ಸಮಾನತೆಗಾಗಿ ಶ್ರಮವಹಿಸಬೇಕು: ಶಾಸಕ ಜಿ.ಎಚ್.ಶ್ರೀನಿವಾಸ್

| Published : Feb 13 2024, 12:50 AM IST

ಸಾರಾಂಶ

ಪಟ್ಟಣದ ಬಯಲು ರಂಗಮಂದಿರದಲ್ಲಿ ಏರ್ಪಡಿಸಿದ್ದ ಸಂವಿಧಾನ ಜಾಗೃತಿ ಜಾಥಾ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಶ್ರೀನಿವಾಸ್‌ ಜಾತಿಯತೆ ಹೋಗಲಾಡಿಸಬೇಕು, ಸಮಾನತೆಗಾಗಿ ಶ್ರಮವಹಿಸಬೇಕು ಎಂದು ಕರೆ ನೀಡಿದರು.

ತರೀಕೆರೆಯಲ್ಲಿ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ತರೀಕೆರೆ

ಜಾತಿಯತೆ ಹೋಗಲಾಡಿಸಬೇಕು, ಸಮಾನತೆಗಾಗಿ ಶ್ರಮವಹಿಸಬೇಕು ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಕರೆ ನೀಡಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಚಿಕ್ಕಮಗಳೂರು ತಾಲೂಕು ಅಡಳಿತ ತರೀಕೆರೆ ತಾಲೂಕು ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ, ಪುರಸಭೆ ಇವರ ಸಂಯುಕ್ತಾಶ್ರಯದಲ್ಲಿ ಪಟ್ಟಣದ ಬಯಲು ರಂಗಮಂದಿರದಲ್ಲಿ ಏರ್ಪಡಿಸಿದ್ದ ಸಂವಿಧಾನ ಜಾಗೃತಿ ಜಾಥಾ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನಮಗೆ ಸ್ವಾತಂತ್ರ್ಯ ದೊರಕಿ 75 ವರ್ಷವಾಯಿತು, ಇದರ ಸ್ಮರಣಾರ್ಥ ಸಂವಿಧಾನ ಜಾಗೃತಿ ಜಾಥಾ ಹಮ್ಮಿಕೊಳ್ಳ ಲಾಗಿದೆ. ಇದು ಬಹಳ ಒಳ್ಳೆಯ ಕಾರ್ಯಕ್ರಮ. ನಮ್ಮ ಸಂವಿಧಾನ ನಮಗೆ ಹೆಮ್ಮೆಯಾಗಿದೆ ಇದರಿಂದ ಸಮಾನತೆ ದೊರೆತಿದೆ ಎಂದು ಹೇಳಿದರು.

ಮುಖ್ಯಮಂತ್ರಿ ಎಸ್.ಸಿದ್ದರಾಮಯ್ಯ ತರೀಕೆರೆ ಕ್ಷೇತ್ರಕ್ಕೆ 25 ಕೋಟಿ ಅನುದಾನ ನೀಡಿದ್ದು, ತರೀಕೆರೆ ಪಟ್ಟಣಕ್ಕೆ 5 ಕೋಟಿ ಮತ್ತು ಅಜ್ಜಂಪುರಕ್ಕೆ 2 ಕೋಟಿ ಅನುದಾನ ನೀಡಲಾಗುವುದು. ತರೀಕೆರೆ ಪಟ್ಟಣದ ಬಿ.ಎಚ್.ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗುವುದು. ಭದ್ರಾ ಜಲಾಶಯದಿಂದ ತರೀಕೆರೆ ಪಟ್ಟಣಕ್ಕೆ 24x7 ಶುದ್ಧ ಕುಡಿಯುವ ನೀರು ಸರಬರಾಜು ಮಾಡಲಾಗುವುದು ಹಾಗೂ ತರೀಕೆರೆ ಪಟ್ಟಣದಲ್ಲಿ ಒಳಚರಂಡಿ ಯೋಜನೆ ಜಾರಿಗೊಳಿಸಲಾಗುವುದು ಎಂದು ತಿಳಿಸಿದರು.

ಶಂಕರಘಟ್ಟ ಕುವೆಂಪು ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಶುಭ ಮರವಂತೆ ಮಾತನಾಡಿ ನಮ್ಮ ದೇಶ ಬೃಹತ್ ಸಂವಿಧಾನ ಹೊಂದಿದೆ, ಎಲ್ಲರಿಗೂ ಸಮಾನತೆ ತಂದದ್ದು ಸಂವಿಧಾನ, ಸಂವಿಧಾನವನ್ನು ಓದಬೇಕು, ಸಂವಿಧಾನದಿಂದ ನಾವೆಲ್ಲಾ ಸುರಕ್ಷಿತರಾಗಿದ್ದೇವೆ ಎಂದರು.

ಉಪವಿಭಾಗಾಧಿಕಾರಿ ಡಾ.ಕೆ.ಜಿ.ಕಾಂತರಾಜ್ ಮಾತನಾಡಿ ಸರ್ಕಾರದ ನಿರ್ದೇಶನದಂತೆ ಸಂವಿಧಾನ ಜಾಗೃತಿ ಜಾಥಾ ಆಯೋಜಿಸಲಾಗಿದೆ, ಬಹಳ ವಿಜೃಂಭಣೆಯಿಂದ ಈ ಕಾರ್ಯಕ್ರಮ ನಡೆದಿದೆ, ವಿವಿಧತೆಯಲ್ಲಿ ಏಕತೆಯನ್ನು ಕಾಪಾಡಿ ಕೊಂಡಿದ್ದೇವೆ ಅದಕ್ಕೆ ಕಾರಣ ನಮ್ಮ ಸಂವಿಧಾನ. ಈ ಕಾರ್ಯಕ್ರಮ ಜನಸಾಮಾನ್ಯರಿಗೆ, ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವಂತಹ ಕಾರ್ಯಕ್ರಮವಾಗಿದೆ ಎಂದು ಹೇಳಿದರು.ಶ್ರೀ ಸಾಲುಮರದಮ್ಮನವರ ದೇವಸ್ಥಾನದಿಂದ ಬಯಲು ರಂಗ ಮಂದಿರದ ತನಕ ಸಂವಿಧಾನ ಜಾಗೃತಿ ಜಾಥಾ ರಥದ ಮೆರವಣಿಗೆ ಏರ್ಪಡಿಸಲಾಗಿತ್ತು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.ಪುರಸಭೆ ಅಧ್ಯಕ್ಷ ಪರಮೇಶ್, ಉಪಾದ್ಯಕ್ಷೆ ದಿವ್ಯ ರವಿ, ಪುರಸಭೆ ಸದಸ್ಯರು, ತಹಸೀಲ್ದಾರ್ ರಾಜೀವ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಗಣೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಗೋವಿಂದಪ್ಪ, ಸಿಡಿಪಿಒ ಚರಣ್ ರಾಜ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್, ಪುರಸಭೆ ಮುಖ್ಯಾಧಿಕಾರಿ ಎಚ್.ಪ್ರಶಾಂತ್, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

12ಕೆಟಿಆರ್.ಕೆ4ಃ

ತರೀಕೆರೆಯಲ್ಲಿ ಸಂವಿಧಾನ ಜಾಗೃತಿ ಜಾಥಾ ಉದ್ಘಾಟನೆಯನ್ನು ಶಾಸಕ ಜಿ.ಎಚ್.ಶ್ರೀನಿವಾಸ್ ನೆರವೇರಿಸಿದರು. ಪುರಸಭೆ ಅಧ್ಯಕ್ಷ ಪರಮೇಶ್, ಉಪಾಧ್ಯಕ್ಷೆ ದಿವ್ಯ ರವಿ, ಉಪವಿಭಾಗಾಧಿಕಾರಿ ಡಾ.ಕೆ.ಜಿ.ಕಾಂತರಾಜ್, ತಹಸೀಲ್ದಾರ್ ರಾಜೀವ್, ಇ.ಒ.ಗಣೇಶ್, ಪುರಸಭೆ ಮುಖ್ಯಾಧಿಕಾರಿ ಎಚ್.ಪ್ರಶಾಂತ್ ಮತ್ತಿತರರು ಇದ್ದಾರೆ.