ಸಾರಾಂಶ
ಚುನಾವಣೆಗೆ ನಿಯುಕ್ತಿಗೊಂಡ ಅಧಿಕಾರಿಗಳು, ಸಿಬ್ಬಂದಿ, ಪೊಲೀಸರು ಮತ್ತು ಡಿ ಗ್ರೂಪ್ ನೌಕರರು ತಮಗೆ ನಿಗದಿಪಡಿಸಲಾದ ಮತಗಟ್ಟೆಗೆ ಇವಿಎಂ, ಫಾರಂಗಳು, ಕಂಪಾರ್ಟ್ಮೆಂಟ್ ಹಾಗೂ ಸ್ಟೇಷನರಿಗಳ ಸಹಿತ ತೆರಳಿದರು.
ಕನ್ನಡಪ್ರಭ ವಾರ್ತೆ ಪುತ್ತೂರು
ಈ ಬಾರಿಯ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣಾ ತಯಾರಿ ಪ್ರಕ್ರಿಯೆ ಬಹುತೇಕ ಮುಕ್ತಾಯಗೊಂಡಿದ್ದು, ಗುರುವಾರ ಪುತ್ತೂರಿನ ವಿವೇಕಾನಂದ ಆಂಗ್ಲ ಮಾದ್ಯಮ ಶಾಲಾ ವಠಾರದಲ್ಲಿ ಸಹಾಯಕ ಚುನಾವಣಾಧಿಕಾರಿ, ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತ ಜುಬಿನ್ ಮೊಹಾಪಾತ್ರ ನೇತೃತ್ವದಲ್ಲಿ ಮಸ್ಟರಿಂಗ್ ಕಾರ್ಯ ನಡೆಯಿತು.ಬೆಳಗ್ಗೆ ೯ ಗಂಟೆಯಿಂದ ಮಧ್ಯಾಹ್ನ ೨ ಗಂಟೆ ತನಕ ಮಸ್ಟರಿಂಗ್ ನಡೆದು ಚುನಾವಣೆಗೆ ನಿಯುಕ್ತಿಗೊಂಡ ಅಧಿಕಾರಿಗಳು, ಸಿಬ್ಬಂದಿ, ಪೊಲೀಸರು ಮತ್ತು ಡಿ ಗ್ರೂಪ್ ನೌಕರರು ತಮಗೆ ನಿಗದಿಪಡಿಸಲಾದ ಮತಗಟ್ಟೆಗೆ ಇವಿಎಂ, ಫಾರಂಗಳು, ಕಂಪಾರ್ಟ್ಮೆಂಟ್ ಹಾಗೂ ಸ್ಟೇಷನರಿಗಳ ಸಹಿತ ತೆರಳಿದರು.
ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ೨೨೧ ಮತದಾನ ಕೇಂದ್ರಗಳಿದ್ದು, ಈ ಪೈಕಿ ೯ ಮತಗಟ್ಟೆಗಳು ಮಾದರಿ ಮತಗಟ್ಟೆಗಳಾಗಿವೆ. ಇದರಲ್ಲಿ ೫ ಸಖಿ, ೧ ವಿಶೇಷ ಚೇತನ, ೧ ಯುವಜನ, ೧ ಸಾಂಪ್ರದಾಯಿಕ ಮತ್ತು ೧ ಧ್ಯೇಯ ಆಧಾರಿತ ಮತಗಟ್ಟೆಗಳಿದ್ದು, ಈ ಮತಗಟ್ಟೆಗಳು ಶೃಂಗಾರಗಳೊಂದಿಗೆ ಸಿದ್ಧಗೊಂಡಿವೆ. ೨೧೬೬೭೫ ಮತದಾರರು: ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು ೨೧೬೬೭೫ ಮತದಾರರಿದ್ದು, ಇದರಲ್ಲಿ ೮೦ ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು ವಿಶೇಷ ಚೇತನರು, ಅಂಚೆಮತದಾರರು ಸೇರಿದಂತೆ ಒಟ್ಟು ೨೭೭೬ ಮಂದಿ ಈಗಾಗಲೇ ಮತದಾನ ಮಾಡಿದ್ದಾರೆ. ಉಳಿದಂತೆ ೨೧೩೮೯೮ ಮಂದಿ ನಾಳೆ ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಮತದಾನ ಮಾಡಲಿದ್ದಾರೆ.ಚುನಾವಣೆ ಪ್ರಕ್ರಿಯೆಯಲ್ಲಿ ಕಾರ್ಯನಿರ್ವಹಿಸಲು ತೆರಳುವ ಸಿಬಂದಿಗಳಿಗಾಗಿ ೫೪ ಖಾಸಗಿ ಬಸ್, ೧೩ ಜೀಪುಗಳ ವ್ಯವಸ್ಥೆ ಮಾಡಲಾಗಿದೆ.