ಪಾಕಿಸ್ತಾನವನ್ನು ಉಡಾಯಿಸಿ, ಮುಸ್ಲಿಮರ ಒಕ್ಕೊರಲ ಆಗ್ರಹ

| Published : Apr 25 2025, 11:50 PM IST

ಸಾರಾಂಶ

ಕಾಶ್ಮೀರದಲ್ಲಿ ಅಮಾಯಕ ಪ್ರವಾಸಿಗರನ್ನು ಕೊಂದಿದ್ದು ಅಕ್ಷಮ್ಯ ಅಪರಾಧ. ಇಂತಹ ಪಾಪ ಕೃತ್ಯಕ್ಕೆ ಸಾಥ್ ನೀಡಿರುವ ಪಾಕಿಸ್ತಾನದ ವಿರುದ್ಧ ಉಗ್ರ ಕ್ರಮ ಕೈಗೊಳ್ಳಲು ಇದು ಸಕಾಲವಾಗಿದೆ.

ಕನ್ನಡಪ್ರಭ ವಾರ್ತೆ ತುರುವೇಕೆರೆ

ಕಾಶ್ಮೀರದಲ್ಲಿ ಅಮಾಯಕ ಪ್ರವಾಸಿಗರನ್ನು ಕೊಂದಿದ್ದು ಅಕ್ಷಮ್ಯ ಅಪರಾಧ. ಇಂತಹ ಪಾಪ ಕೃತ್ಯಕ್ಕೆ ಸಾಥ್ ನೀಡಿರುವ ಪಾಕಿಸ್ತಾನದ ವಿರುದ್ಧ ಉಗ್ರ ಕ್ರಮ ಕೈಗೊಳ್ಳಲು ಇದು ಸಕಾಲವಾಗಿದೆ. ಕೂಡಲೇ ಪಾಕಿಸ್ತಾನವನ್ನು ಉಡಾಯಿಸಿ. ನಿಮ್ಮೊಂದಿಗೆ ದೇಶದ ಕೋಟ್ಯಾಂತರ ಮುಸ್ಲಿಮರು ಮತ್ತು ದೇಶದ 140 ಕೋಟಿ ಜನರೂ ನಿಮ್ಮೊಂದಿದ್ದಾರೆ. ಪಾಕಿಸ್ತಾನ ಉಡಾಯಿಸಿ ಎಂದು ತಾಲೂಕಿನ ಮುಸ್ಲಿಂ ಭಾಂದವರು ಒಕ್ಕೊರಲ ಆಗ್ರಹ ಮಾಡಿದರು. ಪಟ್ಟಣದಲ್ಲಿರುವ ನಾಲ್ಕು ಮಸೀದಿಗಳಲ್ಲಿ ಶುಕ್ರವಾರದ ಪ್ರಾರ್ಥನೆ ಮಾಡಿದ ನಂತರ ಬಾಣಸಂದ್ರ ವೃತ್ತದಲ್ಲಿ ಸಮಾವೇಶಗೊಂಡ ನೂರಾರು ಮುಸ್ಲಿಂರು ತಾಲೂಕು ದಂಡಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ ಕೂಡಲೇ ಪಾಕಿಸ್ತಾನದ ವಿರುದ್ಧ ಉಗ್ರ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮುಸ್ಲಿಂ ಮುಖಂಡ ಜಫ್ರುಲ್ಲಾ, ದೇಶದ ಐಕ್ಯತೆಗೆ ಧಕ್ಕೆ ಬಂದರೆ ಕೈಕಟ್ಟಿ ಕೂರುವ ಪ್ರಶ್ನೆಯೇ ಇಲ್ಲ. ಕಾಶ್ಮೀರದಲ್ಲಿ ನಡೆದ ಕೃತ್ಯ ನಾಗರೀಕರನ್ನು ತಲೆತಗ್ಗಿಸುವಂತೆ ಮಾಡಿದೆ. ಇದೊಂದು ಅನಾಗರೀಕರು ಮಾಡುವ ಕೃತ್ಯ. ಮೃತ ಹೊಂದಿದ ೨೬ ಕುಟುಂಬದ ಸದಸ್ಯರಿಗೆ ಇಡೀ ದೇಶದ ಜನರು ಧೈರ್ಯ ತುಂಬುವ ಕೆಲಸ ಮಾಡಬೇಕು. ಪಾಕಿಸ್ತಾನದೊಂದಿಗೆ ಯುದ್ಧ ಸಾರಬೇಕು. ದೇಶದ ಶಾಂತಿಗೆ ಭಂಗ ತರುತ್ತಿರುವ ಪಾಕಿಸ್ತಾನಕ್ಕೆ ತಕ್ಕ ಶಾಸ್ತಿ ಮಾಡಬೇಕು. ಯುದ್ಧ ಸಾರಿದಲ್ಲಿ ತಾಲೂಕಿನ ಪ್ರತಿಯೊಂದು ಮುಸ್ಲಿಂ ಸಮುದಾಯದ ಕುಟುಂಬದಿಂದ ಓರ್ವ ಯುವಕರನ್ನು ಯುದ್ಧಕ್ಕೆ ಯೋಧರನ್ನಾಗಿ ಕಳಿಸಲು ನಿರ್ಣಯಿಸಲಾಗಿದೆ ಎಂದರು. ಪಾಪಿ ಪಾಕಿಸ್ತಾನ ಪದೇ ಪದೇ ದೇಶದಲ್ಲಿ ಕಿರಿಕಿರಿ ಮಾಡುತ್ತಿದೆ. ಇದನ್ನು ಸಹಿಸಕೂಡದು. ಭಾರತಾಂಬೆಗೆ ತೊಂದರೆಯಾದಲ್ಲಿ ಎಲ್ಲರೂ ಒಗ್ಗಟ್ಟಾಗಿ ಹೋರಾಟಕ್ಕಿಳಿಯಬೇಕು. ಮೋದಿಯವರು ಪಾಪಿ ಪಾಕಿಸ್ತಾನದ ವಿರುದ್ಧ ಯಾವುದೇ ದಿಟ್ಟ ನಿರ್ಧಾರ ತೆಗೆದುಕೊಂಡರೂ ಸಹ ದೇಶದ ಎಲ್ಲಾ ಮುಸ್ಲಿಂ ಭಾಂಧವರು ಅವರೊಂದಿಗೆ ಇರುವರು. ತಾಳ್ಮೆ ಪರೀಕ್ಷೆ ಬೇಡ. ಕಾಶ್ಮೀರ ನಮ್ಮದು. ಈಗ ಕಾಶ್ಮೀರದ ಜನತೆಯೂ ಮೋದಿಯವರೊಂದಿಗಿದೆ. ಮುಸ್ಲಿಂ ಸಮುದಾಯ ದೇಶದ ಉಳಿವಿಗಾಗಿ ಪ್ರಾಣ ಕೊಡಲೂ ರೆಡಿ ಇದೆ. ನಾವೆಲ್ಲಾ ಒಂದೇ ಎಂದು ಹೇಳ ಬಯಸುತ್ತೇವೆ. ರಕ್ಷಣಾ ವ್ಯವಸ್ಥೆಯಲ್ಲಿ ಪ್ರಪಂಚದಲ್ಲೇ ಭಾರತ ೫ ನೇ ಸ್ಥಾನದಲ್ಲಿದೆ. ಇಂತಹ ಸನ್ನಿವೇಶದಲ್ಲಿ ಪಾಕಿಸ್ತಾನದ ಹುಟ್ಟಡಗಿಸುದೇನೂ ಕಷ್ಟವಲ್ಲ. ಇದು ಸಕಾಲವಾಗಿದೆ. ಯೋಚನೆ ಮಾಡದೇ ಪಾಕಿಸ್ತಾನದ ವಿರುದ್ಧ ಯುದ್ಧ ಘೋಷಿಸಿ. ತಕ್ಕ ಶಾಸ್ತಿ ಮಾಡಿ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಜಫ್ರುಲ್ಲಾ ಮನವಿ ಮಾಡಿದರು. ಪಾಕಿಸ್ತಾನದ ಕೆಲವೇ ಮಂದಿ ಮಾಡಿದ ಕುಕೃತ್ಯಕ್ಕೆ ದೇಶದ ಮುಸ್ಲಿಂ ಸಮುದಾಯದ ಬಗ್ಗೆ ಅನುಮಾನಪಡುವ ಸ್ಥಿತಿ ಇದೆ. ಆದರೆ ಭಾರತದಲ್ಲಿರುವ ಎಲ್ಲಾ ಮುಸ್ಲಿಂ ಸಮುದಾಯ ಭಾರತಾಂಬೆಯ ಸುಪುತ್ರರು. ನಾವೆಲ್ಲರೂ ಸಹೋದರರ ರೀತಿ ಇದ್ದೇವೆ. ದೇಶದ ಭದ್ರತೆಗೆ ಚ್ಯುತಿ ಬಂದರೆ ಒಗ್ಗೂಡಿ ಹೋರಾಡಬೇಕಿದೆ. ದೇಶದಲ್ಲಿರುವ ಮುಸ್ಲಿಂ ಸಮುದಾಯ ಪಾಪಿ ಪಾಕಿಸ್ತಾನದ ವಿರುದ್ಧ ದನಿ ಎತ್ತಬೇಕು ಎಂದು ಹೇಳಿದರು. ಬಾಣಸಂದ್ರ ರಸ್ತೆ ವೃತ್ತದಿಂದ ತಾಲೂಕು ಕಚೇರಿಯವರೆಗೆ ಶಾಂತಿಯಿಂದ ಪ್ರತಿಭಟನೆ ಮಾಡಿದರು. ಮೃತರ ಆತ್ಮಕ್ಕೆ ಶಾಂತಿ ಕೋರುವ ಸಲುವಾಗಿ ಒಂದು ನಿಮಿಷಗಳ ಕಾಲ ಸಂತಾಪ ಸೂಚಿಸಲಾಯಿತು. ಈ ಸಂದರ್ಭಧಲ್ಲಿ ಮುಖಂಡರಾದ ಪಟ್ಟಣ ಪಂಚಾಯಿತಿ ಸದಸ್ಯ ನದೀಂ, ಇಮ್ತಿಯಾಜ್ ಪಾಷಾ, ನವಾಜ್, ಸೈಯದ್ ನೂರುಲ್ಲಾ, ಸಿರಾಜ್ ಅಹಮದ್, ಅಸ್ಲಾಂ, ರಮಹತುಲ್ಲಾ, ಅಫ್ಜಲ್, ಅಬ್ದುಲ್ ರಜಾಕ್, ನಯಾಜ್, ಹುಸೇನ್, ಜಫ್ರುಲ್ಲಾ ಖಾನ್, ಶೌಕತ್, ಜಾಫರ್, ಹಕೀಂ ಸಾಬ್, ಸಾಮಿಲ್ ನಯಾಜ್, ಮುಜಾಮಿಲ್ ಸೇರಿದಂತೆ ನೂರಾರು ಮಂದಿ ಇದ್ದರು.