ಕೇಂದ್ರ ಸರ್ಕಾರದಿಂದ ಮುಸ್ಲಿಮರ ಟಾರ್ಗೆಟ್‌

| Published : Apr 11 2025, 12:37 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ವಕ್ಫ್ ಬಿಲ್ ತಿದ್ದುಪಡಿ ಕಾಯ್ದೆಯನ್ನು ನಾವು ವಿರೋಧಿಸುತ್ತೇವೆ. ಅಲ್ಲದೇ, ಕೇಂದ್ರದ ಈ ನಡೆ ಖಂಡಿಸಿ ಏ.22 ಅಥವಾ 24ರಂದು ನಗರದಲ್ಲಿ ಬೃಹತ್ ರ್‍ಯಾಲಿ ಮಾಡಿ, ರಾಷ್ಟ್ರಪತಿಗಳಿಗೆ ಮನವಿ ಕೊಡಲಾಗುವುದು ಎಂದು ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ್ ಮುಶ್ರೀಫ್ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ವಕ್ಫ್ ಬಿಲ್ ತಿದ್ದುಪಡಿ ಕಾಯ್ದೆಯನ್ನು ನಾವು ವಿರೋಧಿಸುತ್ತೇವೆ. ಅಲ್ಲದೇ, ಕೇಂದ್ರದ ಈ ನಡೆ ಖಂಡಿಸಿ ಏ.22 ಅಥವಾ 24ರಂದು ನಗರದಲ್ಲಿ ಬೃಹತ್ ರ್‍ಯಾಲಿ ಮಾಡಿ, ರಾಷ್ಟ್ರಪತಿಗಳಿಗೆ ಮನವಿ ಕೊಡಲಾಗುವುದು ಎಂದು ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ್ ಮುಶ್ರೀಫ್ ಹೇಳಿದರು.

ನಗರದಲ್ಲಿ ಕಾಂಗ್ರೆಸ್ ಮುಖಂಡರೊಂದಿಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಲ್ಪಸಂಖ್ಯಾತರನ್ನು ಟಾರ್ಗೆಟ್ ಮಾಡಿಯೇ ಬಿಜೆಪಿಯವರು ಏನಾದರೂ ಒಂದು ಕಾಯ್ದೆ ತರುತ್ತಾರೆ. ಈಗ ವಕ್ಫ್‌ಗೆ ತಿದ್ದುಪಡಿ ತರುವ ಅವಶ್ಯಕತೆ ಇರಲಿಲ್ಲ. ಅಲ್ಪಸಂಖ್ಯಾತರನ್ನು ಕಾಡಿಸುವ ಉದ್ದೇಶದಿಂದಲೇ ಹೀಗೆ ಮಾಡಿದ್ದಾರೆ. ಇದನ್ನು ಪ್ರಶ್ನಿಸಿ ವಿಜಯಪುರದಿಂದಲೇ ನಾವು ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗುವುದಾಗಿ ತಿಳಿಸಿದರು.

ಮಹಮ್ಮದ ಪೈಗಂಬರ್ ಸಲುವಾಗಿ ನಾವು ಜೀವ ಕೊಡುತ್ತೇವೆ. ಇನ್ನುಮುಂದೆ ಮುಸ್ಲಿಂ ಸಮುದಾಯಕ್ಕೆ ಹಾಗೂ ಮಹಮ್ಮದ ಪೈಗಂಬರ್‌ ಬಗ್ಗೆ ಮಾತನಾಡಿದರೆ ಸರಿ ಇರಲ್ಲ ಎಂದು ಗುಡುಗಿದ ಅವರು, ಮಾತೆತ್ತಿದರೆ ಪಾಕಿಸ್ತಾನಕ್ಕೆ ಹೋಗಿ ಎನ್ನುವ ಯತ್ನಾಳರೇ ಇದೇನು ನಿಮ್ಮ ಅಪ್ಪನ ಊರಾ ಎಂದು ಪ್ರಶ್ನಿಸಿದರು. ಜಾತಿ ರಾಜಕಾರಣ ಮಾಡುವುದು ಬಿಟ್ಟು ಅಭಿವೃದ್ಧಿ ಮಾಡಿ. ಇನ್ನೊಮ್ಮೆ ಮಹಮ್ಮದ ಪೈಗಂಬರ್ ಬಗ್ಗೆ ಮಾತನಾಡಿದರೆ ನಿಮ್ಮ ಮನೆಗೆ ಬರುತ್ತೇವೆ ಎಂದು ಎಚ್ಚರಿಕೆ ನೀಡಿದರು.ಅಹಿಂದ ಮುಖಂಡ ಎಸ್.ಎಂ.ಪಾಟೀಲ ಗಣಿಹಾರ ಮಾತನಾಡಿ, ವಕ್ಫ್ ಎಂಬ ಪದದ ಅರ್ಥವೇ ಇವರಿಗೆ ಗೊತ್ತಿಲ್ಲ. ವಕ್ಫ್ ಎಂದರೆ ಮುಸ್ಲಿಂ ಸಮುದಾಯದಲ್ಲಿ ದೇವರಿಗೆ ದೇಣಿಗೆ ನೀಡಿದ ಆಸ್ತಿಗಳನ್ನು ಸಂರಕ್ಷಣೆ ಮಾಡಲು ಇರುವ ಒಂದು ಮಂಡಳಿ. ಕಳೆದ 11 ವರ್ಷಗಳಿಂದ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ದೇಶಕ್ಕಾಗಿ, ಜನರಿಗಾಗಿ, ಬಡವರಿಗಾಗಿ ಏನೂ ಮಾಡಿಲ್ಲ. ಇವರು ಮಾಡಿದ್ದು ತ್ರಿವಳಿ ತಲಾಕ್‌, ಹಿಜಾಬ್, ಹಲಾಲ್‌ ಕಟ್ ಸೇರಿದಂತೆ ಇಂತದ್ದೇ ಗಲಭೆ ಸೃಷ್ಟಿಸುವ ಕೆಲಸ ಮಾಡಿದ್ದಾರೆ. ಐಟಿ, ಇಡಿಗಳನ್ನು ಛೂಬಿಟ್ಟು ಪಿಎಂ ಕೇರ್ ಫಂಡ್‌ಗೆ ಸಾಕಷ್ಟು ಅನುದಾನ ಪಡೆಯುತ್ತಿದ್ದಾರೆ. ಇದೆಲ್ಲವನ್ನು ಮರೆಮಾಚಿ ದೇಶದ ಜನರ ಗಮನ ಬೇರೆಡೆ ಸೆಳೆಯಲು ವಕ್ಫ್ ಹೆಸರಿನಲ್ಲಿ ಹೀಗೆಲ್ಲ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ನಾಡಿನ ಪ್ರಜ್ಞಾವಂತರು, ಲಿಂಗಾಯತ ಸಮುದಾಯದ ಜನರು ಇವರನ್ನು ಹೊರಗೆ ಹಾಕಬೇಕು ಎಂದು ಮನವಿ ಮಾಡಿದರು. ಮುಖಂಡರಾದ ಮಹಮ್ಮದ ರಫೀಕ್ ಟಪಾಲ್, ಅಬ್ದುಲ್‌ರಜಾಕ್ ಹೊರ್ತಿ, ಎಂ.ಸಿ.ಮುಲ್ಲಾ, ಎಸ್.ಎಸ್.ಖಾದ್ರಿ, ಫಯಾಜ್ ಕಲಾದಗಿ, ದಸ್ತಗೀರ ಸಾಲೊಟಗಿ ಉಪಸ್ಥಿತರಿದ್ದರು.

-----------

ಯತ್ನಾಳ ವಿರುದ್ಧ ನಕಲಿ ವೋಟಿಂಗ್‌ ಆರೋಪ

ಯತ್ನಾಳ ಅವರು ಬೋಗಸ್ (ನಕಲಿ) ವೋಟಿಂಗ್ ಮಾಡಿಕೊಂಡು ವಿಧಾನಸಭೆ ಚುನಾವಣೆಯಲ್ಲಿ ಗೆದ್ದಿದ್ದಾರೆ. ಒಂದು ವೇಳೆ ಅವರು ನಕಲಿ ಮತಗಳನ್ನು ಸೃಷ್ಟಿಸಿಲ್ಲ ಎಂದಾದರೆ ನಗರದ ಆರಾಧ್ಯ ದೈವ ಸಿದ್ಧೇಶ್ವರ ದೇಗುಲ ಪ್ರವೇಶಿಸಿ ದೇವರ ಮೇಲೆ ಪ್ರಮಾಣ ಮಾಡಿ ಹೇಳಲಿ ನೋಡೋಣ ಎಂದು ಸವಾಲು ಹಾಕಿದರು. ಯತ್ನಾಳ ಅವರು ಹೈಕೋರ್ಟ್‌ನಲ್ಲಿ ಸೆಟ್ಟಿಂಗ್ ಮಾಡಿದ್ದರಿಂದ ನಮಗೆ ಹಿನ್ನಡೆಯಾಗಿದೆ. ಇದೀಗ ನಾವು ಸುಪ್ರೀಂ ಕೋರ್ಟ್‌ಗೆ ಹೋಗಿದ್ದೇವೆ. ಚಿಂಚೋಳಿಯಿಂದ ಬಂದ ಕೆಲವರು ಓಟಿಂಗ್ ಮಾಡಿದ್ದು, ಅವರ ಮತದಾನದ ಹಕ್ಕುಗಳು ಡಬಲ್ ಆಗಿವೆ (ಎರಡು ಕಡೆ) ಎಂದು ನಾನು ಪ್ರೂವ್ ಮಾಡುತ್ತೇನೆ. ಮಾಡಿಲ್ಲವಾದರೆ ರಾಜಕೀಯದಿಂದ ನಿವೃತ್ತಿಯಾಗುವುದಾಗಿ ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ್ ಮುಶ್ರೀಫ್‌ ತಿಳಿಸಿದರು.

---------------

ಕೋಟ್

ಶಾಸಕ ಬಸನಗೌಡ ಪಾಟೀಲ ಯತ್ನಾಳರಿಗೆ ಬೇರೆ ಕೆಲಸವಿಲ್ಲ. ಇವರು ಹಿಂದು ಯಾವಾಗ ಆದರು?. 2013ರಲ್ಲಿ ಜೆಡಿಎಸ್‌ನಲ್ಲಿದ್ದಾಗ ಟೋಪಿ ಹಾಕಿಕೊಂಡು ದರ್ಗಾಗೆ, ಮಸೀದಿಗೆ ಹೋಗುತ್ತಿದ್ದರು. ಯತ್ನಾಳ ಲಿಂಗಾಯತ ಧರ್ಮದಲ್ಲಿ ಹುಟ್ಟಿ ಬಸವಣ್ಣನವರ ವಚನಗಳು ಹಾಗೂ ಅವುಗಳ ಅರ್ಥವೂ ಗೊತ್ತಿಲ್ಲ.

- ಎಸ್.ಎಂ.ಪಾಟೀಲ ಗಣಿಹಾರ, ಅಹಿಂದ ಮುಖಂಡ

--------------