ವರ್ಷ ಸಮೀಪಿಸಿದರೂ ಕಂಪನಿ ತೆರೆಯಲು ಮರಳಿ ಬಾರದ ಮುರಳೀಧರನ್‌!

| Published : Jun 17 2024, 01:33 AM IST

ಸಾರಾಂಶ

ಬ್ರೇವರೇಜ್ ಮತ್ತು ತಂಪು ಪಾನೀಯ ಉದ್ಯಮದಲ್ಲಿ ತೊಡಗಿಕೊಂಡಿರುವ ವಿಶ್ವವಿಖ್ಯಾತ ಸ್ಪಿನ್ ಬೌಲಿಂಗ್ ಮಾಂತ್ರಿಕ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ಧಾರವಾಡದಲ್ಲಿ ಜಮೀನು ಗುರುತಿಸಿದ ಹೋದವರು ಈ ವರೆಗೂ ಮರಳಿ ಬಂದಿಲ್ಲ.

ಬಸವರಾಜ ಹಿರೇಮಠ

ಧಾರವಾಡ: ಬ್ರೇವರೇಜ್ ಮತ್ತು ತಂಪು ಪಾನೀಯ ಉದ್ಯಮದಲ್ಲಿ ತೊಡಗಿಕೊಂಡಿರುವ ವಿಶ್ವವಿಖ್ಯಾತ ಸ್ಪಿನ್ ಬೌಲಿಂಗ್ ಮಾಂತ್ರಿಕ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ಧಾರವಾಡದಲ್ಲಿ ತಮ್ಮ ಉದ್ಯಮ ವಿಸ್ತರಿಸಲಿದ್ದಾರೆ ಎಂದು ವರ್ಷದ ಹಿಂದಷ್ಟೇ ದೊಡ್ಡ ಸುದ್ದಿಯಾಗಿತ್ತು. ಆದರೆ, ಅವರು ಧಾರವಾಡಕ್ಕೆ ಬಂದು ಜಮೀನು ಗುರುತಿಸಿ ಹೋಗಿ ವರ್ಷ ಸಮೀಪಿಸಿದರೂ ಈ ವರೆಗೂ ಯಾವುದೇ ಪ್ರಕ್ರಿಯೆ ನಡೆಯದೇ ಇರುವುದು ವಿಪರ್ಯಾಸದ ಸಂಗತಿ.

ಸಮೀಪದ ಮುಮ್ಮಿಗಟ್ಟಿ ಕೈಗಾರಿಕಾ ಪ್ರದೇಶದ ಬಳಿ ರಾಜ್ಯ ಸರ್ಕಾರ ನಿಗದಿ ಮಾಡಿರುವ ಎಫ್ಎಂಸಿಜಿ ಪ್ರದೇಶದಲ್ಲಿ ಮುತ್ತಯ್ಯ ಮುರಳೀಧರನ್ ಹೊಸ ಕಂಪನಿ ಆರಂಭಿಸಲು ಮುಂದಾಗಿದ್ದರು. ಎಲ್ಲವೂ ಯೋಜನೆ ಪ್ರಕಾರ ನಡೆದಿದ್ದರೆ ಇಷ್ಟೊತ್ತಿಗೆ ಉದ್ಯಮ ಸ್ಥಾಪನೆಯ ಕಾರ್ಯಗಳಾಗಬೇಕಿತ್ತು. ಆದರೆ, ಜಾಗ ನೋಡಿ ಹೋದ ಬಳಿಕ ಮುತ್ತಯ್ಯ ಲೀಜ್ ಡೀಡ್ ಸೇರಿದಂತೆ ಯಾವೊಂದು ಪ್ರಕ್ರಿಯೆಗೂ ಉತ್ಸುಕತೆ ತೋರಿಲ್ಲ. ಸದ್ಯದ ಪರಿಸ್ಥಿತಿ ಗಮನಿಸಿದರೆ ಮುತ್ತಯ್ಯ ಅವರು ಧಾರವಾಡದಲ್ಲಿ ಉದ್ಯಮ ಸ್ಥಾಪನೆ ಮಾಡಲು ಹಿಂದೇಟು ಹಾಕಿದ್ದಾರೆಯೇ ಎಂಬ ಅನುಮಾನ ಶುರುವಾಗಿದೆ. ಭೂಮಿ ಬೆಲೆ ಏರಿಕೆ ಸೇರಿದಂತೆ ಹಲವು ಕಾರಣಗಳಿಂದ ಅವರು ಹಿಂದೇಟು ಹಾಕಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಮೆ. ಸಿಲೋನ್ ಬ್ರೇವರೇಜ್ ಕ್ಯಾನ್ ಪ್ರೈವೇಟ್ ಲಿಮಿಟೆಡ್ ಶ್ರೀಲಂಕಾದ ಕಂಪನಿಯಾಗಿದ್ದು, ಮುತ್ತಯ್ಯ ಮುರಳೀಧರ್ ಇದರ ಮಾಲೀಕರು. ಈ ಸಂಸ್ಥೆ ಅಲ್ಯುಮಿನಿಯಂ ಕ್ಯಾನ್ ತಯಾರಿಕೆ ಮತ್ತು ಪಾನೀಯ ತಯಾರಿಸುವ ಉದ್ಯಮವಾಗಿದೆ. ಒಟ್ಟು 26 ಎಕರೆ ಸ್ಥಳಾವಕಾಶ ನೀಡುವಂತೆ ಮುರುಳೀಧರನ್ ಕಂಪನಿ ರಾಜ್ಯ ಸರ್ಕಾರಕ್ಕೆ ಕೋರಿತ್ತು. ಈ ಉದ್ದಿಮೆ ಮೊದಲ ಹಂತದಲ್ಲಿ ₹446 ಕೋಟಿ ಬಂಡವಾಳದ್ದಾಗಿದ್ದು, 500 ಜನರಿಗೆ ಉದ್ಯೋಗಾವಕಾಶ ನೀಡಲಿದೆ ಎಂದು ತಿಳಿದು ಬಂದಿತ್ತು.

ಮೊದಲ ಹಂತದಲ್ಲಿ 15 ಎಕರೆಗೆ ಸಂಬಂಧಿಸಿದ ಲೀಜ್ ಡೀಡ್ ಕೂಡ ನಡೆಯಬೇಕಿತ್ತು. ಆದರೆ ಈ ವರೆಗೂ ಯಾವುದೂ ಆಗಿಲ್ಲ. ಇದಕ್ಕೆ ಕಾರಣ ರಾಜ್ಯ ಸರ್ಕಾರ ಜಮೀನಿನ ಬೆಲೆಯನ್ನು ಏರಿಕೆ ಮಾಡಿದ್ದು ಎಂಬ ಮಹತ್ವದ ಕಾರಣವಿದೆ. ಜತೆಗೆ ಈಗ ಗ್ಯಾರಂಟಿ ಯೋಜನೆಗಳಿಗೆ ರಾಜ್ಯ ಸರ್ಕಾರ ಈ ರೀತಿ ಬೇಕಾಬಿಟ್ಟಿ ದರ ಹೆಚ್ಚಿಸಿದೆ ಎನ್ನುವುದು ಬಿಜೆಪಿ ಮುಖಂಡರ ಆರೋಪ. ಈ ಮಧ್ಯೆ ಈ ಕಂಪನಿಗೆ ಹೆಚ್ಚಿನ ಪ್ರಮಾಣದ ನೀರು ಬೇಕಾಗುತ್ತಿದ್ದು ಅದನ್ನು ಒದಗಿಸಲು ಕಷ್ಟಸಾಧ್ಯ ಎಂಬ ಮಾತುಗಳು ಕೇಳಿ ಬಂದಿದ್ದವು.

ಮುತ್ತಯ್ಯ ಮುರಳೀಧರನ್ ಮಾತ್ರವಲ್ಲ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಈ ಎಫ್ಎಂಸಿಜಿ ಘಟಕದಲ್ಲಿ ಹೂಡಿಕೆ ಮಾಡಲು ಮುಂದೆ ಬಂದಿದ್ದ ಅನೇಕ ಉದ್ಯಮಿಗಳು ಈಗ ಹಿಂದೇಟು ಹಾಕಿದ್ದಾರೆ. ಹಿಂದಿನ ಸರ್ಕಾರದ ಅವಧಿಯಲ್ಲಿ ನಿಗದಿ ಮಾಡಲಾಗಿದ್ದ ಜಮೀನು ದರ ಈಗಿನ ಕಾಂಗ್ರೆಸ್ ಸರ್ಕಾರ ಏರಿಕೆ ಮಾಡಿದ್ದು ಮುಖ್ಯ ಕಾರಣ ಎನ್ನಲಾಗುತ್ತಿದೆ. ಒಟ್ಟು 590 ಎಕರೆ ಜಮೀನು ಇರುವ ಈ ಝೋನ್‌ನಲ್ಲಿ ಪ್ರತಿ ಎಕರೆಗೆ ಎಕರೆಗೆ ₹95 ಲಕ್ಷ ನಿಗದಿ ಮಾಡಲಾಗಿತ್ತು. ಆದರೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಈ ದರವನ್ನು ₹1.39 ಕೋಟಿ ವರೆಗೆ ಏರಿಸಿದೆ. ಇದೇ ಕಾರಣಕ್ಕೆ ಮುತ್ತಯ್ಯ ಕೂಡ ಜಮೀನು ನೋಡಿ ಹೋದವರು ಮರಳಿ ಮುಂದಿನ ಪ್ರಕ್ರಿಯೆಗಾಗಿ ಬಂದಿಲ್ಲ ಎಂದು ಬಿಜೆಪಿ ಮುಖಂಡ, ಕೈಗಾರಿಕೋದ್ಯಮಿ ರಾಜು ಪಾಟೀಲ ಹೇಳುತ್ತಾರೆ.

ಮುತ್ತಯ್ಯ ಮುರಳೀಧರನ್ ಮಾಲೀಕತ್ವದ ಅಂತಾರಾಷ್ಟ್ರೀಯ ಕಂಪನಿಯೊಂದು ಧಾರವಾಡಕ್ಕೆ ಬರುತ್ತಿದೆ ಎನ್ನುವ ಸುದ್ದಿ ಈ ಭಾಗದಲ್ಲಿ ಒಂದಷ್ಟು ಹೊಸ ಭರವಸೆಗಳನ್ನು ಮೂಡಿಸಿತ್ತು. ಅನೇಕರು ನಮ್ಮ ಭಾಗದ ಒಂದಿಷ್ಟು ನಿರುದ್ಯೋಗ ದೂರವಾಗುತ್ತದೆ ಎಂದು ಅಂದಾಜು ಹಾಕಲಾಗಿತ್ತು. ಆದರೆ ಕಂಪನಿ ಸ್ಥಾಪನೆ ಸಂಬಂಧಿತ ಯಾವುದೇ ಪ್ರಕ್ರಿಯೆ ನಡೆದಿಲ್ಲ. ಒಟ್ಟಿನಲ್ಲಿ ಸರ್ಕಾರಗಳು ಬದಲಾದಾಗ ವಿವಿಧ ರೀತಿಯ ನೀತಿಗಳು ಬದಲಾಗುತ್ತಿದ್ದು, ಇದರಿಂದ ಕೈಗಾರಿಕೋದ್ಯಮಗಳ ಮೇಲೆ ಪರಿಣಾಮ ಬೀರುತ್ತವೆ ಎನ್ನುವುದಕ್ಕೆ ಇದು ಉತ್ತಮ ಉದಾಹರಣೆ ಎನ್ನಬಹುದು.

ಈಗಲೂ ಆರಂಭಿಸಬಹುದು: ಭೂಮಿಯ ಅದರಲ್ಲೂ ಕೈಗಾರಿಕೆಯ ಭೂಮಿ ಬೆಲೆ ಏರಿಕೆಯಾಗಿದೆ. ಕಾಲಕ್ಕೆ ತಕ್ಕಂತೆ ಏರಿಕೆಯಾದ ಬೆಲೆಯನ್ನು ಯಾರಾದರೂ ನೀಡಬೇಕು. ಅವರಿಗೊಂದು, ಇವರಿಗೊಂದು ಬೆಲೆ ನೀಡಲು ಸಾಧ್ಯವಿಲ್ಲ. ಮುತ್ತಯ್ಯ ಮುರಳೀಧರನ್‌ ಅವರಿಗೆ ಬೇಕಾದ ಭೂಮಿ ನೀಡಲು ಸರ್ಕಾರ ಸಿದ್ಧವಿದ್ದು, ನಿಯಮಾವಳಿ ಪ್ರಕಾರ ಅವರು ಈಗಲೂ ಪಡೆದು ಕಂಪನಿ ಶುರು ಮಾಡಬಹುದು ಎಂದು ಈಚೆಗೆ ಧಾರವಾಡಕ್ಕೆ ಆಗಮಿಸಿದ ರಾಜ್ಯ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.