ಮಳವಳ್ಳಿ: ತಾಲೂಕಿನ ಅಂಚೆದೊಡ್ಡಿ ಗ್ರಾಮದಲ್ಲಿ ಇತಿಹಾಸ ಪ್ರಸಿದ್ಧ ಮುತ್ತುರಾಯಸ್ವಾಮಿ ಪರ ಹಾಗೂ ಪೂಜಾ ಮಹೋತ್ಸವವು ಏಳು ವರ್ಷಗಳ ನಂತರ ಜು.25ರಂದು ಮಳವಳ್ಳಿ, ಹೊನ್ನಾಯಕಹಳ್ಳಿ ಮಂಟೇಸ್ವಾಮಿ ಹಾಗೂ ಕಪ್ಪಡಿ ರಾಚಪ್ಪಾಜಿ ಮಠದ ಮಠಾಧಿಪತಿ ವರ್ಚಸ್ವಿ ಎಂ.ಎಲ್.ಸಿದ್ದಲಿಂಗರಾಜೇ ಅರಸು ಅವರ ದಿವ್ಯ ಸಾನ್ನಿಧ್ಯದಲ್ಲಿ ವಿಜೃಂಭಣೆ ಹಾಗೂ ವಿಧಿವಿಧಾನಗಳಿಂದ ನೆರವೇರಲಿದೆ. ಗುರುಮಠದ ಸಿದ್ದರಾಮಾರಾಧ್ಯ, ನಾಗಭೂಷಣ ಆರಾಧ್ಯ, ಅರ್ಚಕ ತಿಬ್ಬಾದೇವಿ ಅವರ ನೇತೃತ್ವದಲ್ಲಿ ಮುತ್ತುರಾಯಸ್ವಾಮಿ ದೇವರಿಗೆ ಹೋಮ ಹವನ ಸೇರಿದಂತೆ ಧಾರ್ಮಿಕ ಪೂಜಾ ಕೈಂಕರ್ಯಗಳನ್ನು ಹಮ್ಮಿಕೊಳ್ಳಲಾಗಿದೆ. ಈಗಾಗಲೇ ಸ್ವಾಮಿಯ ಸೇವೆ ಅಂಗವಾಗಿ ರಾಮನ ದಂಡು ಸಂಪ್ರದಾಯಬದ್ಧ ಪೂಜಾ ಕೈಂಕರ್ಯಗಳನ್ನು ವಿಧ್ಯುಕ್ತವಾಗಿ ಚಾಲನೆ ನೀಡಲಾಗಿದೆ. ಜು.25ರ ಬೆಳಗ್ಗೆ 12ರಿಂದ ನಿರಂತರ ಬೃಹತ್ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಮಳವಳ್ಳಿ ಮಠದ ಮಂಟೇಸ್ವಾಮಿ ಬಸವಪ್ಪ, ಆದಿಹೊನ್ನನಾಯಕನಹಳ್ಳಿ ಮಂಟೇಸ್ವಾಮಿ ಬಸವಪ್ಪ, ಕರಡಕೆರೆ ಹನುಮಂತರಾಯಸ್ವಾಮಿ ಬಸಪ್ಪ, ಗಾಜನೂರು ದೊಡ್ಡಬಸವೇಶ್ವರ ಬಸವಪ್ಪ, ಕಂದೇಗಾಲ ಮತ್ತಿತಾಳೇಶ್ವರ ಬಸವಪ್ಪ ಕಂದೇಗಾಲ ಬಸವಪ್ಪಗಳ ಹೂವು ಹೊಂಬಾಳೆ ಹಾಗೂ ವಿವಿಧ ದೇವರ ಮೆರವಣಿಗೆ ಜೊತೆಗೆ ವಿಶೇಷ ಪೂಜಾ ಕುಣಿತ ಕಾರ್ಯಕ್ರಮಗಳು ಜರುಗಲಿವೆ. ಮುತ್ತುರಾಯ ಸೇವೆ ಅಂಗವಾಗಿ ಮಧುವಣಗಿತ್ತಿಯಂತೆ ಗ್ರಾಮವನ್ನು ವಿದ್ಯುತ್ ದೀಪಗಳಿಂದ ಆಲಂಕರಿಸಲಾಗಿದೆ. ವಿವಿಧ ಗ್ರಾಮಗಳಿಂದ ಅನ್ನಸಂತರ್ಪಣೆಗೆ ಬೇಕಾದ ಸಾಮಗ್ರಿಗಳನ್ನು ಸಂಗ್ರಹಿಸುವುದರ ಜೊತೆಗೆ ಮಹೋತ್ಸವದ ಯಶಸ್ವಿಗೆ ಆಗತ್ಯ ಪೂರ್ವಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಅನ್ನಸಂತರ್ಪಣೆಯಲ್ಲಿ ಸಾವಿರಾರು ಭಕ್ತರು ಆಗಮಿಸಲಿದ್ದಾರೆ ಎಂದು ದೇವಸ್ಥಾನದ ಆಡಳಿತ ಸಮಿತಿ ಮುಖಂಡರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.