ಡಾ.ನಿರ್ಮಲಾನಂದನಾಥ ಶ್ರೀಗಳಿಗೆ ಮುತ್ತಿನ ಪಾಲಕ್ಕಿ ಉತ್ಸವ, ತೆಪ್ಪೋತ್ಸವ

| Published : Sep 25 2024, 12:55 AM IST

ಸಾರಾಂಶ

ಬಗೆ ಬಗೆಯ ಹೂವು ಮತ್ತು ವಿದ್ಯುತ್‌ ದೀಪಗಳಿಂದ ಸಿಂಗರಿಸಿದ್ದ ತೆಪ್ಪೋತ್ಸವದ ಒಂದು ಬದಿಯಲ್ಲಿ ಭೈರವೈಕ್ಯ ಬಾಲಗಂಗಾಧರನಾಥ ಶ್ರೀಗಳ ಪುತ್ಥಳಿ ಮತ್ತೊಂದು ಬದಿಯಲ್ಲಿ ಶ್ರೀಕಾಲಭೈರವೇಶ್ವರ, ಮಾಳಮ್ಮದೇವಿ ಮತ್ತು ಚೌಡೇಶ್ವರಿದೇವಿಯ ಮೂರ್ತಿಯನ್ನಿರಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ನಾಗಮಂಗಲ

ತಾಲೂಕಿನ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದಲ್ಲಿ ಮಂಗಳವಾರ ಸಂಜೆ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥಶ್ರೀ ಗಳಿಗೆ ನಡೆದ ಮುತ್ತಿನ ಪಾಲಕ್ಕಿ ಉತ್ಸವ ಮತ್ತು ಶ್ರೀಕಾಲಭೈರವೇಶ್ವರಸ್ವಾಮಿ ಪುಷ್ಕರಣಿಯಲ್ಲಿ ನಡೆದ ತೆಪ್ಪೋತ್ಸವವನ್ನು ಅಪಾರ ಸಂಖ್ಯೆಯ ಭಕ್ತರು ವೀಕ್ಷಿಸಿ ಕಣ್ತುಂಬಿಕೊಂಡರು.

ಮೂರು ದಿನಗಳ ಕಾಲ ನಡೆಯುವ ರಾಜ್ಯ ಮಟ್ಟದ 45 ನೇ ಜಾನಪದ ಕಲಾ ಮೇಳ, ಚುಂಚಶ್ರೀ ಪ್ರಶಸ್ತಿ ಪ್ರದಾನ ಹಾಗೂ ಭೈರವೈಕ್ಯ ಡಾ.ಬಾಲಗಂಗಾಧರನಾಥ ಶ್ರೀಗಳ ಗುರುಸಂಸ್ಮರಣೋತ್ಸವದಲ್ಲಿ ತೆಪ್ಪೋತ್ಸವಕ್ಕೂ ಮುನ್ನ ನಿರ್ಮಲಾನಂದನಾಥ ಶ್ರೀಗಳನ್ನು ಸರ್ವಾಲಂಕೃತ ಮುತ್ತಿನ ಪಾಲಕ್ಕಿಯಲ್ಲಿ ಕೂರಿಸಿದರು.

ನಂತರ ಕ್ಷೇತ್ರದ ರಥದ ಬೀದಿಯ ಜೋಡಿರಸ್ತೆಯಿಂದ ಶ್ರೀಕಾಲಭೈರವೇಶ್ವರಸ್ವಾಮಿ ಪುಷ್ಕರಣಿವರೆಗೆ ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ್ದ ಹತ್ತಾರು ಬಗೆಯ ಜಾನಪದ ಕಲಾತಂಡಗಳು ಮತ್ತು ಮಂಗಳವಾದ್ಯದೊಂದಿಗೆ ಮೆರವಣಿಗೆ ಮೂಲಕ ಕರೆತರಲಾಯಿತು.

ಬಗೆ ಬಗೆಯ ಹೂವು ಮತ್ತು ವಿದ್ಯುತ್‌ ದೀಪಗಳಿಂದ ಸಿಂಗರಿಸಿದ್ದ ತೆಪ್ಪೋತ್ಸವದ ಒಂದು ಬದಿಯಲ್ಲಿ ಭೈರವೈಕ್ಯ ಬಾಲಗಂಗಾಧರನಾಥ ಶ್ರೀಗಳ ಪುತ್ಥಳಿ ಮತ್ತೊಂದು ಬದಿಯಲ್ಲಿ ಶ್ರೀಕಾಲಭೈರವೇಶ್ವರ, ಮಾಳಮ್ಮದೇವಿ ಮತ್ತು ಚೌಡೇಶ್ವರಿದೇವಿಯ ಮೂರ್ತಿಯನ್ನಿರಿಸಲಾಗಿತ್ತು.

ಪೂಜೆ ಸಲ್ಲಿಸಿ ತೆಪ್ಪದಲ್ಲಿ ಕುಳಿತ ನಿರ್ಮಲಾನಂದನಾಥಶ್ರೀಗಳು ನೆರೆದಿದ್ದ ಭಕ್ತಾದಿಗಳಿಗೆ ದರ್ಶನಾಶೀರ್ವಾದ ನೀಡಿದರು. ಚಿನ್ನದ ಕಿರೀಟ ಧರಿಸಿ ಸರ್ವಾಲಂಕಾರ ಭೂಷಿತರಾಗಿ ತೆಪ್ಪೋತ್ಸವದಲ್ಲಿ ಕುಳಿತ್ತಿದ್ದ ಶ್ರೀಗಳನ್ನು ನೋಡಿ ಕಣ್ತುಂಬಿಕೊಂಡ ಭಕ್ತರು ತಮ್ಮ ಭಕ್ತಿಭಾವ ಸಮರ್ಪಿಸಿದರು.

ತೆಪ್ಪೋತ್ಸವ ಆರಂಭಗೊಂಡು ಮುಕ್ತಾಯದವರೆಗೂ ಬಣ್ಣ ಬಣ್ಣದ ಪಟಾಕಿಗಳು ಸಿಡಿದು ಬಾನಂಗಳದಲ್ಲಿ ಚಿತ್ತಾರಗಳು ಬಿಡಿಸಿದವು. ವಿದ್ಯುತ್ ದೀಪಾಲಂಕಾರಗಳಿಂದ ಕಂಗೊಳಿಸುತ್ತಿದ್ದ ಆದಿಚುಂಚನಗಿರಿ ಮಹಾಸಂಸ್ಥಾನಮಠ ನೆರೆದಿದ್ದ ಜನಪದ ಕಲಾವಿದರು ಮತ್ತು ಭಕ್ತರಿಗೆ ವಿಶೇಷ ಮೆರಗು ನೀಡಿತ್ತು.

ಈ ವೇಳೆ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ ಸೇರಿದಂತೆ ವಿವಿಧ ಶಾಖಾ ಮಠಗಳ ಶ್ರೀಗಳು ಮತ್ತು ಸಹಸ್ರಾರು ಸಂಖ್ಯೆಯ ಭಕ್ತರು ಇದ್ದರು.