಜನತಾ ರಾಜಾ ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಗುರುವಾರ ಸಂಜೆ ಶಿವಾಜಿ ಸರ್ಕಲ್‌ನಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುವಾಗ ಟಿಪ್ಪು ಸುಲ್ತಾನ್ ಮತ್ತು ಔರಂಗಜೇಬ್ ಅವರ ಬಗ್ಗೆ ಹಗುರವಾಗಿ ಹಾಗೂ ಪ್ರಚೋದನಕಾರಿ ಮಾತುಗಳನ್ನಾಡಿದ್ದರು. ಇದನ್ನು ಖಂಡಿಸಿ ಶುಕ್ರವಾರ ಮುಸ್ಲಿಂ ಸಮುದಾಯದವರು ಪ್ರತಿಭಟನೆ ನಡೆಸಿದರು. ಪ್ರತಿಭಟನೆಯ ವೇಳೆ ಪ್ರತಿಭಟನಾಕಾರರು ಮತ್ತು ಪೊಲೀಸ್ ಅಧಿಕಾರಿಗಳ ಮಧ್ಯೆ ಮಾತಿನ ಚಕಮಕಿ ನಡೆಯಿತು.

ಇಷ್ಟಕ್ಕೆ ಸುಮ್ಮನಾಗದ ಪ್ರತಿಭಟನಾಕಾರರು ಯತ್ನಾಳ ಅವರ ಮೇಲೆ ಈ ಕೂಡಲೇ ಕೇಸ್ ದಾಖಲಿಸಿ ಬಂಧಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಒತ್ತಾಯಿಸಿದರು. ನೂರಾರು ಸಂಖ್ಯೆಯಲ್ಲಿ ಮುಸ್ಲಿಂ ಸಮಾಜದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಶುಕ್ರವಾರದ ಸಂತೆ ಬಜಾರ್ ಇರುವುದರಿಂದ ಸಾರ್ವಜನಿಕರಿಗೆ ಮತ್ತು ಇತರೆ ನಗರಗಳಿಗೆ ತೆರಳುವ ಪ್ರಯಾಣಿಕರಿಗೆ ಕೆಲ ಹೊತ್ತು ತೀವ್ರ ತೊಂದರೆ ಉಂಟಾಗಿರುವುದು ಕಂಡುಬಂತು. ಜಮಖಂಡಿ ಡಿವೈಎಸ್ಪಿ ಶಾಂತಿವೀರಯ್ಯ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರಿಗೆ ಮನವೊಲಿಸಿ ವಾತಾವರಣ ತಿಳಿಗೊಳಿಸುವಲ್ಲಿ ಯಶಸ್ವಿಯಾದರು. ಸಿಪಿಐ ಮಾಹಾದೇವ ಶಿರಹಟ್ಟಿ, ಪಿಎಸ್ಐ ಅಜಿತಕುಮಾರ ಹೊಸಮನಿ ಇದ್ದರು.