ಮಂಗಳಾದೇವಿ ಉತ್ಸವದಲ್ಲಿ ಮುಸ್ಲಿಮರು ವ್ಯಾಪಾರ ಮಾಡಿಯೇ ಸಿದ್ಧ: ಸುನಿಲ್‌ ಕುಮಾರ್‌ ಬಜಾಲ್‌ ಸವಾಲು

| Published : Oct 14 2023, 01:00 AM IST

ಮಂಗಳಾದೇವಿ ಉತ್ಸವದಲ್ಲಿ ಮುಸ್ಲಿಮರು ವ್ಯಾಪಾರ ಮಾಡಿಯೇ ಸಿದ್ಧ: ಸುನಿಲ್‌ ಕುಮಾರ್‌ ಬಜಾಲ್‌ ಸವಾಲು
Share this Article
  • FB
  • TW
  • Linkdin
  • Email

ಸಾರಾಂಶ

ಮುಸ್ಲಿಂ ವ್ಯಾಪಾರಿಗಳು ಹಾಗೂ ಈ ಸಮಿತಿ ಕಳೆದ ಹತ್ತು ದಿನಗಳಿಂದ ಅನುಮತಿಗಾಗಿ ಸುತ್ತಾಡುತ್ತಿದೆ. ದೇವಸ್ಥಾನದ ಸಿಸಿ ಕ್ಯಾಮರಾ ಪರಿಶೀಲಿಸಿದರೆ ಗೊತ್ತಾಗುತ್ತದೆ. ಈಗ ಯಾರಿಗೋ ಹರಾಜಿನಲ್ಲಿ ಅಂಗಡಿಗಳನ್ನು ಕೊಟ್ಟಿದ್ದಾರೆ. ಸಿದ್ದರಾಮಯ್ಯನವರ ಗ್ಯಾರಂಟಿಗಳ ಮೊದಲು ನಮಗೆ ಬದುಕುವ ಗ್ಯಾರಂಟಿ ಕೊಡಿ, ಕೂಲಿ ಮಾಡಿ ಬದುಕುವ ನಮಗೆ ಬದುಕುವ ಹಕ್ಕು ಕಲ್ಪಿಸಿ. ಈ ಸರ್ಕಾರ ಕೂಡ ಕೋಮುವಾದಿಗಳ ಜತೆ ಸೇರಿಕೊಂಡಿದೆ.
ಕನ್ನಡಪ್ರಭ ವಾರ್ತೆ ಮಂಗಳೂರು ಮಂಗಳೂರಿನ ಮಂಗಳಾದೇವಿ ದೇವಸ್ಥಾನದ ನವರಾತ್ರಿ ಉತ್ಸವದಲ್ಲಿ ಮುಸ್ಲಿಂ ವ್ಯಾಪಾರಿಗಳು ವ್ಯಾಪಾರ ಮಾಡಿಯೇ ಸಿದ್ಧ ಎಂದು ದ.ಕ. ಮತ್ತು ಉಡುಪಿ ಜಾತ್ರಾ ವ್ಯಾಪಾರಸ್ಥರ ಸಮನ್ವಯ ಸಮಿತಿ ಗೌರವಾಧ್ಯಕ್ಷ ಸುನಿಲ್‌ ಕುಮಾರ್‌ ಬಜಾಲ್‌ ಸವಾಲು ಹಾಕಿದ್ದಾರೆ. ಮಂಗಳೂರಿನಲ್ಲಿ ಪುರಭವನ ಎದುರು ಶುಕ್ರವಾರ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ಏಲಂ ವೇಳೆ ಉದ್ದೇಶಪೂರ್ವಕವಾಗಿಯೇ ದೇವಳದ ಆಡಳಿತ ಮಂಡಳಿ ಮುಸ್ಲಿಮರನ್ನು ದೂರ ಇರಿಸಿದೆ ಎಂದು ಕಿಡಿ ಕಾರಿದರು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಾತ್ರೆ ವೇಳೆ ಮುಸ್ಲಿಮರಿಗೆ ಅಲ್ಲಿ ವ್ಯಾಪಾರಕ್ಕೆ ಅ‍ವಕಾಶ ನೀಡಲಾಗಿತ್ತು, ಈಗ ಕಾಂಗ್ರೆಸ್‌ ಆಡಳಿತದಲ್ಲಿ ಅವಕಾಶ ನಿರಾಕರಿಸಲಾಗಿದೆ ಎಂದು ಆರೋಪಿಸಿದರು. ದ.ಕ. ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ದೇವಸ್ಥಾನದ ಆಡಳಿತ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, ಪಾಲಿಕೆಗೆ ಸೇರಿದ ಜಾಗದಲ್ಲಿ ವ್ಯಾಪಾರ ನಿರಾಕರಿಸಲಾಗಿದೆ ಎಂದು ಮುಸ್ಲಿಂ ಹಾಗೂ ಸಮಾನ ಮನಸ್ಕ ಹಿಂದೂ ವ್ಯಾಪಾರಿಗಳು ಜತೆ ಸೇರಿ ನಡೆಸಿದ ಪ್ರತಿಭಟನೆಯಲ್ಲಿ ಕೋಮುವಾದಿಗಳಿಗೆ ಧಿಕ್ಕಾರ ಎಂದು ಘೋಷಣೆ ಕೂಗಿದರು. ದೇವಸ್ಥಾನದ ಆಡಳಿತ ಮಂಡಳಿ ಮುಸ್ಲಿಂ ವ್ಯಾಪಾರಿಗಳನ್ನು ತಡೆಯುವ ಕೆಲಸ ಮಾಡಿದೆ. ನಾವು ಹರಾಜಿನಲ್ಲಿ ಭಾಗವಹಿಸಲು ಮುಂದಾದರೂ ತಡೆದಿದ್ದಾರೆ. ಈಗ ದೇವರ ಅಂಗಳದಲ್ಲಿ ನಿಂತು ಸುಳ್ಳು ಹೇಳುತ್ತಿದ್ದಾರೆ. ಪಾಲಿಕೆಗೆ ಸೇರಿದ ಜಾಗದಲ್ಲಿ ವ್ಯಾಪಾರ ಮಾಡಬೇಡಿ ಎಂದು ಹೇಳಲು ಅವರು ಯಾರು? ನಾವು ಜಾತ್ರೆಯ ದಿನ ಅಲ್ಲಿ ವ್ಯಾಪಾರ ಮಾಡಿಯೇ ಮಾಡುತ್ತೇವೆ. ಅದನ್ನು ಯಾರು ತಡೆಯುತ್ತಾರೋ ನೋಡುವ. ಅಲ್ಲಿ ಏನೇ ಘಟನೆ ನಡೆದರೂ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹೊಣೆಯಾಗುತ್ತದೆ ಎಂದರು. ಮುಸ್ಲಿಂ ವ್ಯಾಪಾರಿಗಳು ಹಾಗೂ ಈ ಸಮಿತಿ ಕಳೆದ ಹತ್ತು ದಿನಗಳಿಂದ ಅನುಮತಿಗಾಗಿ ಸುತ್ತಾಡುತ್ತಿದೆ. ದೇವಸ್ಥಾನದ ಸಿಸಿ ಕ್ಯಾಮರಾ ಪರಿಶೀಲಿಸಿದರೆ ಗೊತ್ತಾಗುತ್ತದೆ. ಈಗ ಯಾರಿಗೋ ಹರಾಜಿನಲ್ಲಿ ಅಂಗಡಿಗಳನ್ನು ಕೊಟ್ಟಿದ್ದಾರೆ. ಸಿದ್ದರಾಮಯ್ಯನವರ ಗ್ಯಾರಂಟಿಗಳ ಮೊದಲು ನಮಗೆ ಬದುಕುವ ಗ್ಯಾರಂಟಿ ಕೊಡಿ, ಕೂಲಿ ಮಾಡಿ ಬದುಕುವ ನಮಗೆ ಬದುಕುವ ಹಕ್ಕು ಕಲ್ಪಿಸಿ. ಈ ಸರ್ಕಾರ ಕೂಡ ಕೋಮುವಾದಿಗಳ ಜತೆ ಸೇರಿಕೊಂಡಿದೆ ಎಂದು ದೂಷಿಸಿದರು.