ಸಾರಾಂಶ
ಎಚ್.ಎನ್.ಪ್ರಸಾದ್
ಕನ್ನಡಪ್ರಭ ವಾರ್ತೆ ಹಲಗೂರುಪ್ರಸಿದ್ಧ ಪ್ರವಾಸಿಗರ ಪ್ರೇಕ್ಷಣಿ ಸ್ಥಳ, ಅಚ್ಚ ಹಸಿರಿನಿಂದ ಕೂಡಿರುವ ದಟ್ಟ ಅರಣ್ಯದಲ್ಲಿ ನೆಲೆಸಿರುವ ಆರಾಧ್ಯ ದೇವ ಮುತ್ತತ್ತಿರಾಯನ ಜಾತ್ರಾ ಮಹೋತ್ಸವ ಆ.19ರಿಂದ ನಾಲ್ಕು ದಿನಗಳ ಕಾಲ ನಡೆಯಲಿದ್ದು, ಸಿದ್ಧತೆಗಳು ನಡೆಯುತ್ತಿವೆ.
ಜಾತ್ರೆ ಹಿನ್ನೆಲೆಯಲ್ಲಿ ಮಂಗಳವಾರದಿಂದ ಶುಕ್ರವಾರದವರೆಗೆ ದಿನನಿತ್ಯ ಒಂದೊಂದು ವಿಶೇಷ ಕಾರ್ಯಕ್ರಮಗಳು ಜರುಗಲಿವೆ. ಮುತ್ತತ್ತಿ ಗ್ರಾಮದಲ್ಲಿ ನೆಲೆಸಿರುವ ಮುತ್ತತ್ತಿರಾಯನ ಭಕ್ತರು ರಾಜ್ಯಾದ್ಯಂತ ಇದ್ದು, ಭಾಗವಹಿಸಲಿದ್ದಾರೆ. ತೆತ್ರಾಯುಗದ ಪುರಾಣ ದೇವಸ್ಥಾನ ಆಂಜನೇಯ ಸ್ವಾಮಿ ಸನ್ನಿಧಿಯಲ್ಲಿ ಆ.19ರಂದು ಬೆಳಗ್ಗೆ ಉಪವಾಸ ಪೂಜೆ, ಮಧ್ಯಾಹ್ನದ ನಂತರ ಹಾಲರಿ ಸೇವೆ ಮತ್ತು ದೇವರ ಉತ್ಸವಗಳು ನಡೆಯಲಿವೆ.ಆ.20ರಂದು ದೊಡ್ಡ ಮುತ್ತತ್ತಿಯಲ್ಲಿ ಬಾಣಸಮುದ್ರ ಗ್ರಾಮಸ್ಥರಿಂದ ದೇವಾಲಯಕ್ಕೆ ಹಾಗೂ ರಥಕ್ಕೆ ವಿಶೇಷವಾಗಿ ವಿವಿಧ ಪುಷ್ಪಗಳಿಂದ ಅಲಂಕಾರ, ಭಕ್ತರಿಗೆ ಪ್ರಸಾದ ವಿನಿಯೋಗ, ಆ.21ರಂದು ಬೆಳಗ್ಗೆ ಆಂಜನೇಯ ಸ್ವಾಮಿ ಮೂರ್ತಿಯನ್ನು ಕಾವೇರಿ ನದಿಯಿಂದ ಶುದ್ಧ ನೀರನ್ನು ತಂದು ಶುಚಿಗೊಳಿಸಿ ಪಂಚಾಮೃತ ಹಾಗೂ ಹಾಲಿನ ಅಭಿಷೇಕಗಳನ್ನು ನಡೆಸಿದ ನಂತರ ದೇವರ ಮೂರ್ತಿಗೆ ವಿಶೇಷವಾಗಿ ಅಲಂಕಾರ, ಆವರಣವನ್ನು ವಿವಿಧ ಹಣ್ಣುಗಳು ಹಾಗೂ ತರಕಾರಿಗಳಿಂದ ಸಿಂಗರಿಸುವುದು ನಂತರ ಸ್ವಾಮಿಯ ದಿವ್ಯ ರಥೋತ್ಸವನ್ನು ದೇವಸ್ಥಾನದ ಸುತ್ತ ಜರುಗಲಿದೆ.
ಮಧ್ಯಾಹ್ನ ಹಾಲರಿ ಸೇವೆಯಲ್ಲಿ ಮಡಿಕೆಗೆ ದಾರಗಳಿಂದ ಕಟ್ಟಿ ಅದರ ಒಳಗೆ ಮೊಸರು ಹಾಲು ಹಾಕಿ ಅದನ್ನು ದೇವಸ್ಥಾನ ದಲ್ಲಿ ಪೂಜೆ ಸಲ್ಲಿಸಿ ಅರ್ಚಕರು ದೇವಸ್ಥಾನದ ಆವರಣದ ರಳಿ ಮರದ ಮೇಲೆ ಹತ್ತಿ ಮಡಕೆಯನ್ನು ಮರದ ಮೇಲಿಂದ ಕೆಳಗೆ ಬಿಟ್ಟು ಜೋಕಾಲಿ ಆಡುಸುತ್ತಾರೆ. ಈ ವೇಳೆ ಅರಕೆ ಹೊತ್ತವರು ಮತ್ತು ಭಕ್ತರು ಬಿದಿರು ಕೋಲಿನಿಂದ ಆ ಮಡಿಕೆಯನ್ನು ಒಡೆದು ಮೊಸರು ಚೆಲ್ಲುವ ಸೇವೆ. ಅರ್ಚಕರು ಅವರಿಗೆ ಮಡಕೆ ಸಿಗದಂತೆ ಅತ್ತಿಂದ ಇತ್ತ ತೂಗುಯ್ಯಾಲೆ ಆಡಿಸುತ್ತಾರೆ. ಈ ವೇಳೆ ಸಾವಿರಾರು ಭಕ್ತರು ಪಾಲ್ಗೊಳ್ಳಲಿದ್ದಾರೆ.ನಂತರ ಅರ್ಚಕರು ತೆಂಗಿನಕಾಯಿಯನ್ನು ಹಗ್ಗದಿಂದ ಕಟ್ಟಿ ನೆಲದ ಮೇಲೆ ಎಸೆಯುತ್ತಾರೆ. ಜಾಂಬವ ಜನಾಂಗದವರು ಕಾಯಿಯನ್ನು ಚೂಪಾದ ಬಿದರ ಕೋಲಿನಿಂದ ಚುಚ್ಚಿ ಸುಲಿಯುವುದು ಒಂದು ವಿಶೇಷವಾಗಿದೆ. ಸಂಜೆ ಎನ್.ಕೂಡಹಳ್ಳಿ ಗ್ರಾಮಸ್ಥರಿಂದ ಹುಲಿವಾಹನ ಸೇವೆ, ಹುಣಸನಹಳ್ಳಿ ಗ್ರಾಮಸ್ಥರಿಂದ ರಾತ್ರಿ ದೇವರ ಪಲ್ಲಕಿ ಉತ್ಸವ ಹಾಗೂ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ನಡೆಯಲಿದೆ.
ಆ.22ರ ಶುಕ್ರವಾರ ಹಲಗೂರು ಪೊಲೀಸ್ ಠಾಣೆ ಸಿಬ್ಬಂದಿ ವತಿಯಿಂದ ಪೂಜಾ ಕಾರ್ಯಕ್ರಮದೊಂದಿಗೆ ಜಾತ್ರಾ ಮಹೋತ್ಸವ ಮುಕ್ತಾಯವಾಗಲಿದೆ.