ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಸ್ಟರಿಂಗ್‌ ಕಾರ್ಯ

| Published : Nov 13 2024, 12:03 AM IST

ಸಾರಾಂಶ

ಮತದಾನ ಕಾರ್ಯಕ್ಕೆ ಅಧಿಕಾರಿಗಳು ಹಾಗೂ ಸಿಬ್ಬಂದಿ ನಿಯೋಜನೆ ಮಾಡುವ ಮಸ್ಟರಿಂಗ್ ಕಾರ್ಯ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಜರುಗಿತು.

ಸಂಡೂರು: ವಿಧಾನಸಭೆ ಉಪ ಚುನಾವಣೆಗೆ ನ. ೧೩ ಬುಧವಾರ ಬೆಳಗ್ಗೆ ೭ರಿಂದ ಸಂಜೆ ೬ರ ವರೆಗೆ ಮತದಾನ ಜರುಗಲಿದ್ದು, ಮತಗಟ್ಟೆಗಳಿಗೆ ಮತದಾನ ಕಾರ್ಯಕ್ಕೆ ಅಧಿಕಾರಿಗಳು ಹಾಗೂ ಸಿಬ್ಬಂದಿ ನಿಯೋಜನೆ ಮಾಡುವ ಮಸ್ಟರಿಂಗ್ ಕಾರ್ಯ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಜರುಗಿತು.

ಚುನಾವಣಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ರಾಜೇಶ್ ಎಚ್‌.ಡಿ. ಮಸ್ಟರಿಂಗ್ ಕಾರ್ಯದ ಉಸ್ತುವಾರಿ ವಹಿಸಿದ್ದರು. ಚುನಾವಣೆ ಕಾರ್ಯ ಹಾಗೂ ಮತಗಟ್ಟೆಯ ಬಂದೋಬಸ್ತ್‌ಗಾಗಿ ನಿಯೋಜಿತಗೊಂಡಿರುವ ಪೋಲಿಸರು, ಗೃಹರಕ್ಷಕ ದಳದವರು ಆಗಮಿಸಿದ್ದರು. ಮತದಾನ ಪ್ರಕ್ರಿಯೆಗೆ ತೆರಳುವ ಅಧಿಕಾರಿ, ಸಿಬ್ಬಂದಿ ಹಾಗೂ ಪೊಲೀಸರನ್ನು ಆಯಾ ಗ್ರಾಮಗಳಲ್ಲಿನ ಮತಗಟ್ಟೆಗಳತ್ತ ತೆರಳುವಂತಹ ಮಾರ್ಗಗಳನ್ನು ಗುರುತಿಸಿ ಕರೆದುಕೊಂಡು ಹೋಗಲು ಬಸ್, ಕ್ರೂಸರ್ ಹಾಗೂ ಜೀಪ್‌ಗಳು ಕಾಲೇಜು ಮುಂಭಾಗದಲ್ಲಿ ಸಾಲಾಗಿ ಜಮಾವಣೆಗೊಂಡಿದ್ದವು.

ಕಾಲೇಜು ಆವರಣದಲ್ಲಿ ಅಧಿಕಾರಿ, ಸಿಬ್ಬಂದಿಗೆ ತಾವು ತೆರಳಬೇಕಿರುವ ಮತಗಟ್ಟೆಯ ವಿವರ ಹಾಗೂ ಬಸ್‌ಗಳ ವಿವರವನ್ನು ಧ್ವನಿವರ್ಧಕ ಮೂಲಕ ತಿಳಿಸುವ ವ್ಯವಸ್ಥೆ ಮಾಡಲಾಗಿತ್ತು. ಮಸ್ಟರಿಂಗ್ ಕಾರ್ಯಕ್ಕೆ ಆಗಮಿಸಿದ ಅಧಿಕಾರಿ, ಸಿಬ್ಬಂದಿ ಆರೋಗ್ಯದಲ್ಲಿ ವ್ಯತ್ಯಯ ಉಂಟಾದಲ್ಲಿ, ತ್ವರಿತ ಸ್ಪಂದನೆಗಾಗಿ, ವೈದ್ಯರಿಂದ ಆರೋಗ್ಯ ತಪಾಸಣೆ, ಅಗತ್ಯ ಔಷಧಿಗಳು, ಒಆರ್‌ಎಸ್, ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಲಾಗಿತ್ತು. ಮತಗಟ್ಟೆಗಳಿಗೆ ತೆರಳುವ ಅಧಿಕಾರಿಗಳಿಗೆ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು.

ಜಿಲ್ಲಾಧಿಕಾರಿಗಳಿಂದ ಪರಿಶೀಲನೆ

ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಮಸ್ಟರಿಂಗ್ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಯಾರೂ ಭಯಭೀತರಾಗದೇ ಚುನಾವಣಾ ಕಾರ್ಯ ಶಾಂತಿಯುತವಾಗಿ ಕೈಗೊಳ್ಳಬೇಕು. ಯಾವುದೇ ರೀತಿಯ ಗೊಂದಲ ಕಂಡುಬಂದಲ್ಲಿ ಸಂಬಂಧಿಸಿದ ಪಿಆರ್‌ಒಗಳ ಗಮನಕ್ಕೆ ತರಬೇಕು ಎಂದರು.

ಚುನಾವಣೆ ಆಯೋಗ ಕೈಪಿಡಿಯಲ್ಲಿನ ಚೆಕ್‌ಲಿಸ್ಟ್‌ನಂತೆಯೇ ಮತಗಟ್ಟೆಗಳಿಗೆ ತೆರಳುವ ಅಧಿಕಾರಿ ಹಾಗೂ ಸಿಬ್ಬಂದಿಗೆ ವಿದ್ಯುನ್ಮಾನ ಮತಯಂತ್ರ, ಮತದಾರ ಪಟ್ಟಿ, ಸ್ಪರ್ಧಿಸುತ್ತಿರುವ ಉಮೇದುವಾರರ ಪಟ್ಟಿ, ಶಾಯಿ ಸೇರಿದಂತೆ ಇತರ ಸ್ಟೇಷನರಿ ಕಿಟ್‌ಗಳನ್ನು ಚೆಕ್ ಲಿಸ್ಟ್‌ನ ಕ್ರಮದಲ್ಲಿ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶೋಭಾರಾಣಿ ವಿ.ಜೆ., ಜಿಪಂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರ, ಚುನಾವಣಾಧಿಕಾರಿ ರಾಜೇಶ್ ಎಚ್‌.ಡಿ. ಇದ್ದರು.

ಚುನಾವಣಾ ಕರ್ತವ್ಯದಲ್ಲಿದ್ದ ಪೊಲೀಸ್ ಪೇದೆ ಅಸ್ವಸ್ಥ

ಸಂಡೂರು: ಉಪ ಚುನಾವಣೆಯ ಕಾರ್ಯಕ್ಕೆ ನಿಯೋಜನೆಗೊಂಡಿದ್ದ ದೇವದುರ್ಗ ಠಾಣೆಯ ಪೊಲೀಸ್ ಪೇದೆ ಲಕ್ಷ್ಮಣ್ ಅವರು ಮಂಗಳವಾರ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮಸ್ಟರಿಂಗ್ ಕೇಂದ್ರದಲ್ಲಿ ಬಿಪಿ ಹೆಚ್ಚಾಗಿ ಅಸ್ವಸ್ಥಗೊಂಡಿದ್ದರು.

ಕೂಡಲೇ ಸ್ಥಳದಲ್ಲಿದ್ದ ಸರ್ಕಾರಿ ವೈದ್ಯರು ಪೇದೆಯ ಆರೋಗ್ಯ ತಪಾಸಣೆ ನಡೆಸಿ, ಆ್ಯಂಬುಲೆನ್ಸ್ ಮೂಲಕ ಸಂಡೂರಿನ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಿದರು. ಚಿಕಿತ್ಸೆಯ ನಂತರ ಲಕ್ಷ್ಮಣ ಅವರು ಚೇತರಿಸಿಕೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.